ಉತ್ತರ ಪ್ರದೇಶದ ಕಾನ್ಪುರದಲ್ಲಿ 'ಐ ಲವ್ ಮುಹಮ್ಮದ್' ಪೋಸ್ಟರ್ ವಿವಾದದ ಬಳಿಕ ಬರೇಲಿಯಲ್ಲಿಯೂ ಶುಕ್ರವಾರ ನಮಾಜ್ ಪ್ರಾರ್ಥನೆಯ ನಂತರ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಗಲಭೆ ನಡೆದ ತಕ್ಷಣವೇ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಸೆಪ್ಟೆಂಬರ್ 4 ರಂದು ಪೊಲೀಸರು 'ಐ ಲವ್ ಮುಹಮ್ಮದ್' ಪೋಸ್ಟರ್ ಹೊಂದಿರುವ ಟೆಂಟ್ ಅನ್ನು ತೆಗೆದುಹಾಕಿದ ನಂತರ ಕಾನ್ಪುರದಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಧ್ವನಿ ಎತ್ತಲು ಮತ್ತು ಜ್ಞಾಪಕ ಪತ್ರವನ್ನು ಸಲ್ಲಿಸಲು ಧರ್ಮಗುರುವೊಬ್ಬರು ನೀಡಿದ ಕರೆಗೆ ಪ್ರತಿಕ್ರಿಯೆಯಾಗಿ ಶುಕ್ರವಾರದ ಪ್ರಾರ್ಥನೆಯ ನಂತರ ಬರೇಲಿಯ ಇಸ್ಲಾಮಿಯಾ ಮೈದಾನದ ಬಳಿ ಭಾರಿ ಜನಸಮೂಹ ಜಮಾಯಿಸಿತು.
ಶುಕ್ರವಾರದ ಪ್ರಾರ್ಥನೆಯ ನಂತರ, ಭಾರೀ ಪೊಲೀಸ್ ಭದ್ರತೆಯ ನಡುವೆ ಜನಸಮೂಹ ಜಮಾಯಿಸಿತು. ಕೆಲವರು ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಿದರು. ಕೆಲವು ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ನಂತರ, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಉತ್ತರ ಪ್ರದೇಶದ ಕಾನ್ಪುರದಲ್ಲಿ. ಅಲ್ಲಿ ಪ್ರವಾದಿ ಮೊಹಮ್ಮದ್ ಅವರ ಜನ್ಮದಿನವಾದ ಈದ್ ಮಿಲಾದ್ ಉನ್ ನಬಿ ಹಬ್ಬದ ಪ್ರಯುಕ್ತ ಮೆರವಣಿಗೆ ನಡೆದಿತ್ತು. ಮೆರವಣಿಗೆಯಲ್ಲಿ ‘ಐ ಲವ್ ಮೊಹಮ್ಮದ್’ ಎಂಬ ಬರಹ ಇರುವ ನಾಮಫಲಕ ಬಳಸಲಾಗಿತ್ತು. ಆದರೆ, ಇದಕ್ಕೆ ಹಿಂದೂ ಸಮಾಜದ ಕೆಲವರಿಂದ ಆಕ್ಷೇಪ ವ್ಯಕ್ತವಾಗಿತ್ತು. ಮುಸ್ಲಿಂ ಯುವಕರು ಹಿಂದೂ ಧಾರ್ಮಿಕ ಪೋಸ್ಟರ್ ಹರಿದಿದ್ದಾರೆಂದು ಆರೋಪಿಸಲಾಗಿತ್ತು.
ಗಲಾಟೆ ಶುರುವಾದ ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಫಲಕ ತೆಗೆಸಿದ್ದರು. ಸಾಮರಸ್ಯ ಕದಡಿದ ಆರೋಪದಲ್ಲಿ 24 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಪೊಲೀಸರ ಈ ಕ್ರಮಕ್ಕೆ ಕಾನ್ಪುರ ಮುಸ್ಲಿಮರು ಆಕ್ರೋಶ ವ್ಯಕ್ತಪಡಿಸಿ ಧರಣಿ ಮಾಡಿದ್ದರು. ಶಾಂತಿಯುತವಾಗಿ ಐ ಲವ್ ಮೊಹಮ್ಮದ್ ಪೋಸ್ಟರ್ ಪ್ರದರ್ಶನ ಮಾಡಲು ಕರೆ ನೀಡಿದ್ದರು. ಇದಾದ ಬಳಿಕ ಉತ್ತರ ಪ್ರದೇಶ, ಗುಜರಾತ್ ಸೇರಿ ಹಲವು ರಾಜ್ಯಗಳಲ್ಲಿ ‘ಐ ಲವ್ ಮೊಹಮ್ಮದ್’ ಬ್ಯಾನರ್ಗಳನ್ನು ಹಿಡಿದು ರ್ಯಾಲಿಗಳನ್ನು ಮಾಡಲಾಗಿದೆ.
ಈ ಸುದ್ದಿಯನ್ನೂ ಓದಿ: Davanagere news: ರಾಜ್ಯಕ್ಕೂ ಕಾಲಿಟ್ಟ ʼಐ ಲವ್ ಮೊಹಮ್ಮದ್ʼ ಗಲಾಟೆ, ದಾವಣಗೆರೆ ಉದ್ವಿಗ್ನ
ಏತನ್ಮಧ್ಯೆ, ಐ ಲವ್ ಮೊಹಮ್ಮದ್ ಪೋಸ್ಟರ್‌ಗೆ ಪ್ರತಿಯಾಗಿ ಐ ಲವ್ ಮಹದೇವ್ ಎಂದು ಹಿಂದೂ ಪರ ಕಾರ್ಯಕರ್ತರು ಅಭಿಯಾನ ಆರಂಭಿಸಿದ್ದಾರೆ. ಇದೇ ವಿಚಾರವಾಗಿ ಗುಜರಾತ್‌ನ ಗಾಂಧಿನಗರ ಜಿಲ್ಲೆಯ ದಹೇಗಾಮ್‌ನ ಬಹಿಯಾಲ್ ಗ್ರಾಮದಲ್ಲಿ ಗರ್ಭಾ ಆಚರಣೆ ವೇಳೆ ಎರಡು ಸಮುದಾಯಗಳ ನಡುವೆ ಘರ್ಷಣೆ ಭುಗಿಲೆದ್ದಿತ್ತು.