ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪಾಕಿಸ್ತಾನದ ಪರಮಾಣು ಯೋಜನೆಗಳನ್ನು ಬಯಲು ಮಾಡಲು ಅಜಿತ್ ದೋವಲ್‌ಗೆ ನೆರವಾದ ಕೂದಲಿನ ಎಳೆ; ಇಲ್ಲಿದೆ ರೋಚಕ ಕಾರ್ಯಾಚರಣೆಯ ಇಂಚಿಂಚು ಮಾಹಿತಿ

Ajit Doval: ಇಂಟೆಲಿಜೆನ್ಸ್ ಬ್ಯುರೋ ಮುಖ್ಯಸ್ಥರಾಗಿ ನಿವೃತ್ತರಾದ ಅಜಿತ್‌ ದೋವಲ್‌ ಸದ್ಯ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪಾಕಿಸ್ತಾನದಲ್ಲಿ ಅವರು ಭಿಕ್ಷುಕನಂತೆ ಅಲೆದಾಡಿ ರಹಸ್ಯ ಸಂಗ್ರಹಿಸಿದ್ದ ಕಾರ್ಯಾಚರಣೆಯೇ ರಣ ರೋಚಕವಾದುದು. ಈ ಕುರಿತಾದ ವಿವರ ಇಲ್ಲಿದೆ.

ಅಜಿತ್‌ ದೋವಲ್‌

ದೆಹಲಿ: ಇಂಟೆಲಿಜೆನ್ಸ್ ಬ್ಯುರೋ ಮುಖ್ಯಸ್ಥರಾಗಿ ನಿವೃತ್ತರಾದ ಅಜಿತ್‌ ದೋವಲ್‌ (Ajit Doval) ಸದ್ಯ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗೆ ಸಂಬಂಧಿಸಿದ ಬೇಹುಗಾರಿಕೆ ವಲಯದಲ್ಲಿ ದಂತಕಥೆಯಾಗಿರುವ ದೋವಲ್‌ ಭಯೋತ್ಪಾದನೆ ವಿರುದ್ಧ ಪಾಕಿಸ್ತಾನದಲ್ಲಿ ನಡೆದಿರುವ ಕಾರ್ಯಾಚರಣೆಗಳಲ್ಲಿ ವೇಷ ಮೆರೆಸಿ ಪಾಲ್ಗೊಂಡು ಶತ್ರು ದೇಶದ ಎದೆಯಲ್ಲಿ ನಡುಕ ಹುಟ್ಟಿಸಿದವರು. ಅವರ ಕಾರ್ಯಾಚರಣೆಯ ಕುರಿತಾದ ಹಲವು ಆಸಕ್ತಿದಾಯಕ ವಿಚಾರಗಳು ಲೇಖಕ ಡಿ. ದೇವದತ್‌ (D Devdutt) ಬರೆದ ʼಅಜಿತ್‌ ದೋವಲ್ ಆನ್‌ ಎ ಮಿಷನ್‌ʼ (Ajit Doval - On a Mission) ಎಂಬ ಕೃತಿಯಲ್ಲಿದೆ. ದೋವಲ್‌ ನಡೆಸಿದ ಮಹತ್ವದ ಕಾರ್ಯಾಚರಣೆಯೊಂದರ ವಿವರ ಇಲ್ಲಿದೆ.

1980ರಲ್ಲಿ ಅವರು ಹರಿದ ಶಾಲು, ಕೆದರಿದ ಕೂದಲಿನೊಂದಿಗೆ ಯಾರಿಗೂ ಅನುಮಾನ ಬಾರದಂತೆ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಓಡಾಡುತ್ತಿದ್ದರು. ನಾಣ್ಯಗಳನ್ನು ಸಂಗ್ರಹಿಸುತ್ತ ಗಲ್ಲಿಗಳಲ್ಲಿ ಓಡಾಡುವ ಭಿಕ್ಷುಕನ ವೇಷ ಧರಿಸಿದ್ದರು. ಆ ಹರಿದ ಶಾಲು ಮತ್ತು ಕೆದರಿದ ಕೂದಲಿನ ಹಿಂದೆ ಅಪ್ಪಟ ದೇಶಭಕ್ತನ ಚಾಣಾಕ್ಷತನವಿದೆ ಎನ್ನುವುದು ಅಲ್ಲಿನವರ ಅರಿವಿಗೆ ಬಂದಿರಲೇ ಇಲ್ಲ. ಇಂಟೆಲಿಜೆನ್ಸ್ ಬ್ಯುರೋ ಮತ್ತು ಸಿಕ್ಕಿಂ ಕಾರ್ಯಾಚರಣೆಗಾಗಿ ಅದಾಗಲೇ ಪ್ರಶಸ್ತಿ ಪಡೆದಿದ್ದ ದೋವಲ್ ಅವರ ಉದ್ದೇಶ ಪಾಕಿಸ್ತಾನದ ರಹಸ್ಯ ಪರಮಾಣು ಯೋಜನೆಗಳ ಮಾಹಿತಿಯನ್ನು ಅದರ ಅತ್ಯಂತ ಸುರಕ್ಷಿತ ಸಂಶೋಧನಾ ವಲಯದಿಂದ ಬಯಲಿಗೆಳೆಯುವುದಾಗಿತ್ತು.

ಆ ವೇಳೆಗಾಗಲೇ ಪಾಕಿಸ್ತಾನವು ಯಾವುದೇ ರೀತಿಯಿಂದಲಾದರೂ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯಲು ದೃಢನಿಶ್ಚಯ ಮಾಡಿತ್ತು. ಭಾರತದ 1974ರ ಪರಮಾಣು ಪರೀಕ್ಷೆಯು ಚೀನಾದಂತಹ ದೇಶಗಳ ಬೆಂಬಲದೊಂದಿಗೆ ತನ್ನದೇ ಆದ ಪರಮಾಣು ಕಾರ್ಯಕ್ರಮವನ್ನು ಆಕ್ರಮಣಕಾರಿಯಾಗಿ ಮುಂದುವರಿಸಲು ಪಾಕಿಸ್ತಾನವನ್ನು ಪ್ರೇರೇಪಿಸಿತ್ತು. ಭಾರತಕ್ಕೆ ಈ ರಹಸ್ಯ ಪ್ರಯತ್ನಗಳ ಬಗ್ಗೆ ಬಲವಾದ ಪುರಾವೆ ಬೇಕಾಗಿತ್ತು. ಹೀಗಾಗಿ ಈ ರಹಸ್ಯವನ್ನು ಬೇಧಿಸುವ ಜವಾಬ್ದಾರಿಯನ್ನು ದೋವಲ್ ಅವರಿಗೆ ವಹಿಸಲಾಗಿತ್ತು.

ಈ ಸುದ್ದಿಯನ್ನೂ ಓದಿ: Operation Sindoor: ಆಪರೇಷನ್‌ ಸಿಂಧೂರ್‌ ಬಗ್ಗೆ ಅಮೆರಿಕಕ್ಕೆ ವಿವರಿಸಿದ ಅಜಿತ್‌ ದೋವಲ್‌; ಸಂಘರ್ಷ ಶೀಘ್ರದಲ್ಲಿಯೇ ಕೊನೆಯಾಗಲಿ ಎಂದ ಡೊನಾಲ್ಡ್‌ ಟ್ರಂಪ್‌

ಖಾನ್ ಸಂಶೋಧನಾ ಪ್ರಯೋಗಾಲಯದ (Khan Research Laboratories-KRL) ನೆಲೆಯಾಗಿರುವ ಇಸ್ಲಾಮಾಬಾದ್‌ನ ಕಹುತಾ ಸಾಮಾನ್ಯ ಪಟ್ಟಣವಾಗಿರಲಿಲ್ಲ. ಇಲ್ಲಿ ವಾಸಿಸುತ್ತಿದ್ದ ವಿಜ್ಞಾನಿಗಳು, ಭದ್ರತಾ ಸಿಬ್ಬಂದಿ ಮತ್ತು ಸರ್ಕಾರಿ ಅಧಿಕಾರಿಗಳು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುತ್ತಿದ್ದರು. ಸುಲಭವಾಗಿ ರಹಸ್ಯವನ್ನು ಬಾಯಿ ಬಿಡುತ್ತಿರಲಿಲ್ಲ. ರಾಷ್ಟ್ರದ ಭವಿಷ್ಯವನ್ನೇ ಬದಲಾಯಿಸಬಹುದಾದ ಗುಟ್ಟನ್ನು ಯಾರಿಗೂ ಬಿಟ್ಟು ಕೊಡದೆ ಕಾಪಾಡುತ್ತಿದ್ದರು. ತಿಂಗಳುಗಳ ಕಾಲ ಭಿಕ್ಷುಕನಂತೆ ರಸ್ತೆಯಲ್ಲಿ ಅಲೆದಾಡಿದ ಅಜಿತ್ ದೋವಲ್ ಅವರ ಚಟುವಟಿಕೆಗಳನ್ನು ಗಮನಿಸುತ್ತಿದ್ದರು. ಪ್ರತಿಯೊಂದು ಸನ್ನೆ, ಚಲನೆ ಮತ್ತು ದೈನಂದಿನ ಚಟುವಟಿಕೆಗಳನ್ನು ಮನನ ಮಾಡಿಕೊಳ್ಳುತ್ತಿದ್ದರು.

ಕೂದಲಿನ ಮೂಲಕ ಭಯಾನಕ ರಹಸ್ಯ ಬಯಲು

ಕೆಆರ್‌ಎಲ್ ವಿಜ್ಞಾನಿಗಳು ಹೆಚ್ಚಾಗಿ ಭೇಟಿ ನೀಡುವ ಕ್ಷೌರಿಕನ ಸಣ್ಣ ಅಂಗಡಿಯೊಂದರಲ್ಲಿ ದೋವಲ್‌ ಅವರ ಸಾಹಸಕ್ಕೆ ಬಲವಾದ ಸಾಕ್ಷಿ ಸಿಕ್ಕಿತ್ತು. ಇತರರು ನೆಲದ ಮೇಲೆ ಉಳಿದಿರುವ ಸಣ್ಣ ಕೂದಲಿನ ಎಳೆಗಳನ್ನು ನಿರ್ಲಕ್ಷಿಸಿದರೆ, ದೋವಲ್ ಅವುಗಳನ್ನು ಎಚ್ಚರಿಕೆಯಿಂದ ಸಂಗ್ರಹಿಸಿದರು. ಬಳಿಕ ಅವರು ಅದರ ಮಾದರಿಗಳನ್ನು ವಿಶ್ಲೇಷಣೆಗಾಗಿ ಭಾರತಕ್ಕೆ ಕಳುಹಿಸಿದರು. ಈ ಪರೀಕ್ಷೆ ವೇಳೆ ಕೂದಲಿನಲ್ಲಿ ಯುರೇನಿಯಂ ಮತ್ತು ವಿಕಿರಣದ ಕುರುಹುಗಳು ಕಂಡು ಬಂದವು. ಇದು ಭಾರತ ಬಹಳ ಹಿಂದಿನಿಂದಲೂ ಭಯಪಡುತ್ತಿದ್ದ, ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂಬ ಅಂಶವನ್ನು ದೃಢಪಡಿಸಿತು. ಈ ಗುಪ್ತಚರ ಮಾಹಿತಿಯು ಭಾರತದ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರವನ್ನು ರೂಪಿಸಲು ಸಹಾಯ ಮಾಡಿತು.

ಈ ಕಾರ್ಯಾಚರಣೆಯು ಅಲ್ಪಾವಧಿಯದ್ದಾಗಿರಲಿಲ್ಲ. ಬರೋಬ್ಬರಿ 6 ವರ್ಷಗಳ ಕಾಲ ದೋವಲ್ ನಿರಂತರವಾಗಿ ಪಾಕಿಸ್ತಾನಲ್ಲಿ ಬೇಹುಗಾರಿಕೆ ನಡೆಸಿದರು. ಅವರ ಕಾರ್ಯಾಚರಣೆಯು ಸಾವಿಗೆ ಕಾರಣವಾಗಬಹುದಾದ ಮತ್ತು ಭಾರತದ ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟು ಮಾಡಬಹುದಾದ ಅಪಾಯವನ್ನು ಹೊಂದಿತ್ತು. ಆದರೂ ಅವರು ಎದೆಗುಂದಿರಲಿಲ್ಲ. ಅವರ ಪ್ರಯತ್ನಗಳು ಪಾಕಿಸ್ತಾನದ ಪರಮಾಣು ಪರೀಕ್ಷೆಯನ್ನು ಸುಮಾರು 15 ವರ್ಷಗಳ ಕಾಲ ಸ್ಥಗಿತಗೊಳಿಸಿದವು ಎನ್ನುವುದು ಗಮನಾರ್ಹ ಅಂಶ. ಈ ಎಲ್ಲ ಮುಖ್ಯ ವಿವರಗಳು ʼಅಜಿತ್‌ ದೋವಲ್ ಆನ್‌ ಎ ಮಿಷನ್‌ʼ ಕೃತಿಯಲ್ಲಿದೆ.

ಅಜಿತ್ ದೋವಲ್ ತಂದೆ ಸೈನ್ಯದಲ್ಲಿ ಅಧಿಕಾರಿಯಾಗಿದ್ದವರು. ಉತ್ತರಾಖಂಡದಲ್ಲಿ 1945ರಲ್ಲಿ ಜನಿಸಿದ ಅಜಿತ್ ದೋವಲ್, ಅಜ್ಮೀರ್‌ನ ರಾಷ್ಟ್ರೀಯ ಸೈನಿಕ್ ಸ್ಕೂಲ್‌ನಲ್ಲಿ ಓದಿ, ನಂತರ ಆಗ್ರಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.