ಹೈದರಾಬಾದ್: ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) (Tirupti Temple) ಆಂಧ್ರಪ್ರದೇಶ ಸರ್ಕಾರವು ತಿರುಮಲ ದೇವಸ್ಥಾನದ ಪಕ್ಕದಲ್ಲಿರುವ ಅಲಿಪಿರಿ ಪ್ರದೇಶದಲ್ಲಿ ಮುಮ್ತಾಜ್ ಹೋಟೆಲ್‌ಗೆ ನೀಡಲಾದ 20 ಎಕರೆ ಭೂಮಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಿತ್ತು. ಇದೀಗ ತಿರುಪತಿ ಗ್ರಾಮೀಣ ಪ್ರದೇಶಕ್ಕೆ ಒಬೆರಾಯ್ ಗ್ರೂಪ್‌ನ ವಿವಾದಾತ್ಮಕ 'ಮುಮ್ತಾಜ್ ಹೋಟೆಲ್' ಯೋಜನೆಯನ್ನು ಸ್ಥಳಾಂತರಿಸಲು ಆಂಧ್ರಪ್ರದೇಶ ಸಚಿವ ಸಂಪುಟ ಅನುಮೋದನೆ ನೀಡಿದೆ. ಪವಿತ್ರ ತಿರುಮಲ ಬೆಟ್ಟಗಳ ಬಳಿ ಯೋಜನೆಯ ಸ್ಥಳದ ಬಗ್ಗೆ ಭಕ್ತರು, ಧಾರ್ಮಿಕ ಮುಖಂಡರು ಮತ್ತು ಸ್ಥಳೀಯರಿಂದ ಬಂದ ನಿರಂತರ ವಿರೋಧದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
2021 ರಲ್ಲಿ ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಪ್ರವಾಸೋದ್ಯಮ ನೀತಿಯಡಿಯಲ್ಲಿ 20 ಎಕರೆ ಭೂಮಿಯನ್ನು ನೀಡಲಾಗಿದ್ದ ಒಬೆರಾಯ್ ಗ್ರೂಪ್‌ಗೆ ಈಗ ತಿರುಪತಿ ಗ್ರಾಮೀಣ ಮಂಡಲದ ಪೆರೂರು ಗ್ರಾಮದಲ್ಲಿ 38 ಎಕರೆ ಪರ್ಯಾಯ ಭೂಮಿ ಸಿಗಲಿದೆ. ತಿರುಪತಿ ಆರ್‌ಎಸ್ ಗ್ರಾಮದಲ್ಲಿ ಟಿಟಿಡಿ ಆವರಣದೊಳಗೆ ಮೂಲತಃ ಹಂಚಿಕೆಯಾಗಿದ್ದ 25 ಎಕರೆ ಭೂಮಿಗೆ ಬದಲಾಗಿ ಈ ಭೂಮಿಯ ಹಂಚಿಕೆಯನ್ನು ಮಾಡಲಾಗುತ್ತದೆ. ಮೂಲ ಹಂಚಿಕೆಯನ್ನು ರದ್ದುಗೊಳಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಮತ್ತು ಔಪಚಾರಿಕ ಭೂ ವಿನಿಮಯ ಪತ್ರವನ್ನು ಕಾರ್ಯಗತಗೊಳಿಸಲು ಅಧಿಕಾರ ನೀಡಲಾಗಿದೆ.
ಪೆರೂರಿನಲ್ಲಿರುವ 38 ಎಕರೆ ಭೂಮಿಯನ್ನು 2012 ರಲ್ಲಿ ವೈಷ್ಣವಿ ಇನ್ಫ್ರಾ ವೆಂಚರ್ಸ್ & ರೆಸಾರ್ಟ್ಸ್ ಲಿಮಿಟೆಡ್‌ಗೆ "ಟೆಂಪಲ್ಸ್ ಆಫ್ ಇಂಡಿಯಾ" ಥೀಮ್ ಪಾರ್ಕ್‌ಗಾಗಿ ಹಂಚಿಕೆ ಮಾಡಲಾಗಿತ್ತು. ಇದರಲ್ಲಿ 30.32 ಎಕರೆ ಭೂಮಿಯನ್ನು ಹಸ್ತಾಂತರಿಸಲಾಯಿತು ಮತ್ತು 2021 ರಲ್ಲಿ ಆ ಭೂಮಿಯಲ್ಲಿ 20 ಎಕರೆ ಭೂಮಿಯನ್ನು ಒಬೆರಾಯ್ ಗ್ರೂಪ್‌ನ ರೆಸಾರ್ಟ್ ಯೋಜನೆಗೆ ಮೀಸಲಿಡಲಾಗಿತ್ತು. ಈ ಯೋಜನೆಯು ಪವಿತ್ರ ಅಲಿಪಿರಿ ಶ್ರೀವರಿ ಪಡಲು ಪ್ರದೇಶಕ್ಕೆ ಹತ್ತಿರವಾಗಿರುವುದರಿಂದ ಈ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಫೆಬ್ರವರಿ 2025 ರಲ್ಲಿ, ರೆಸಾರ್ಟ್ ಯೋಜನೆಯನ್ನು ತಕ್ಷಣವೇ ರದ್ದುಗೊಳಿಸುವಂತೆ ಒತ್ತಾಯಿಸಿ ಸಾಧುಗಳು ಮತ್ತು ದೇವಾಲಯದ ಅರ್ಚಕರು ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದರು.
ಈ ಸುದ್ದಿಯನ್ನೂ ಓದಿ: Tirupati Temple: 3 ಕೋಟಿ ರೂ. ಹೆಚ್ಚು ಮೌಲ್ಯದ ಆಸ್ತಿಯನ್ನು ತಿರುಪತಿ ತಿಮ್ಮಪ್ಪನಿಗೆ ದಾನ ನೀಡಿದ ನಿವೃತ್ತ ಐಆರ್‌ಎಸ್ ಅಧಿಕಾರಿ
ಪ್ರತಿಭಟನೆ ಜೋರಾದ ಬೆನ್ನಲ್ಲೇ ಮಾರ್ಚ್‌ನಲ್ಲಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು, ಮುಮ್ತಾಜ್ ಹೋಟೆಲ್‌ಗೆ ಸಂಬಂಧಿಸಿದ ಎಲ್ಲಾ ಟೆಂಡರ್‌ಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದರು ಮತ್ತು "ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ಭೂಮಿಯನ್ನು ಖಾಸಗೀಕರಣಕ್ಕೆ ಬಳಸಲಾಗುವುದಿಲ್ಲ" ಎಂದು ಘೋಷಿಸಿದ್ದರು. ಪವಿತ್ರ ಸ್ಥಳದಲ್ಲಿ ಯಾವುದೇ ಖಾಸಗಿ ಸಂಸ್ಥೆಗಳಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ನಾಯ್ಡು ಭರವಸೆ ನೀಡಿದ್ದರು.