ಡೆಹ್ರಾಡೂನ್: ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಉತ್ತರಾಖಂಡದ (Uttarakhand) ಡೆಹ್ರಾಡೂನ್‌ನಲ್ಲಿ (dehradun) 15 ಮಂದಿ ಸಾವನ್ನಪ್ಪಿದ್ದು, 16 ಮಂದಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಸೋಮವಾರ ರಾತ್ರಿಯಿಂದ ನಿರಂತರ ಮಳೆಯಾಗುತ್ತಿದ್ದು (heavy rainfall), ಹಲವಾರು ರಸ್ತೆ, ಮನೆ ಮತ್ತು ಅಂಗಡಿಗಳು ಹಾನಿಗೊಳಗಾಗಿವೆ. ರಾಜ್ಯದ ಹಲವಾರು ಭಾಗಗಳಲ್ಲಿ ಮಂಗಳವಾರ ಮೇಘಸ್ಫೋಟ (Cloudbursts) ಉಂಟಾಗಿ ಮತ್ತು ಭಾರೀ ಮಳೆಯಿಂದಾಗಿ ಅಪಾರ ಹಾನಿ ಸಂಭವಿಸಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಚಮೋಲಿ, ಚಂಪಾವತ್, ಡೆಹ್ರಾಡೂನ್, ನೈನಿತಾಲ್, ಪೌರಿ ಗರ್ವಾಲ್, ಪಿಥೋರಗಢ, ರುದ್ರಪ್ರಯಾಗ, ತೆಹ್ರಿ ಗರ್ವಾಲ್ ಮತ್ತು ಉತ್ತರಕಾಶಿ ಜಿಲ್ಲೆಗಳು ಅಪಾಯದಲ್ಲಿವೆ.
ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ಮತ್ತು ಇತರ ಹಲವಾರು ಭಾಗಗಳಲ್ಲಿ ಮಂಗಳವಾರ ಮೇಘಸ್ಫೋಟ ಉಂಟಾಗಿ ಭಾರೀ ಮಳೆಯಾಗಿದ್ದು, ಅಪಾರ ಹಾನಿ ಸಂಭವಿಸಿದೆ. ನದಿಗಳು ಉಕ್ಕಿ ಹರಿಯುತ್ತಿದ್ದು, ಕಟ್ಟಡ, ರಸ್ತೆ ಮತ್ತು ಸೇತುವೆಗಳು ಕೊಚ್ಚಿ ಹೋಗಿವೆ. ಇದರಿಂದಾಗಿ 15 ಜನರು ಸಾವನ್ನಪ್ಪಿದ್ದಾರೆ. 16 ಮಂದಿ ಕಾಣೆಯಾಗಿದ್ದಾರೆ. ಬೆಟ್ಟದ ರಾಜ್ಯದ ವಿವಿಧ ಸ್ಥಳಗಳಲ್ಲಿ 900ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿದ್ದಾರೆ.
ಈ ನಡುವೆ ಮುಂದಿನ 24 ಗಂಟೆಗಳಲ್ಲಿ ದಿಢೀರ್ ಪ್ರವಾಹ ಉಂಟಾಗುವ ಸಾಧ್ಯತೆ ಕಡಿಮೆ ಇದೆ ಎಂದು ಐಎಂಡಿ ಹೇಳಿದ್ದು, ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದಿದೆ. ಡೆಹ್ರಾಡೂನ್‌ನಲ್ಲಿ 13 ಮಂದಿ ಸಾವನ್ನಪ್ಪಿದ್ದು, ಇದರಲ್ಲಿ ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಎಂಟು ನಿವಾಸಿಗಳು ಸೇರಿದ್ದಾರೆ. ನೈನಿತಾಲ್ ಮತ್ತು ಉಧಮ್ ಸಿಂಗ್ ನಗರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ಉತ್ತರಾಖಂಡ್ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಅಪಾರ ಹಾನಿ
ಪ್ರವಾಹ ಪೀಡಿತ ಪ್ರದೇಶಗಳಲ್ಲಿದ್ದ ಸುಮಾರು 900 ಜನರನ್ನು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ನಾಪತ್ತೆಯಾದವರ ಹುಡುಕಾಟ ನಡೆಸಲಾಗುತ್ತಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (ಎಸ್‌ಇಒಸಿ) ತಿಳಿಸಿದೆ. ತಮ್ಸಾ ನದಿಯಲ್ಲಿ ಉಂಟಾದ ಪ್ರವಾಹದಿಂದ ಪ್ರಸಿದ್ಧ ತಪಕೇಶ್ವರ ದೇವಾಲಯ ಮುಳುಗಿದೆ. ಅದರ ಪ್ರವೇಶದ್ವಾರದ ಬಳಿ ಇರುವ ಬೃಹತ್ ಹನುಮಾನ್ ಪ್ರತಿಮೆಯ ಭುಜಗಳವರೆಗೆ ನೀರು ತುಂಬಿದೆ. ಕಳೆದ 25 ರಿಂದ 30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನದಿ ನೀರು ಇಷ್ಟು ಎತ್ತರಕ್ಕೆ ಏರಿದೆ ಎಂದು ದೇವಾಲಯದ ಅರ್ಚಕ ಬಿಪಿನ್ ಜೋಶಿ ತಿಳಿಸಿದ್ದಾರೆ.
ಡೆಹ್ರಾಡೂನ್ ಜಿಲ್ಲೆಯ ಹಲವಾರು ರಸ್ತೆಗಳು, ಸೇತುವೆಗಳು ಕೊಚ್ಚಿ ಹೋಗಿವೆ. ಡೆಹ್ರಾಡೂನ್‌ನ ಪೌಂಧಾ ಪ್ರದೇಶದ ದೇವಭೂಮಿ ಇನ್‌ಸ್ಟಿಟ್ಯೂಟ್ ಆವರಣದಲ್ಲಿ ನೀರಿನ ಹರಿವಿನಿಂದ ಸಿಲುಕಿಕೊಂಡಿದ್ದ ಸುಮಾರು 400- 500 ವಿದ್ಯಾರ್ಥಿಗಳನ್ನು ಎಸ್‌ಡಿಆರ್‌ಎಫ್ ತಂಡ ರಕ್ಷಿಸಿದೆ. ಇನ್ನು ಪ್ರಾಣ ರಕ್ಷಣೆಗಾಗಿ ವಿದ್ಯುತ್ ಕಂಬ ಏರಿದ್ದ ಬಾಲಕನನ್ನು ಎಸ್‌ಡಿಆರ್‌ಎಫ್ ಸಿಬ್ಬಂದಿ ಹಗ್ಗದ ಸಹಾಯದಿಂದ ರಕ್ಷಿಸಿದರು.
ಸಹಸ್ತ್ರಧಾರ, ಮಾಲ್ದೇವ್ತಾ, ಸಂತ್ಲಾ ದೇವಿ ಮತ್ತು ದಲನ್‌ವಾಲಾಗಳು ಹೆಚ್ಚು ಹಾನಿಗೊಳಗಾಗಿದ್ದು, ಸಹಸ್ತ್ರಧಾರದಲ್ಲಿ 192 ಮಿಮೀ, ಮಾಲ್ದೇವ್ತಾದಲ್ಲಿ 141.5 ಮಿಮೀ, ಹಾಥಿ ಬರ್ಕಲಾ ಮತ್ತು ಜಾಲಿ ಗ್ರಾಂಟ್ ನಲ್ಲಿ ತಲಾ 92.5 ಮಿಮೀ ಮತ್ತು ಕಲ್ಸಿ 83.5 ಮಿಮೀ ಮಳೆಯಾಗಿದೆ. ಜನರು, ಪ್ರವಾಸಿಗರು ಸುರಕ್ಷತೆ ಹಿನ್ನೆಲೆಯಲ್ಲಿ ಎಲ್ಲಿಯೂ ಹೊರಗೆ ಹೋಗದಂತೆ ಪೊಲೀಸರು ಮನವಿ ಮಾಡಿದ್ದಾರೆ. ನೈನಿತಾಲ್‌ನಲ್ಲಿ ಭಾರೀ ಮಳೆಯಿಂದ ಉಂಟಾದ ಭೂಕುಸಿತದಿಂದಾಗಿ ರಸ್ತೆಗಳು ಬಿರುಕು ಬಿಟ್ಟಿವೆ. ಮಜ್ರಾ ಗ್ರಾಮದ ನಿವಾಸಿಗಳು ರಸ್ತೆಯಲ್ಲಿ ಆಶ್ರಯ ಪಡೆದರು.
ಇದನ್ನೂ ಓದಿ: Self Harming: ಮದುವೆ ವಿಚಾರಕ್ಕೆ ಗಲಾಟೆ, ಮಗಳು ಬಾವಿಗೆ ಹಾರಿ ಆತ್ಮಹತ್ಯೆ, ರಕ್ಷಿಸಲು ಹೋದ ತಾಯಿಯೂ ಸಾವು
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಸ್ಥಳೀಯ ಶಾಸಕರು ಮತ್ತು ಹಿರಿಯ ಅಧಿಕಾರಿಗಳು ಅವರೊಂದಿಗೆ ಇದ್ದರು. ಭಾರಿ ಮಳೆಯ ನಂತರ ಉತ್ತರಾಖಂಡದಲ್ಲಿ ಉಂಟಾಗಿರುವ ಪರಿಸ್ಥಿತಿಯ ಬಗ್ಗೆ ಧಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಮಾಹಿತಿ ನೀಡಿದ್ದಾರೆ.