ಶಿಮ್ಲಾ: ಹಿಮಾಚಲ ಪ್ರದೇಶದ (Himachal Pradesh) ಮಂಡಿ (Mandi) ಜಿಲ್ಲೆಯ ಗ್ರಾಮವೊಂದರ ಭರತ್ ರಾಜ್ (Bharat Raj) ಮತ್ತು ಅವರ ಪುತ್ರಿ ತನುಜಾ, ಜೂನ್ 30ರಂದು ಸಾವನ್ನು ಜಯಿಸಿ ನಾಲ್ವರ ಜೀವ ರಕ್ಷಿಸಿದ ಶೌರ್ಯ ಮೆರೆದಿದ್ದಾರೆ. ಆ ರಾತ್ರಿ, ಮೇಘಸ್ಫೋಟ, ಪ್ರವಾಹ, ಮತ್ತು ಭೂಕುಸಿತಗಳಿಂದ ಮನೆಗಳು, ಜಮೀನುಗಳು ನಾಶವಾದವು. 15 ಜನರು ಮೃತಪಟ್ಟು, ಐವರು ಗಾಯಗೊಂಡು, 27 ಜನ ನಾಪತ್ತೆಯಾಇದ್ದಾರೆ. ಈ ವೇಳೆ ಭರತ್ ರಾಜ್ ತಮ್ಮ ಮನೆಯಲ್ಲಿ 20 ಮಂದಿಗೆ ಆಶ್ರಯ ನೀಡಿದ್ದರು.
ಮಲೆ ಹೆಚ್ಚಾಗುತ್ತಿದ್ದಂತೆ ನೀರು ಮತ್ತು ಕೊಳಚೆಯ ರೌದ್ರತೆ ಏರಿತ್ತು. ತನುಜಾ, ಸಹೋದರಿ ಟ್ವಿಂಕಲ್, ತಾಯಿ ಮಾನ್ಸಾ ದೇವಿ, ತಾತ ಹರಿ ಸಿಂಗ್, ಮತ್ತು ರಾಧು ದೇವಿ ಎಂಬುವವರು ಕೊಳಚೆಯಲ್ಲಿ ಸಿಲುಕಿದ್ದರು. ಭರತ್ ರಾಜ್ ಧೈರ್ಯದಿಂದ ಟ್ವಿಂಕಲ್, ಮಾನ್ಸಾ ದೇವಿ, ಹರಿ ಸಿಂಗ್, ಮತ್ತು ರಾಧು ದೇವಿಯನ್ನು ರಕ್ಷಿಸಿದರು. ಆದರೆ ಅಷ್ಟರಲ್ಲಿ ತನುಜಾ ಕೆಲವು ಮೀಟರ್‌ಗಳಷ್ಟು ಕೊಚ್ಚಿಕೊಂಡು ಹೋಗಿದ್ದರು.
ಎದೆಯವರೆಗೆ ಕೊಳಚೆಯಲ್ಲಿ ಸಿಲುಕಿದ್ದ ತನುಜಾ, ಕಟ್ಟಿಗೆಯ ಸಹಾಯದಿಂದ ಸುರಕ್ಷಿತ ಸ್ಥಳಕ್ಕೆ ತಲುಪಿದರು. ಆಕೆ ಬದುಕುಳಿದಿದ್ದು ಅದ್ಭುತವೆಂದು ಗ್ರಾಮಸ್ಥರು ಹೇಳಿದ್ದಾರೆ. ಕುಟುಂಬದವರು ಮತ್ತೆ ಒಂದಾಗಿದ್ದು ಭಾವನಾತ್ಮಕ ಕ್ಷಣವಾಗಿತ್ತು. ರಕ್ಷಿಸಿದವರನ್ನು ಬಾಗ್ಸ್ಯಾದ್ ಶಾಲೆಯಲ್ಲಿರುವ ತಾತ್ಕಾಲಿಕ ಆಶ್ರಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ವಿರೋಧ ಪಕ್ಷದ ನಾಯಕ ಜೈ ರಾಮ್ ಠಾಕೂರ್, ಭರತ್ ರಾಜ್ ಮತ್ತು ತನುಜಾ ಅವರ ಶೌರ್ಯವನ್ನು ಶ್ಲಾಘಿಸಿದರು. ತನುಜಾ, “ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ, ಜೀವನೋಪಾಯವಿಲ್ಲ, ನನ್ನ ಶಿಕ್ಷಣಕ್ಕೆ ತೊಂದರೆಯಾಗಿದೆ” ಎಂದು ಸರ್ಕಾರದ ನೆರವಿಗೆ ಮನವಿ ಮಾಡಿದ್ದಾರೆ.
ಠಾಕೂರ್, ಕಳೆದ 10 ದಿನಗಳಿಂದ ತಮ್ಮ ಸೇರಾಜ್ ಕ್ಷೇತ್ರದಲ್ಲಿ ದುರಂತ ಪೀಡಿತರಿಗೆ ನೆರವು ನೀಡುತ್ತಿದ್ದಾರೆ. ಠಾಕೂರ್ ಅವರ ಪೂರ್ವಜರ ಮನೆಯೂ ಹಾನಿಗೊಳಗಾಗಿದ್ದು, ತೋಟದ ಅರ್ಧ ಭಾಗ ಕೊಚ್ಚಿಕೊಂಡು ಹೋಗಿದೆ. ಸೇರಾಜ್‌ನಲ್ಲಿ 500 ಕೋಟಿ ರೂ. ನಷ್ಟವಾಗಿದ್ದು, 1,000 ಕೋಟಿ ರೂ.ಗೆ ಏರಬಹುದು ಎಂದು ಠಾಕೂರ್ ತಿಳಿಸಿದರು. ಮನೆಗಳು, ಕೃಷಿಭೂಮಿ, ತೋಟಗಳು ನಾಶವಾಗಿದ್ದು, ಜನರ ಜೀವನೋಪಾಯ ಕಸಿದುಕೊಂಡಿದೆ. ಸರ್ಕಾರ ಪುನರ್ವಸತಿಯನ್ನು ತ್ವರಿತಗೊಳಿಸಿ, ತಾತ್ಕಾಲಿಕ ಮನೆಗಳನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.