ಲಡಾಖ್: ಲೇಹ್ ಜಿಲ್ಲೆಯ ಲಡಾಖ್‌ನಲ್ಲಿ ನಡೆದ ಬೃಹತ್ ಹಿಂಸಾಚಾರದಲ್ಲಿ ಕಾಂಗ್ರೆಸ್ ಕೌನ್ಸಿಲರ್ ಫುಂಟ್ಸಾಗ್ ಸ್ಟ್ಯಾನ್ ಜನ್ ತ್ಸೆಪಾಗ್ ಭಾಗಿಯಾಗಿದ್ದರು. ಅವರು ಹಿಂಸಾತ್ಮಕ ಗುಂಪಿನೊಂದಿಗೆ (Ladakh Statehood Protest) ಕಾಣಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ. ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಮತ್ತು ಅವರ ಪ್ರಚೋದನಕಾರಿ ಭಾಷಣಗಳ ಈ ಹಿಂಸಾಚಾರಕ್ಕೆ ಕಾರಣ ಎಂದು ಬಿಜೆಪಿ ಆರೋಪಿಸಿದೆ. ಈ ಹಿಂಸಾಚಾರದಲ್ಲಿ ನಾಲ್ವರು ಪ್ರತಿಭಟನಾಕಾರರು ಸಾವನ್ನಪ್ಪಿದ್ದು, 90 ಮಂದಿ ಗಾಯಗೊಂಡಿದ್ದಾರೆ. ಹಿಂಸಾಚಾರದ ಬಳಿಕ ಲೇಹ್ ಜಿಲ್ಲೆಯಲ್ಲಿ ಕರ್ಫ್ಯೂ ವಿಧಿಸಲಾಗಿದೆ.
ಲಡಾಖ್‌ಗೆ ರಾಜ್ಯ ಸ್ಥಾನಮಾನ ಮತ್ತು ಸಾಂವಿಧಾನಿಕ ರಕ್ಷಣೆಗಾಗಿ ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಉಂಟಾದ ಹಿಂಸಾಚಾರದ ಬಳಿಕ ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಕರ್ಫ್ಯೂ ಜಾರಿಯಲ್ಲಿದೆ. ಸ್ಥಳೀಯ ಪೊಲೀಸರ ಜೊತೆಗೆ ಸಿಆರ್‌ಪಿಎಫ್ ಕೂಡ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಇಂಡೋ-ಟಿಬೆಟಿಯನ್ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಬಿಜೆಪಿ ಹೇಳುವುದೇನು?
ಘಟನೆಯಲ್ಲಿ ಲಡಾಖ್‌ನ ಬಿಜೆಪಿ ಕಚೇರಿ ಮತ್ತು ಲಡಾಖ್ ಹಿಲ್ ಕೌನ್ಸಿಲ್ ಸೆಕ್ರೆಟರಿಯೇಟ್ ಅನ್ನು ಪ್ರತಿಭಟನಾಕಾರರು ಸುಟ್ಟು ಹಾಕಿದ್ದರು. ಈ ಘಟನೆಗೆ ಬಿಜೆಪಿಯು ಕಾಂಗ್ರೆಸ್ ಅನ್ನು ದೂಷಿಸಿದೆ. ಕಾಂಗ್ರೆಸ್ ಕೌನ್ಸಿಲರ್ ತ್ಸೆಪಾಗ್ ಹಿಂಸಾತ್ಮಕ ಗುಂಪಿನ ಭಾಗವಾಗಿದ್ದಾರೆ ಎಂಬ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ವಾಂಗ್‌ಚುಕ್, ಲಡಾಖ್‌ನಲ್ಲಿ ಕಾಂಗ್ರೆಸ್‌ಗೆ 5,000 ಯುವಕರನ್ನು ರಸ್ತೆಗೆ ಇಳಿಸುವಷ್ಟು ಪ್ರಭಾವವಿಲ್ಲ ಎಂದು ಹೇಳಿದ್ದಾರೆ.
ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್ ಕವಿಂದರ್ ಗುಪ್ತಾ ಅವರು ಪ್ರತಿಕ್ರಿಯಿಸಿ, ಈ ಘರ್ಷಣೆಯು ಒಂದು ಪಿತೂರಿ. ಹಿಂಸಾಚಾರದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಹಿಂಸಾಚಾರ ಮತ್ತು ಬೆಂಕಿ ಹಚ್ಚುವಿಕೆಯಲ್ಲಿ ಭಾಗಿಯಾಗಿರುವ ಕಾಂಗ್ರೆಸ್ ಕೌನ್ಸಿಲರ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಸೋನಮ್ ವಾಂಗ್‌ಚುಕ್ ಅವರ ಪ್ರಚೋದನಕಾರಿ ಭಾಷಣ ಈ ಹಿಂಸಾಚಾರಕ್ಕೆ ಕಾರಣ ಎಂದು ಗೃಹ ಸಚಿವಾಲಯವು ನೇರವಾಗಿ ದೂಷಿಸಿದೆ.
ಕಳೆದ 15 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವಾಂಗ್‌ಚುಕ್ ಅವರು ಲೇಹ್‌ನಲ್ಲಿ ಹಿಂಸಾಚಾರ ಭುಗಿಲೆದ್ದ ತಕ್ಷಣ ತಮ್ಮ ಉಪವಾಸ ಸತ್ಯಾಗ್ರಹವನ್ನು ಹಿಂತೆಗೆದುಕೊಂಡರು. ಅವರು ಜನರನ್ನು ಪ್ರಚೋದಿಸಲು ಈ ರೀತಿ ಮಾಡಿದ್ದಾರೆ ಎಂದು ಹೇಳಿರುವ ಸರ್ಕಾರ ಅವರ ಈ ಕ್ರಮ ನೇಪಾಳ ಜನರಲ್ ಝಡ್ ಪ್ರತಿಭಟನೆಯಂತೆ ಎಂದು ಹೇಳಿದೆ.
ಹಲವರು ನಾಯಕರು ವಾಂಗ್‌ಚುಕ್ ಅವರನ್ನು ಉಪವಾಸ ಸತ್ಯಾಗ್ರಹವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದರೂ ಅವರು ಅರಬ್ ಸ್ಪ್ರಿಂಗ್ ಶೈಲಿಯಲ್ಲಿ ಪ್ರತಿಭಟನೆ ನಡೆಸಿದರು. ಈ ಮೂಲಕ ಜನರ ದಾರಿ ತಪ್ಪಿಸಿದ್ದಾರೆ ಎಂದು ಗೃಹ ಸಚಿವಾಲಯ ಹೇಳಿದೆ.
ಯಾಕೆ ಪ್ರತಿಭಟನೆ?
ಕಳೆದ ಮೂರು ವರ್ಷಗಳಲ್ಲಿ ಲಡಾಖ್‌ನಲ್ಲಿ ಅಶಾಂತಿ ಕಂಡುಬಂದಿದೆ. ನಿವಾಸಿಗಳು ತಮ್ಮ ಭೂಮಿ, ಸಂಸ್ಕೃತಿ ಮತ್ತು ಸಂಪನ್ಮೂಲಗಳನ್ನು ರಕ್ಷಿಸಲು ರಾಜ್ಯ ಸ್ಥಾನಮಾನ ಮತ್ತು ಸಾಂವಿಧಾನಿಕ ರಕ್ಷಣೆಗಾಗಿ ಪದೇ ಪದೇ ಕರೆ ನೀಡುತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಂಡ ಬಳಿಕ 2019 ರಲ್ಲಿ ಲಡಾಖ್ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಲಾಯಿತು. ಆಗ ವಾಂಗ್‌ಚುಕ್ ಸೇರಿದಂತೆ ಲೇಹ್‌ನ ಅನೇಕರು ಇದನ್ನು ಸ್ವಾಗತಿಸಿದ್ದು, ಬಳಿಕ ಈ ಬಗ್ಗೆ ಕಳವಳ ವ್ಯಕ್ತವಾಗಲು ಪ್ರಾರಂಭವಾಯಿತು. ಈ ಅಸಮಾಧಾನವು ದೊಡ್ಡ ಪ್ರಮಾಣದ ಪ್ರತಿಭಟನೆ ಮತ್ತು ಉಪವಾಸ ಸತ್ಯಾಗ್ರಹಗಳಿಗೆ ಕಾರಣವಾಯಿತು. ಇದಕ್ಕಾಗಿ ಬೌದ್ಧ ಬಹುಸಂಖ್ಯಾತ ಲೇಹ್ ಮತ್ತು ಮುಸ್ಲಿಂ ಬಹುಸಂಖ್ಯಾತ ಕಾರ್ಗಿಲ್‌ನ ರಾಜಕೀಯ ಮತ್ತು ಧಾರ್ಮಿಕ ಗುಂಪುಗಳು ಒಗ್ಗೂಡಿದ್ದು ಲೇಹ್‌ನ ಅಪೆಕ್ಸ್ ಬಾಡಿ ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ ಎಂದು ಗುರುತಿಸಿಕೊಂಡವು.
ಈ ಸುದ್ದಿಯನ್ನೂ ಓದಿ: Ladakh Statehood Protest: ಲಡಾಖ್ ಗಲಭೆ ನಡೆದಿದ್ದು ಹೇಗೆ? ನಿಜವಾದ ಕಾರಣ ಬಿಚ್ಚಿಟ್ಟ ಕೇಂದ್ರ ಸರ್ಕಾರ
ಇದಕ್ಕೆ ಪ್ರತಿಕ್ರಿಯೆಯಾಗಿ ಕೇಂದ್ರವು ಲಡಾಖ್‌ನ ಬೇಡಿಕೆಗಳನ್ನು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಆದರೆ ಮಾತುಕತೆಗಳಿಂದ ಯಾವುದೇ ಪ್ರಯೋಜನವಾಗಲಿಲ್ಲ. ಕಳೆದ ಮಾರ್ಚ್‌ನಲ್ಲಿ ಲಡಾಖ್ ಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಇದಾದ ಬಳಿಕ ಗೃಹ ಸಚಿವರು ತಮ್ಮ ಪ್ರಮುಖ ಬೇಡಿಕೆಗಳನ್ನು ತಿರಸ್ಕರಿಸಿದ್ದಾರೆ ಎಂದು ಸ್ಥಳೀಯ ನಾಯಕರು ತಿಳಿಸಿದ್ದರು.