ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Crocodile Attack: ಬಟ್ಟೆ ಒಗೆಯಲು ನದಿಗೆ ಹೋದ ಮಹಿಳೆಯನ್ನು ಎಳೆದೊಯ್ದ ಮೊಸಳೆ; ಭಯಾನಕ ವಿಡಿಯೊ ನೋಡಿ

ಒಡಿಶಾದ ಜೈಪುರ ಜಿಲ್ಲೆಯ ಕಾಂಟಿಯಾ ಗ್ರಾಮದಲ್ಲಿ ಮೊಸಳೆಯೊಂದು ಮಹಿಳೆ ಮೇಲೆ ದಾಳಿ ಮಾಡಿದ್ದು, ಮೃತರನ್ನು ಸೌದಾಮಿನಿ ಮಹಲಾ ಎಂದು ಗುರುತಿಸಲಾಗಿದೆ. ಈಕೆ ಖರಸ್ರೋತಾ ನದಿ ದಡದಲ್ಲಿ ಬಟ್ಟೆ ತೊಳೆಯಲು ಹೋಗಿದ್ದರು. ಇದ್ದಕ್ಕಿದ್ದಂತೆ ಮೊಸಳೆ ನದಿಯಿಂದ ಹಾರಿ, ಸೌದಾಮಿನಿಯನ್ನು ಹಿಡಿದೆಳೆದಿದೆ. ನಂತರ ಸ್ವಲ್ಪ ಆಳವಿರುವ ಭಾಗಕ್ಕೆ ಹೋಗಿ ಅಲ್ಲಿ ಆಕೆಯನ್ನು ತಿಂದು ಹಾಕಿದೆ.

ಭುವನೇಶ್ವರ: ನದಿಯ ದಡದಲ್ಲಿ (River Bank) ಬಟ್ಟೆ ತೊಳೆಯಲು ತೆರಳಿದ್ದ ಮಹಿಳೆಯ ಮೇಲೆ ಮೊಸಳೆ ದಾಳಿ (Crocodile Attack) ಮಾಡಿ ಆಕೆಯನ್ನು ಕಚ್ಚಿಕೊಂಡು ನೀರಿಗೆ ಎಳೆದೊಯ್ದು ತಿಂದು ಹಾಕಿರುವ ಭಯಾನಕ ಘಟನೆ ಒಡಿಶಾದ (Odisha) ಜೈಪುರ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಭುವನೇಶ್ವರದಿಂದ ಸುಮಾರು 30 ಕಿಲೋ ಮೀಟರ್ ದೂರದಲ್ಲಿರುವ ಕಾಂಟಿಯಾ ಗ್ರಾಮದಲ್ಲಿ ಈ ದುರಂತ ನಡೆದಿದ್ದು, ಸೌದಾಮಿನಿ ಮಹಲಾ ಎಂಬ 55 ವರ್ಷದ ಮಹಿಳೆ ಬಟ್ಟೆ ತೊಳೆಯಲು ಖರಸ್ರೋತಾ ನದಿಗೆ ತೆರಳಿದ್ದಳು. ನದಿ ದಡದಲ್ಲಿ ಒಂಟಿಯಾಗಿದ್ದ ಮಹಿಳೆಯ ಮೇಲೆ ಮೊಸಳೆ ಏಕಾಏಕಿ ದಾಳಿ ನಡೆಸಿ ಆಕೆಯನ್ನು ನೀರಿಗೆ ಎಳೆದುಕೊಂಡು ಹೋಗಿದೆ.

ಈ ದುರಂತ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಯನ್ನು ಎಳೆದುಕೊಂಡು ಹೋಗಿದ್ದನ್ನು ನೋಡಿ ಅಲ್ಲೇ ಇದ್ದ ಗ್ರಾಮಸ್ಥರು ಆತಂಕದಿಂದ ಕಿರುಚಾಡಿದ್ದಾರೆ. ತನ್ನನ್ನು ಕಾಪಾಡುವಂತೆ ಸೌದಾಮಿನಿ ಕೂಗಾಡಿದ್ದು, ರಕ್ಷಣೆಗಾಗಿ ಅಂಗಲಾಚಿ ಬೇಡಿಕೊಂಡಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

ವೈರಲ್‌ ವಿಡಿಯೊ ಇಲ್ಲಿದೆ:



ಇನ್ನು ಪ್ರತ್ಯಕ್ಷದರ್ಶಿಗಳ ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಏಕಾಏಕಿ ಮೊಸಳೆ ನದಿಯಿಂದ ಹಾರಿ, ಸೌದಾಮಿನಿಯನ್ನು ಹಿಡಿದೆಳೆದಿದೆ. ಕ್ಷಣ ಮಾತ್ರದಲ್ಲಿ ಮೊಸಳೆಯು ಸೌದಾಮಿನಿಯನ್ನು ಎಳೆದುಕೊಂಡು ಹೋದ ಕಾರಣ ಆಕೆಯನ್ನು ಕಾಪಾಡಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಈ ಸುದ್ದಿಯನ್ನು ಓದಿ: Physical Abuse: ನಟಿಗೆ ಲೈಂಗಿಕ ಕಿರುಕುಳ, ಕನ್ನಡದ ನಟ- ನಿರ್ದೇಶಕ ಹೇಮಂತ್‌ ಬಂಧನ

ಇನ್ನು ಈ ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕೆಲ ತಿಂಗಳ ಹಿಂದೆ ಇದೇ ಸ್ಥಳದಲ್ಲಿ ಮೊಸಳೆಯೊಂದು ಆಡುವನ್ನು ಎಳೆದುಕೊಂಡು ಹೋಗಿತ್ತು. ಇದೀಗ ಮತ್ತೆ ಮೊಸಳೆ ಕಾಣಿಸಿಕೊಂಡಿರುವುದು ಜನರನ್ನು ಭಯಭೀತಗೊಳಿಸಿದೆ.

ಈ ದುರ್ಘಟನೆಯಿಂದ ಎಚ್ಚೆತ ಅರಣ್ಯ ಇಲಾಖೆ ಅಧಿಕಾರಿಗಳು ಜನರಿಗೆ ನದಿಯ ಸಮೀಪ ಹೋಗದಂತೆ ನಿಷೇಧ ಹೇರಿದ್ದು, ಇಂತಹ ದಾಳಿಗಳನ್ನು ತಡೆಯಲು ಜಾಗೃತಿ ಅಭಿಯಾನಗಳನ್ನು ನಡೆಸಲಾಗುವುದು ಎಂದು ತಿಳಿಸಿದೆ. ನದಿಯ ಅಪಾಯಕರ ಭಾಗಗಳಲ್ಲಿ ಭದ್ರತೆಯನ್ನು ಹೆಚ್ಚಿಸುವುದರೊಂದಿಗೆ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.