ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Custody Death: ಲಾಕ್‌ ಅಪ್‌ ಡೆತ್‌ ಪ್ರಕರಣ; 25 ಲಕ್ಷ ರೂ. ಪರಿಹಾರ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಕಳೆದ ತಿಂಗಳು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ದೇವಾಲಯದ ಭದ್ರತಾ ಸಿಬ್ಬಂದಿ 27 ವರ್ಷದ ಅಜಿತ್ ಕುಮಾರ್ ಅವರ ಕುಟುಂಬಕ್ಕೆ 25 ಲಕ್ಷ ರೂಪಾಯಿಗಳ ಮಧ್ಯಂತರ ಪರಿಹಾರವನ್ನು ನೀಡುವಂತೆ ಮದ್ರಾಸ್ ಹೈಕೋರ್ಟ್ ಇಂದು ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಲಾಕ್‌ ಅಪ್‌ ಡೆತ್‌ ಕೇಸ್‌; ಹೈ ಕೋರ್ಟ್‌ನಿಂದ ಸರ್ಕಾರಕ್ಕೆ ಚಾಟಿ

Profile Vishakha Bhat Jul 22, 2025 4:22 PM

ಚೆನ್ನೈ: ಕಳೆದ ತಿಂಗಳು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ (Custody Death) ದೇವಾಲಯದ ಭದ್ರತಾ ಸಿಬ್ಬಂದಿ 27 ವರ್ಷದ ಅಜಿತ್ ಕುಮಾರ್ ಅವರ ಕುಟುಂಬಕ್ಕೆ 25 ಲಕ್ಷ ರೂಪಾಯಿಗಳ ಮಧ್ಯಂತರ ಪರಿಹಾರವನ್ನು ನೀಡುವಂತೆ ಮದ್ರಾಸ್ ಹೈಕೋರ್ಟ್ ಇಂದು ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಶಿವಗಂಗಾ ಜಿಲ್ಲೆಯ ಮಾದಾಪುರಂ ದೇವಸ್ಥಾನದಲ್ಲಿ ಭದ್ರತಾ ಸಿಬ್ಬಂದಿಯಾಗಿ ಅಜಿತ್ ಕುಮಾರ್ ಕೆಲಸ ಮಾಡುತ್ತಿದ್ದರು. ಕಳೆದ ತಿಂಗಳು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅವರನ್ನು ವಶಕ್ಕೆ ಪಡೆದು ಕೊಂಡಿದ್ದರು. ನಂತರ ಅಜಿತ್‌ ಕಸ್ಟಡಿಯಲ್ಲಿ ಮೃತಪಟ್ಟಿದ್ದರು.

ಏನಿದು ಪ್ರಕರಣ?

ದೇವಾಲಯದ ಭದ್ರತಾ ಸಿಬ್ಬಂದಿಯಾಗಿದ್ದ ಅಜಿತ್‌ಗೆ ಭಕ್ತೆಯೊಬ್ಬರು ತಮ್ಮ ಕಾರನ್ನು ಪಾರ್ಕ್‌ ಮಾಡಲು ಹೇಳಿದ್ದರು. ಆದರೆ ಅಜಿತ್‌ಗೆ ಕಾರು ಚಲಾಯಿಸಲು ಬರುತ್ತಿರಲಿಲ್ಲ. ಹೀಗಾಗಿ ಆತ ಬೇರೊಬ್ಬನ ಸಹಾಯ ಪಡೆದುಕೊಂಡಿದ್ದ. ನಂತರ ವಾಹನದಿಂದ ಸ್ವಲ್ಪ ನಗದು ಮತ್ತು ಚಿನ್ನ ಕಾಣೆಯಾಗಿದೆ ಎಂದು ಭಕ್ತ ಆರೋಪಿಸಿದ್ದರು. ಪೊಲೀಸರು ಅಜಿತ್ ಅವರನ್ನು ವಿಚಾರಣೆಗೆ ಒಳಪಡಿಸಿದರು. ಬಳಿಕ ಅಜಿತ್‌, ಅನುಮಾನಾಸ್ಪದ ಸಂದರ್ಭಗಳಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದ. ಮರಣೋತ್ತರ ಪರೀಕ್ಷೆಯ ವರದಿಯು ಅವರ ದೇಹದ ಮೇಲೆ 40 ಕ್ಕೂ ಹೆಚ್ಚು ಗಾಯಗಳನ್ನು ಬಹಿರಂಗಪಡಿಸಿತ್ತು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರ ವಿವರವಾದ ವರದಿಯ ಆಧಾರದ ಮೇಲೆ ಇದನ್ನು ದೈಹಿಕ ಕಿರುಕುಳವನ್ನು ಒಳಗೊಂಡ ಕಸ್ಟಡಿ ಸಾವು ಎಂದು ದೃಢಪಡಿಸಿತು. ನಾಗರಿಕ ಸಮಾಜದಲ್ಲಿ ಇಂತಹ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ ಮತ್ತು ಅದನ್ನು ದೃಢವಾಗಿ ಎದುರಿಸಬೇಕು ಎಂದು ನ್ಯಾಯಾಲಯ ಹೇಳಿದೆ. ತಮಿಳುನಾಡು ಸರ್ಕಾರ ಈ ಹಿಂದೆ ಅಜಿತ್ ಸಹೋದರನಿಗೆ 7.5 ಲಕ್ಷ ರೂ. ಪರಿಹಾರ, ವಸತಿ ನಿವೇಶನ ಮತ್ತು ಸರ್ಕಾರಿ ಉದ್ಯೋಗವನ್ನು ನೀಡುವುದಾಗಿ ಹೇಳಿತ್ತು. ಹೈಕೋರ್ಟ್‌ನ ಮಧುರೈ ಪೀಠ ನಿನ್ನೆ ರಾಜ್ಯವು ಹೆಚ್ಚುವರಿಯಾಗಿ 25 ಲಕ್ಷ ರೂ. ಮಧ್ಯಂತರ ಪರಿಹಾರವನ್ನು ನೀಡಬೇಕು ಎಂದು ತೀರ್ಪು ನೀಡಿತು.

ಕ್ರಿಮಿನಲ್ ವಿಚಾರಣೆ ಪೂರ್ಣಗೊಂಡ ನಂತರ ಹೆಚ್ಚಿನ ಪರಿಹಾರಕ್ಕಾಗಿ ಅರ್ಜಿದಾರರು ಮತ್ತೆ ನ್ಯಾಯಾಲಯವನ್ನು ಸಂಪರ್ಕಿಸಲು ಸ್ವಾತಂತ್ರ್ಯವಿದೆ ಎಂದು ನ್ಯಾಯಾಲಯವು ಹೇಳಿದೆ. ಇದಕ್ಕೂ ಮೊದಲು, ಮಧುರೈ ಪೀಠವು "ಒಬ್ಬ ಕೊಲೆಗಾರ ಕೂಡ ಇಂತಹ ಕ್ರೌರ್ಯವನ್ನು ಮಾಡುತ್ತಿರಲಿಲ್ಲ ಎಂದು ಟೀಕಿಸಿದೆ. ಹೆಚ್ಚುತ್ತಿರುವ ಸಾರ್ವಜನಿಕ ಆಕ್ರೋಶದ ನಂತರ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಕರಣವನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಿದರು, "ತನಿಖೆಯ ಬಗ್ಗೆ ಯಾವುದೇ ಪ್ರಶ್ನೆಗಳು ಇರಬಾರದು" ಎಂದು ಪ್ರತಿಪಾದಿಸಿದರು. ಅವರು ಅಜಿತ್ ಕುಟುಂಬಕ್ಕೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Murder Case: ಮಾರಕಾಸ್ತ್ರಗಳಿಂದ ಕೊಚ್ಚಿ ರಿಯಲ್‌ ಎಸ್ಟೇಟ್‌ ಉದ್ಯಮಿಯ ಕೊಲೆ, ಕೊಲೆ ಹಿಂದೆ ಲವ್‌ ಸ್ಟೋರಿ

ಶಿವಗಂಗೈ ಪೊಲೀಸ್ ಸಿಬ್ಬಂದಿ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ ಮತ್ತು ನ್ಯಾಯಾಲಯದ ನಿರ್ದೇಶನದಂತೆ ನಿಕಿತಾ ಎಂಬ ಮಹಿಳೆ ಸಲ್ಲಿಸಿದ ಮೂಲ ಕಳ್ಳತನ ದೂರಿನ ಬಗ್ಗೆಯೂ ತನಿಖೆ ನಡೆಸಲಿದೆ. ಇಲ್ಲಿಯವರೆಗೆ, ಚಿತ್ರಹಿಂಸೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಅಧಿಕಾರಿಗಳು ಸೇರಿದಂತೆ ಐದು ಪೊಲೀಸ್ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಅವರನ್ನು ಅಮಾನತುಗೊಳಿಸಲಾಗಿದೆ ಮತ್ತು ಶಿವಗಂಗೈ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅವರನ್ನು ಕಡ್ಡಾಯ ರಜೆಗೆ ಕಳುಹಿಸಲಾಗಿದೆ. ಒಂದು ವಾರದೊಳಗೆ ತನಿಖಾಧಿಕಾರಿಗಳನ್ನು ನೇಮಿಸಿ ಆಗಸ್ಟ್ 20 ರೊಳಗೆ ಅಂತಿಮ ವರದಿಯನ್ನು ಸಲ್ಲಿಸುವಂತೆ ಹೈಕೋರ್ಟ್ ಸಿಬಿಐಗೆ ನಿರ್ದೇಶನ ನೀಡಿದೆ.