Elephant Mahadevi: ಸರಪಳಿಯಲ್ಲಿ ಬಂಧನ.. ಬೀದಿಯಲ್ಲಿ ಭಿಕ್ಷಾಟನೆ.. ಬದುಕಿನುದ್ದಕ್ಕೂ ನೋವುಂಡ ಆನೆ ಮಹಾದೇವಿಯ ಕಣ್ಣೀರ ಕಥೆ ಇದು!
ಎಲ್ಲಾ ಕಷ್ಟಗಳಿಗೂ ಕೊನೆ ಇದೆ ಎನ್ನುತ್ತಾರೆ ಹಿರಿಯರು. ಅಂತೆಯೇ ಬದುಕಿನುದ್ದಕ್ಕೂ ನೋವನ್ನೇ ಉಂಡಿದ್ದ ಆನೆಯ (Elephant Mahadevi) ಬದುಕಿನಲ್ಲಿ ಈಗ ಹೊಸ ಅಧ್ಯಾಯವೊಂದು ತೆರೆದಿದೆ. ಒಂದು ಕಾಲದಲ್ಲಿ ಸರಪಳಿಯ ಬಂಧನದಲ್ಲಿದ್ದು, ಬಳಿಕ ಬೀದಿಯಲಿ ಭಿಕ್ಷಾಟನೆ ಮಾಡಿ ಬದುಕು ಸಾಗಿಸಿದ ಆನೆ ಮಹಾದೇವಿ ಈಗ ವಂತರಾಕ್ಕೆ ಬಂದಿದ್ದಾಳೆ. ಬದುಕಿನುದ್ದಕ್ಕೂ ಹೋರಾಟ ಮಾಡಿದ ಆನೆ ಮಹಾದೇವಿಯ ಕಣ್ಣೀರ ಕಥೆ ಇಲ್ಲಿದೆ.


ಜಾಮ್ ನಗರ: ರಿಲಯನ್ಸ್ ಫೌಂಡೇಶನ್ (Reliance Foundation) ಸ್ಥಾಪಿಸಿರುವ ಗುಜರಾತ್ (Gujarat) ನ ಜಾಮ್‌ನಗರದಲ್ಲಿರುವ (Jamnagar) ವಂತಾರಕ್ಕೆ (Vantara) ಈಗ ಹೊಸ ಅತಿಥಿಯ (Elephant Mahadevi) ಆಗಮನವಾಗಿದೆ. ಬದುಕಿನಲ್ಲಿ ಸಾಕಷ್ಟು ನೋವುಂಡ ಆನೆಯೊಂದು ನ್ಯಾಯಾಲಯದ ಆದೇಶದ ಬಳಿಕ ವಂತಾರಕ್ಕೆ ಬಂದಿದ್ದು ಅದರ ಬದುಕಿನಲ್ಲಿ ಈಗ ಹೊಸ ಅಧ್ಯಾಯ ಪ್ರಾರಂಭವಾಗಿದೆ. ಎಲ್ಲ ಕಷ್ಟಗಳಿಗೂ ಕೊನೆ ಎಂಬುದು ಇದ್ದೇ ಇರುತ್ತೆ. ಒಂದು ಕಾಲದಲ್ಲಿ ಸರಪಳಿಯ ಬಂಧನದಲ್ಲಿದ್ದ ಈ ಆನೆ 33 ವರ್ಷಗಳ ಬಳಿಕ ಇದೀಗ ವಂತಾರದಲ್ಲಿ ಸ್ವಾತಂತ್ರ್ಯ ಮತ್ತು ನೆಮ್ಮದಿಯ ಬದುಕನ್ನು ಪ್ರಾರಂಭಿಸಿದೆ.
ಬದುಕಿನ ಉದ್ದಕ್ಕೂ ನೋವನ್ನೇ ಉಂಡು ಸುಮಾರು 33 ವರ್ಷಗಳ ದೌರ್ಜನ್ಯ ಸಹಿಸಿದ ಮಹಾದೇವಿ ಈಗ ವಂತರಾದಲ್ಲಿ ಸ್ವಾತಂತ್ರ್ಯ ಅನುಭವಿಸುತ್ತಿದ್ದಾಳೆ. ಕೊಳೆತ ಕಾಲುಗಳು, ಚಿಕಿತ್ಸೆ ನೀಡದ ಗಾಯಗಳು ಮತ್ತು ನಿರಂತರ ಮಾನಸಿಕ ಒತ್ತಡ ಅನುಭವಿಸುತ್ತಿದ್ದ ಆನೆ ಮಹಾದೇವಿ (ಮಾಧುರಿ)ಗೆ ನ್ಯಾಯಾಲಯ ಸ್ವಾತಂತ್ರ್ಯ ನೀಡಿದೆ. ನ್ಯಾಯಾಲಯದ ಆದೇಶದ ಬಳಿಕ ಮಹಾದೇವಿಯನ್ನು ವಂತರಾಕ್ಕೆ ಕರೆದುಕೊಂಡು ಬರಲಾಗಿದೆ.
ಅನಂತ್ ಅಂಬಾನಿಯವರ ವಂತರಾದಲ್ಲಿರುವ ರಾಧೆ ಕೃಷ್ಣ ದೇವಾಲಯದ ಆನೆ ಕಲ್ಯಾಣ ಟ್ರಸ್ಟ್‌ನಲ್ಲಿ ಮಹಾದೇವಿ ಈಗ ಜೀವನದಲ್ಲೇ ಮೊದಲ ಬಾರಿಗೆ ಸ್ವಾತಂತ್ರ್ಯವನ್ನು ಅನುಭವಿಸುತ್ತಿದೆ.ಒಂದು ಕಾಲದಲ್ಲಿ ಸಂಕೋಲೆಗಳಿಂದ ಬಂಧಿಯಾಗಿ ಭಿಕ್ಷಾಟನೆ ನಡೆಸಿದ್ದ ಆನೆ ಈಗ ಮುಕ್ತವಾಗಿದೆ.
After 33 years alone and in chains, Mahadevi (Madhuri) is finally receiving the care she deserves thanks to @petaindia’s action!
— PETA (@peta) August 2, 2025
Mahadevi was controlled with weapons and forced into chaotic ceremonies. Now, she’s starting a new life with other elephants at @Vantara_RF 🐘💙 pic.twitter.com/AYybbfdLOg
ಮಹಾದೇವಿಯ ಬದುಕಿನ ಒಂದು ಸಣ್ಣ ನೋಟ ಇಲ್ಲಿದೆ..
ಸ್ವಸ್ತಿಶ್ರೀ ಸಂಸ್ಥೆ (ಮಠ) 2000ದ ದಶಕದಲ್ಲಿ ವಶಕ್ಕೆ ಪಡೆದ ಆನೆಯನ್ನು ಪೂಜೆ, ಹರಾಜು, ಮೆರವಣಿಗೆಗಳಿಗೆ ಬಾಡಿಗೆಗೆ ನೀಡಲಾಯಿತು. ಅವಳ ಮೂಲಕ ಬೀದಿ ಭಿಕ್ಷಾಟನೆ ನಡೆಸಲಾಗುತ್ತಿತ್ತು. ಮನರಂಜನೆ ನೀಡಿ ಹಣ ಸಂಪಾದಿಸುವ ಉದ್ದೇಶಗಳಿಗಾಗಿ ಬಳಸಲಾಗುತ್ತಿತ್ತು.
2017ರ ವರ್ಷಾಂತ್ಯದಲ್ಲಿ ಈ ಆನೆಯನ್ನು ಸರಪಳಿಯಲ್ಲಿ ಕಟ್ಟಿ ಬಂಧಿಸಲಾಯಿತು. ಆದರೆ ಅದರ ಕಾಳಜಿ, ಆರೈಕೆಯನ್ನು ಸರಿಯಾಗಿ ಮಾಡದ ಕಾರಣ ಅದು ಮಠದ ಪ್ರಧಾನ ಅರ್ಚಕರನ್ನೇ ಕೊಂದು ಹಾಕಿತ್ತು.
ಸಂಸ್ಥೆಯ ಟ್ರಸ್ಟಿ ಆನೆಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ 2018ರಲ್ಲಿ ಕೊಲ್ಲಾಪುರದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದರು. ಇದರಲ್ಲಿ ಸಂಸ್ಥೆಗೆ ಆನೆಯ ಆರೈಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಲಾಗಿತ್ತು. ಆದರೆ ಇದು ತಕ್ಷಣಕ್ಕೆ ಸಾಧ್ಯವಾಗಲಿಲ್ಲ.
2023ರಲ್ಲಿ ಈ ಆನೆಯನ್ನು ಪಾಲನೆಗಾಗಿ ಕೊಲ್ಹಾಪುರದ ಶಿಂಧೆ ಎಂಬವರಿಗೆ ಹಸ್ತಾಂತರಿಸಲಾಯಿತು. ಬಳಿಕ ಶಿರೋಲ್ ಪೊಲೀಸ್ ಇನ್ಸ್‌ಪೆಕ್ಟರ್ ಪಶುವೈದ್ಯಕೀಯ ತಪಾಸಣೆಗೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಮೂವರು ಸರ್ಕಾರಿ ಪಶುವೈದ್ಯಕೀಯ ವೈದ್ಯರು ಆನೆಯನ್ನು ಪರೀಕ್ಷಿಸಿದರು. ಆಗ ಅದು ತೀವ್ರ ದೈಹಿಕ ಮತ್ತು ಮಾನಸಿಕ ಯಾತನೆಯಲ್ಲಿರುವುದು ತಿಳಿದು ಬಂದಿತ್ತು.
2023ರ ಅಕ್ಟೋಬರ್ ನಲ್ಲಿ ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA) ನಿಂದ ಹೈ ಪವರ್ಡ್ ಕಮಿಟಿ (HPC) ಗೆ ಆನೆಯ ಬಗ್ಗೆ ದೂರು ಸಲ್ಲಿಸಿತ್ತು. ಇದರಲ್ಲಿ 2012 ಮತ್ತು 2023ರ ನಡುವೆ ಮಹಾರಾಷ್ಟ್ರ ಮತ್ತು ತೆಲಂಗಾಣ ನಡುವೆ ಅರಣ್ಯ ಇಲಾಖೆಯ ಪರವಾನಗಿಗಳಿಲ್ಲದೆ 13 ಬಾರಿ ಅನಧಿಕೃತ ಸಾಗಣೆ ಬಗ್ಗೆ ಉಲ್ಲೇಖಿಸಲಾಗಿತ್ತು. ಅಲ್ಲದೇ ಆನೆಯ ಆರೋಗ್ಯದ ಬಗ್ಗೆಯು ಕಳವಳ ವ್ಯಕ್ತಪಡಿಸಲಾಯಿತು. ಬಳಿಕ 2024ರಲ್ಲಿ ಮತ್ತೊಮ್ಮೆ ದೂರು ಸಲ್ಲಿಸಿದ ಪೇಟಾ ಮೊಹರಂ ಕಾರ್ಯಕ್ರಮಗಳು ಸೇರಿದಂತೆ ಮೆರವಣಿಗೆಗಳಲ್ಲಿ ಆನೆಯ ಅನಧಿಕೃತವಾಗಿ ಬಳಕೆಯ ಬಗ್ಗೆ ತಿಳಿಸಿತ್ತು.
ಈ ಸುದ್ದಿಯನ್ನೂ ಓದಿ: Digital Arrest: ಅಶ್ಲೀಲ ಫೋಟೋ ವೈರಲ್ ಮಾಡುವ ಬೆದರಿಕೆ; 3 ತಿಂಗಳಲ್ಲಿ 19 ಕೋಟಿ ರೂ ಕಳೆದುಕೊಂಡ ವೈದ್ಯೆ
2024ರಲ್ಲಿ ಆನೆಯನ್ನು ತುರ್ತು ವಿಶೇಷ ಆರೈಕೆಗಾಗಿ ಕಳುಹಿಸಲು ಶಿಫಾರಸು ಮಾಡಲಾಯಿತು. ಬಳಿಕ ಚಿಕಿತ್ಸೆ ಮುಂದುವರಿದರೂ ಆನೆಯ ಮೇಲಿನ ದೌರ್ಜನ್ಯ ಕಡಿಮೆಯಾಗಿರಲಿಲ್ಲ. 2024ರ ಡಿಸೆಂಬರ್ ನಲ್ಲಿ ತಜ್ಞರು ನೀಡಿರುವ ವರದಿಗಳನ್ನು ಆಧರಿಸಿ ಹೆಚ್ ಪಿಸಿ ಆನೆಯನ್ನು ವಂತಾರಗೆ ವರ್ಗಾಯಿಸುವ ಆದೇಶ ನೀಡಿತು.
ಆದರೆ ಇದರ ವಿರುದ್ಧ ಸ್ವಸ್ತಿಶ್ರೀ ಸಂಸ್ಥೆ ಸಲ್ಲಿಸಿದ 2025 ರ ರಿಟ್ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದ್ದು, ನ್ಯಾಯಾಲಯವು ಹೆಚ್ ಪಿಸಿಯ ಆದೇಶವನ್ನು ಎತ್ತಿ ಹಿಡಿದು ಎರಡು ವಾರಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲು ಆದೇಶಿಸಿತ್ತು. ಬಳಿಕ ಸುಪ್ರೀಂ ಕೋರ್ಟ್ ಕೂಡ ಬಾಂಬೆ ಹೈಕೋರ್ಟ್‌ನ ತೀರ್ಪನ್ನು ಎತ್ತಿಹಿಡಿಯಿತು.
ಇದರಿಂದ ಕಳೆದ ತಿಂಗಳಾಂತ್ಯದ ವೇಳೆಗೆ ಮಹಾದೇವಿಯು ಎಲ್ಲ ಕಷ್ಟಗಳಿಂದ ಮುಕ್ತಿ ಪಡೆದು ವಂತಾರಕ್ಕೆ ಸೇರಿದ್ದಾಳೆ. ಇಲ್ಲಿನ ಅಧಿಕಾರಿಗಳು ನ್ಯಾಯಾಂಗ ನಿರ್ದೇಶನಗಳನ್ನು ಪಾಲಿಸುವುದಾಗಿ ಭರವಸೆಯನ್ನು ನೀಡಿದ್ದಾರೆ.