ಚುರುಕುಗೊಂಡ ಭದ್ರತಾ ಪಡೆಗಳ ಕಾರ್ಯಾಚರಣೆ; ಹಳ್ಳಿಗಳಿಂದ ದಟ್ಟ ಕಾಡಿನತ್ತ ಮುಖ ಮಾಡಿದ ಉಗ್ರರು
ಭಯೋತ್ಪಾದಕರ ವಿರುದ್ಧ ಕೇಂದ್ರ ಕಠಿಣ ನಿಲುವು ತಳೆದಿದ್ದು, ಬೇರು ಸಮೇತ ಕಿತ್ತು ಹಾಕಲು ಮುಂದಾಗಿದೆ. ಹೀಗಾಗಿ ಹಿಂದೆ ಜಮ್ಮು ಮತ್ತು ಕಾಶ್ಮೀರದ ಮನೆಗಳಲ್ಲಿ ಆಶ್ರಯ ಪಡೆಯುತ್ತಿದ್ದ ಭಯೋತ್ಪಾದಕ ಸಂಘಟನೆಗಳು ಈಗ ದಟ್ಟ ಕಾಡುಗಳತ್ತ ಮುಖ ಮಾಡಿವೆ ಎಂದು ಮೂಲಗಳು ತಿಳಿಸಿವೆ. ಉಗ್ರರು ಅಡಗು ತಾಣಕ್ಕಾಗಿ ದಟ್ಟ ಕಾಡುಗಳಲ್ಲಿ ಭೂಗತ ಬಂಕರ್‌ಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಅದಿಕಾರಿಗಳು ವಿವರಿಸಿದ್ದಾರೆ.

ಸಾಂದರ್ಭಿಕ ಚಿತ್ರ -

ಶ್ರೀನಗರ: ಜಮ್ಮು ಕಾಶ್ಮೀರದ (Jammu and Kashmir) ಪಹಲ್ಗಾಮ್ ಮೇಲೆ ನಡೆದ ದಾಳಿಯ ಬಳಿಕ ಭಯೋತ್ಪಾದಕರ ವಿರುದ್ಧ ಕೇಂದ್ರ ಕಠಿಣ ನಿಲುವು ತಳೆದಿದ್ದು, ಚುರುಕಿನ ಕಾರ್ಯಾಚರಣೆಯ ಮೂಲಕ ಉಗ್ರವಾದವನ್ನು ಬೇರು ಸಮೇತ ಕಿತ್ತು ಹಾಕಲು ಮುಂದಾಗಿದೆ. ಹೀಗಾಗಿ ಹಿಂದೆ ಜಮ್ಮು ಮತ್ತು ಕಾಶ್ಮೀರದ ಮನೆಗಳಲ್ಲಿ ಆಶ್ರಯ ಪಡೆಯುತ್ತಿದ್ದ ಭಯೋತ್ಪಾದಕ ಸಂಘಟನೆಗಳು ಈಗ ದಟ್ಟ ಕಾಡುಗಳತ್ತ ಮುಖ ಮಾಡಿವೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿ, ಉಗ್ರರು ಅಡಗು ತಾಣಕ್ಕಾಗಿ ದಟ್ಟ ಕಾಡುಗಳಲ್ಲಿ ಭೂಗತ ಬಂಕರ್‌ಗಳನ್ನು ನಿರ್ಮಿಸುತ್ತಿದ್ದಾರೆ ಎಂದಿದ್ದಾರೆ.
ಸ್ಥಳೀಯ ಬೆಂಬಲ ಕಡಿಮೆಯಾಗುತ್ತಿರುವುದರಿಂದ ಉಂಟಾದ ಈ ಬದಲಾವಣೆಯು ಸೇನೆ ಮತ್ತು ಇತರ ಭದ್ರತಾ ಪಡೆಗಳಿಗೆ ಹೊಸ ಸವಾಲನ್ನು ಒಡ್ಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಳೆದ ವಾರ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಬಳಿಕ ಈ ಅಂಶ ಬೆಳಕಿಗೆ ಬಂದಿದೆ. ಆ ವೇಳೆ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿತ್ತು. ಕಾರ್ಯಾಚರಣೆ ಬಳಿಕ ಭದ್ರತಾ ಪಡೆಗಳು ರಹಸ್ಯ ಕಂದಕದಿಂದ ಪಡಿತರ, ಗ್ಯಾಸ್ ಸ್ಟೌ ಮತ್ತು ಪ್ರೆಶರ್ ಕುಕ್ಕರ್ ಜತೆಗೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದವು.
Indian Security busted a terrorist Hideout in Rajapuri, J&K.
— Sunanda Roy 👑 (@SaffronSunanda) June 10, 2025
No rat will be spared !! pic.twitter.com/3W2Zmzb6Kc
ಈ ಸುದ್ದಿಯನ್ನೂ ಓದಿ: Maoists Encounter: ಮೋಸ್ಟ್ ವಾಂಟೆಡ್ ನಕ್ಸಲರಿಬ್ಬರ ಎನ್‌ಕೌಂಟರ್!
ಹೆಸರು ಬಹಿರಂಗಪಡಿಸಲು ಬಯಸದ ಹಿರಿಯ ಭದ್ರತಾ ಅಧಿಕಾರಿಯೊಬ್ಬರು, ʼʼಕುಲ್ಗಾಮ್ ಮತ್ತು ಶೋಪಿಯಾನ್ ಜಿಲ್ಲೆಗಳಲ್ಲಿ ಹಾಗೂ ಜಮ್ಮು ಪ್ರದೇಶದ ಪಿರ್ ಪಂಜಾಲ್‌ನ ದಕ್ಷಿಣ ಭಾಗದಲ್ಲಿ ಈ ಪ್ರವೃತ್ತಿ ವ್ಯಾಪಕವಾಗಿ ಹರಡಿದೆ. ಅಲ್ಲಿನ ದಟ್ಟ ಕಾಡುಗಳು ಭಯೋತ್ಪಾದಕರಿಗೆ ಅಡಗಿಕೊಳ್ಳಲು ಅನುಕೂಲ ವಾತಾವರಣವನ್ನು ಕಲ್ಪಿಸುತ್ತವೆʼʼ ಎಂದು ವಿವರಿಸಿದ್ದಾರೆ.
ಭದ್ರತಾ ಸಿಬ್ಬಂದಿ ಈ ಹೊಸ ಅಡಗುತಾಣಗಳಲ್ಲಿ ಕೆಲವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದರೂ ಇಂತಹವು ಇನ್ನಷ್ಟು ಅಲ್ಲಲ್ಲಿ ಇರುವ ಸಾಧ್ಯತೆ ಸವಾಲಾಗಿ ಪರಿಣಮಿಸಿದೆ. ಭಯೋತ್ಪಾದಕರು ಇಂತಹ ಅಡಗುತಾಣಗಳಲ್ಲಿ ಕೂತು ಸೂಚನೆ ಬಂದಾಗ ಒಮ್ಮಿಂದೊಮ್ಮೆಗೆ ದಾಳಿ ನಡೆಸುವ ಸಂಚು ರೂಪಿಸಿವೆ ಎಂದು ಗುಪ್ತಚರ ಇಲಾಖೆಯ ಅಧಿಕಾರಿಗಳು ಎಚ್ಚರಿಸಿದ್ದಾರೆ.
2016ರ ಯಶಸ್ವಿ ಸರ್ಜಿಕಲ್ ಸ್ಟ್ರೈಕ್‌ಗಳ ನೇತೃತ್ವ ವಹಿಸಿದ್ದ ನಿವೃತ್ತ ಲೆಫ್ಟಿನೆಂಟ್ ಜನರಲ್ ಡಿ.ಎಸ್. ಹೂಡಾ ಅವರ ಪ್ರಕಾರ, ಈ ಕಂದಕಗಳು ಮತ್ತು ಬಂಕರ್‌ಗಳು 1990 ಮತ್ತು 2000ರ ದಶಕದ ಆರಂಭದಲ್ಲಿ ಭಯೋತ್ಪಾದಕರು ಬಳಸಿದ ತಂತ್ರಗಳನ್ನು ನೆನಪಿಸುತ್ತವೆ. ಈ ಹೊಸ ಸವಾಲನ್ನು ಎದುರಿಸಲು ಸೈನ್ಯವು ತನ್ನ ಕಾರ್ಯತಂತ್ರವನ್ನು ಮರು ಮೌಲ್ಯಮಾಪನ ಮಾಡುತ್ತಿದೆ ಎಂದೂ ಅವರು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರುವ ಪುದುಚೇರಿ ಪೊಲೀಸ್‌ನ ನಿವೃತ್ತ ಮಹಾನಿರ್ದೇಶಕ ಬಿ. ಶ್ರೀನಿವಾಸ್ ಈ ಬಗ್ಗೆ ಮಾತನಾಡಿ, ʼʼಭಯೋತ್ಪಾದಕರಿಗೆ ಇನ್ನು ಮುಂದೆ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಆಶ್ರಯ ಸಿಗಲಾರದು. ಈ ಕಾರಣಕ್ಕಾಗಿ ಅವರು ಈ ರೀತಿಯ ಬಂಕರ್‌ಗಳನ್ನು ನಿರ್ಮಾಣಕ್ಕೆ ಮುಂದಾಗಿದ್ದಾರೆʼʼ ಎಂದಿದ್ದಾರೆ.
2003ರಲ್ಲಿ 'ಆಪರೇಷನ್ ಸರ್ಪ್ ವಿನಾಶ್' ಬಳಿಕ ಕಂಡುಬಂದಂತಹ ಪರಿಸ್ಥಿತಿ ಪುನರಾವರ್ತನೆಯಾಗುತ್ತಿದೆ. ಈ ಹೊಸ ಸವಾಲನ್ನು ಎದುರಿಸಲು ಭದ್ರತಾ ಪಡೆಗಳು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಮುಂದಾಗಿವೆ.