ಚೆನ್ನೈ: 51ನೇ ರಾಜ್ಯ ಶೂಟಿಂಗ್ ಕ್ರೀಡಾಕೂಟದಲ್ಲಿ ಬಿಜೆಪಿ ನಾಯಕ ಕೆ.ಅಣ್ಣಾಮಲೈ (K Annamalai) ಅವರ ಕೊರಳಲ್ಲಿ ಪದಕ ಪಡೆಯಲು ತಮಿಳುನಾಡು ಕೈಗಾರಿಕಾ ಸಚಿವ ಟಿ.ಆರ್.ಬಿ.ರಾಜಾ ಅವರ ಪುತ್ರ ಸೂರ್ಯ ರಾಜ ಬಾಲು ನಿರಾಕರಿಸಿದ್ದಾರೆ. ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದ್ದ ಅಣ್ಣಾಮಲೈ ಅವರು ಸಮಾರಂಭದ ಭಾಗವಾಗಿ ವಿಜೇತರಿಗೆ ಹೂಮಾಲೆ ಹಾಕುತ್ತಿದ್ದರು. ಆದರೆ ಸೂರ್ಯ ಅದನ್ನು ತಡೆದಿದ್ದಾನೆ. ಸದ್ಯ ಬಾಲಕನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಜ್ಯ ಶೂಟಿಂಗ್ ಕ್ರೀಡಾಕೂಟದಲ್ಲಿ ಗೆದ್ದ ಪದಕವನ್ನು ಅವರು ಕೈಯಿಂದಲೇ ಸ್ವೀಕರಿಸಿದ್ದಾರೆ.
ವಿಡಿಯೋದಲ್ಲಿ, ಕೈಗಾರಿಕಾ ಸಚಿವ ಟಿಆರ್‌ಬಿ ರಾಜಾ ಅವರ ಪುತ್ರ ಸೂರ್ಯ ರಾಜ ಬಾಲು ತನ್ನ ಕುತ್ತಿಗೆಗೆ ಪದಕ ಹಾಕಿಸಿಕೊಳ್ಳಲು ನಿರಾಕರಿಸಿ, ಅದನ್ನು ಕೈಯಲ್ಲಿ ಸ್ವೀಕರಿಸಿದ್ದಾನೆ. ಅಷ್ಟೇ ಅಲ್ಲದೇ ತಮ್ಮ ಕೈಯಲ್ಲಿಯೇ ಅದನ್ನು ನೀಡಿ ಎಂದು ಕೈ ಒಡ್ಡಿರುವುದು ಕಾಣಿಸಿದೆ. ಈ ಬಗ್ಗೆ ಡಿಎಂಕೆ ಪುತ್ರನ ಕುರಿತು ಸಕಾರಾತ್ಮಕ ಮಾತುಗಳನ್ನಾಡಿರುವ ಅಣ್ಣಾಮಲೈ, 'ಅದು ದೊಡ್ಡ ವಿಷಯವಲ್ಲ.. ಆತ ಪ್ರತಿಭಾನ್ವಿತ, ಯಾರ ಕೈಯಿಂದ ಪ್ರಶಸ್ತಿ ಸ್ವೀಕರಿಸಬೇಕು ಎಂಬುದು ಅವರ ಇಚ್ಛೆ.. ಆತ ಎಲ್ಲಿದ್ದರೂ ಚೆನ್ನಾಗಿರಬೇಕು. ಇಂತಹುದೇ ದೊಡ್ಡ ದೊಡ್ಡ ಸಾಧನೆ ಮಾಡಬೇಕು. ಯಾರ ಕೈಯಿಂದ ಪ್ರಶಸ್ತಿ ಸ್ವೀಕರಿಸದರು ಎಂಬುದು ಮುಖ್ಯವಲ್ಲ.. ಏನು ಸಾಧನೆ ಮಾಡಿದರು ಅದು ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ.
ಎರಡು ವಾರಗಳ ಹಿಂದೆಯೂ ಇದೇ ರೀತಿಯ ಘಟನೆ ನಡೆದಿತ್ತು. ತಿರುನಲ್ವೇಲಿಯ ಮನೋನ್ಮಣಿಯಂ ಸುಂದರನಾರ್ ವಿಶ್ವವಿದ್ಯಾಲಯದ 32 ನೇ ಘಟಿಕೋತ್ಸವದಲ್ಲಿ, ಡಾಕ್ಟರೇಟ್ ವಿದ್ಯಾರ್ಥಿನಿ ಜೀನ್ ಜೋಸೆಫ್ ವೇದಿಕೆಯಲ್ಲಿ ರಾಜ್ಯಪಾಲ ಆರ್.ಎನ್. ರವಿ ಅವರಿಂದ ಪದವಿ ಪಡೆಯುವ ಬದಲು ಅವರ ಹಿಂದೆ ನಡೆದುಕೊಂಡು ಹೋಗಿ ಕುಲಪತಿಗಳಿಂದ ಪದವಿ ಪಡೆದಿದ್ದರು. ಡಿಎಂಕೆಯ ನಾಗರಕೋಯಿಲ್ ಉಪ ಕಾರ್ಯದರ್ಶಿ ಎಂ ರಾಜನ್ ಅವರ ಪತ್ನಿ ಜೋಸೆಫ್ ನಂತರ ತಮ್ಮ ನಿರ್ಧಾರವು ರಾಜ್ಯಪಾಲರ "ತಮಿಳು ಮತ್ತು ತಮಿಳುನಾಡು ವಿರೋಧಿ" ನಿಲುವಿನ ವಿರುದ್ಧದ ಪ್ರತಿಭಟನೆಯಾಗಿದೆ ಎಂದು ಹೇಳಿದ್ದರು.
ಈ ಸುದ್ದಿಯನ್ನೂ ಓದಿ: Pawan Kalyan: ಕೋರ್ಟ್ ಷರತ್ತು ಉಲ್ಲಂಘನೆ; ಪವನ್ ಕಲ್ಯಾಣ್, ಅಣ್ಣಾಮಲೈ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು
ಈ ಘಟನೆಯನ್ನು ಅಣ್ಣಾಮಲೈ ಖಂಡಿಸಿದ್ದರು. “ಖ್ಯಾತಿ ಗಳಿಸಲು ಡಿಎಂಕೆ ಸದಸ್ಯರು ಪ್ರದರ್ಶಿಸಿದ ಶೋಚನೀಯ ನಾಟಕವಿದು. ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕೀಳು ಮಟ್ಟದ ರಾಜಕೀಯ ತರಬಾರದು” ಎಂದಿದ್ದರು.