ನವದೆಹಲಿ: ಭಾರತೀಯ ಎಂಜಿನಿಯರ್ (Indian Engineers) ಜೋಡಿಯೊಂದು ವಿಚಿತ್ರ ಸಂಶೋಧನೆಗಾಗಿ ಇರುವ ವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು (Ig Nobel Prize) ಗೆದ್ದುಕೊಂಡಿದೆ. ವಾಸನೆ ಬೀರುವ ಶೂಗಳಿಗೆ ಪರಿಹಾರದ ದಾರಿ ತೋರಿದ ಶಿವ ನಾಡರ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ವಿಕಾಶ್ ಕುಮಾರ್ (Vikash Kumar) ಮತ್ತು ಅವರ ವಿದ್ಯಾರ್ಥಿ ಸಂಶೋಧಕ ಸಾರ್ಥಕ್ ಮಿತ್ತಲ್ (Sarthak Mittal) 2025ರ ವಿಲಕ್ಷಣ ವಿಜ್ಞಾನದ ನೊಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇವರು ಶೂಗಳ ವಾಸನೆ ಹೋಗಲಾಡಿಸಲು ಯುವಿ ದೀಪಗಳನ್ನು ಅಳವಡಿಸಿರುವ ಶೂ ರಾಕ್‌ಗಳನ್ನು ಸಂಶೋಧಿಸಿದ್ದು, ಇದು ಜಾಗತಿಕ ಮನ್ನಣೆ ಪಡೆದಿದೆ.
ಶೂಗಳ ದುರ್ವಾಸನೆಯ ವಿರುದ್ಧ ಹೋರಾಡಲು ಯುವಿ ದೀಪಗಳನ್ನು ಅಳವಡಿಸಲಾದ ಶೂ ರಾಕ್‌ಗಳನ್ನು ಮಾಡಿರುವ ವಿಕಾಶ್ ಕುಮಾರ್ ಮತ್ತು ಸಾರ್ಥಕ್ ಮಿತ್ತಲ್ ಅವರ ಈ ಸಾಧನೆ ಹಾಸ್ಟೆಲ್‌ಗಳ ಸಾಮಾನ್ಯ ಸಮಸ್ಯೆಯನ್ನು ಪರಿಹರಿಸಿದೆ. ಜಗತ್ತಿನ ಗಮನ ಸೆಳೆದ ಈ ಶೂ ರಾಕ್ ನೇರಳಾತೀತ ಬೆಳಕಿನೊಂದಿಗೆ ಶೂಗಳ ವಾಸನೆಯನ್ನು ಹೋಗಲಾಡಿಸುತ್ತದೆ.
ವಿಚಿತ್ರ ನೊಬೆಲ್ ಪ್ರಶಸ್ತಿಯು ವಿಚಿತ್ರ ಸಂಶೋಧನೆಗಾಗಿ ನೀಡಲಾಗುವ ಗೌರವವಾಗಿದೆ. ಈ ವರ್ಷದ ವಿಜೇತರಲ್ಲಿ ಪಿಜ್ಜಾ ಪ್ರೀತಿಯ ಹಲ್ಲಿಗಳು, ಜೀಬ್ರಾ ಪಟ್ಟೆ ಹಸುಗಳು ಮತ್ತು ಯುವಿ ಶೂ ರಾಕ್‌ಗಳು ಸೇರಿವೆ.
ಶಿವ ನಾಡರ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ವಿಕಾಶ್ ಕುಮಾರ್ ಮತ್ತು ಪ್ರಸ್ತುತ ನ್ಯೂಜೆನ್ ಸಾಫ್ಟ್‌ವೇರ್‌ನಲ್ಲಿ ಕೆಲಸ ಮಾಡುತ್ತಿರುವ ಅವರ ವಿದ್ಯಾರ್ಥಿ ಸಂಶೋಧಕ ಸಾರ್ಥಕ್ ಮಿತ್ತಲ್ ವಾಸನೆ ಬೀರುವ ಶೂಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ನಿಯಂತ್ರಗೊಳಿಸುವ ಯುವಿ ದೀಪಗಳನ್ನು ಅಳವಡಿಸಲಾದ ರಾಕ್‌ಗಳನ್ನು ತಯಾರಿಸಿದ್ದಾರೆ. 2022ರಲ್ಲಿ ಪ್ರಕಟವಾದ ಇವರ ಸಂಶೋಧನ ವರದಿಗೆ ಇದೀಗ ಇಗ್ ನೊಬೆಲ್ ಪ್ರಶಸ್ತಿ ಸಿಕ್ಕಿದೆ.
ಮಿತ್ತಲ್ ಹಾಸ್ಟೆಲ್ ಕೊಠಡಿಗಳ ಹೊರಗೆ ಶೂಗಳು ರಾಶಿಯಾಗಿದ್ದುದನ್ನು ಗಮನಿಸಿ ಇದಕ್ಕೆ ಪರಿಹಾರ ಹುಡುಕುವ ಪ್ರಯತ್ನ ಮಾಡಿದರು. ವಿನ್ಯಾಸ, ಸೂಕ್ಷ್ಮ ಜೀವವಿಜ್ಞಾನ ಮತ್ತು ಎಂಜಿನಿಯರಿಂಗ್‌ನಿಂದ ಬಂದ ಜ್ಞಾನವನ್ನು ಬಳಸಿಕೊಂಡ ಅವರು ವಾಟರ್ ಪ್ಯೂರಿಫೈಯರ್, ಯುವಿ ದೀಪಗಳನ್ನು ಬಳಸಿ ಪಾದರಕ್ಷೆಗಳನ್ನು ಸ್ವಚ್ಛಗೊಳಿಸುವ ರಾಕ್ ತಯಾರಿಸಿದರು.
ಏನಿದು ಐಜಿ ನೊಬೆಲ್ ಪ್ರಶಸ್ತಿ ?
ವಿಜ್ಞಾನ ಹಾಸ್ಯ ನಿಯತಕಾಲಿಕೆ ಆನಲ್ಸ್ ಆಫ್ ಇಂಪ್ರೋಬಬಲ್ ರಿಸರ್ಚ್ 1991ರಲ್ಲಿ ಈ ಪ್ರಶಸ್ತಿಯನ್ನು ನೀಡಲು ಪ್ರಾರಂಭಿಸಿತು. ಇಗ್ ನೊಬೆಲ್‌ಗಳು ಜನರನ್ನು ನಗುವಂತೆ ಮಾಡುವ ಮತ್ತು ಅವರನ್ನು ಯೋಚಿಸುವಂತೆ ಮಾಡುವ ಸಂಶೋಧನೆಗಳಿಗೆ ನೀಡಲಾಗುತ್ತದೆ. ಪ್ರತಿ ವರ್ಷ ಬೋಸ್ಟನ್‌ನಲ್ಲಿ ವಿಜೇತರನ್ನು ಘೋಷಿಸಲಾಗುತ್ತದೆ. ಈ ಪ್ರಶಸ್ತಿ ವಿಜೇತರಲ್ಲಿ ಭಾರತವು ದಾಖಲೆಯನ್ನು ಹೊಂದಿದೆ.
ಈ ಬಾರಿಯ ಪ್ರಶಸ್ತಿ ವಿಜೇತರಲ್ಲಿ ಇಟಾಲಿಯನ್ ವಿಜ್ಞಾನಿಗಳು ಹಲ್ಲಿಗಳು ಪಿಜ್ಜಾ ಅಭಿರುಚಿಯನ್ನು ಹೇಗೆ ಬೆಳೆಸಿಕೊಂಡವು ಎಂಬುದನ್ನು ಅನ್ವೇಷಿಸಿದ್ದಾರೆ. ಜಪಾನಿನ ಸಂಶೋಧಕರು ನೊಣಗಳ ಕಡಿತವನ್ನು ನಿಯಂತ್ರಿಸಲು ಜೀಬ್ರಾ ಪಟ್ಟೆಗಳಿರುವ ಹಸುಗಳನ್ನು ಚಿತ್ರಿಸಿದರು. ಜರ್ಮನ್ ಮನಶ್ಶಾಸ್ತ್ರಜ್ಞರು ಆಲ್ಕೋಹಾಲ್ ಜನರು ವಿದೇಶಿ ಭಾಷೆಯನ್ನು ಉತ್ತಮವಾಗಿ ಮಾತನಾಡಲು ಸಹಾಯ ಮಾಡುತ್ತದೆ ಎಂಬುದನ್ನು ಕಂಡು ಹಿಡಿದಿದ್ದಾರೆ. ದಿವಂಗತ ಅಮೆರಿಕನ್ ವೈದ್ಯರು 35 ವರ್ಷಗಳಲ್ಲಿ ಉಗುರಿನ ಬೆಳವಣಿಗೆ ಬಗ್ಗೆ ಅಧ್ಯಯನ ನಡೆಸಿದ್ದಾರೆ.