ಭುವನೇಶ್ವರ: 8 ವರ್ಷದ ಜ್ಯೋತ್ಸ್ನಾ ದೇಹುರಿ (Jyotsna Dehuri) ಎಂಬ ಎರಡನೇ ತರಗತಿಯ ಬಾಲಕಿ ಗುರುವಾರ ಬೆಳಗ್ಗೆ ಶಾಲೆಗೆ ತೆರಳಿದ್ದಳು. ಆದರೆ ಸಂಜೆ 4 ಗಂಟೆಗೆ ತರಗತಿಗಳು ಮುಗಿದ ನಂತರವೂ ಆಕೆ ಮನೆಗೆ ಬಾರದ ಘಟನೆ ಒಡಿಶಾದ (Odisha) ಕಿಯೋಂಜರ್ (Keonjhar) ಜಿಲ್ಲೆಯಲ್ಲಿ ನಡೆದಿದೆ. ಹೌದು ಕಿಯೋಂಜರ್ ಜಿಲ್ಲೆಯ ಬನ್ಸ್‌ಪಾಲ್ ಬ್ಲಾಕ್‌ನ ಅಂಜಾರ್‌ನ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಬಾಲಕಿಯೊಬ್ಬಳು ಮನೆಗೆ ಮರಳದೆ ರಾತ್ರಿಯಿಡಿ ನರಳಾಡಿದ ದುರಂತವೊಂದು ಸಂಭವಿಸಿದೆ.
ಶಾಲೆ ಸಂಜೆ ಮುಗಿದ ನಂತರ ಸಿಬ್ಬಂದಿ ತರಗತಿಗಳ ಬೀಗ ಹಾಕಿಕೊಂಡು ದಿನದ ಕೆಲಸ ಮುಗಿಸಿ ತೆರಳಿದ್ದಾರೆ. ಇತ್ತ ಜ್ಯೋತ್ಸ್ನಾಳ ಕುಟುಂಬ ಮನೆಗೆ ಬಾರದ ಮಗಳನ್ನು ರಾತ್ರಿಯಿಡೀ ಹುಡುಕಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಸಿಬ್ಬಂದಿ ಜ್ಯೋತ್ಸ್ನಾ ಇನ್ನೂ ಒಳಗಿರುವುದನ್ನು ಗಮನಿಸದೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಅಲ್ಲೇ ಬಾಕಿಯಾದ ಬಾಲಕಿ ರಾತ್ರಿಯಿಡೀ ಅಲ್ಲೇ ಉಳಿಯುವ ಭಯದಿಂದಾಗಿ ಕಿಟಕಿಯ ಕಬ್ಬಿಣದ ಕಂಬಿಗಳ ಮೂಲಕ ಹೊರಗೆ ಬರಲು ಪ್ರಯತ್ನಿಸಿದ್ದಾಳೆ. ಆಕೆ ತನ್ನ ದೇಹವನ್ನು ಕಿಟಕಿಯಿಂದ ಹೊರತೆಗೆದರೂ, ತಲೆ ಕಂಬಿಗಳ ನಡುವೆ ಸಿಲುಕಿಕೊಂಡಿದೆ. ಇನ್ನೂ ರಾತ್ರಿಯಿಡೀ ಜ್ಯೋತ್ಸ್ನಾ ಈ ಅಸಹನೀಯ ಸ್ಥಿತಿಯಲ್ಲಿ ಕಳೆಯುವಂತಾಗಿದೆ.
ಈ ಸುದ್ದಿಯನ್ನು ಓದಿ: Viral Video: ಭಾರತ ಕೊಳೆಗೇರಿ, ಕಸದ ರಾಶಿಗಳಿರುವ ದೇಶವಲ್ಲ; ಇಂಡಿಯಾ ಬಹಳ ಸುಂದರವಾಗಿದೆ ಎಂದ ವಿದೇಶಿ ವ್ಲಾಗರ್
ಗುರುವಾರ ಬೆಳಗ್ಗೆ 9 ಗಂಟೆಗೆ ಶಾಲೆಯ ಅಡುಗೆ ಸಿಬ್ಬಂದಿ ಬೀಗ ತೆರೆದಾಗ, ಕಿಟಕಿಯಲ್ಲಿ ಸಿಲುಕಿರುವ ಜ್ಯೋತ್ಸ್ನಾಳನ್ನು ಕಂಡರು. ಗ್ರಾಮಸ್ಥರು ಮತ್ತು ಕುಟುಂಬದವರು ತಕ್ಷಣ ತರಗತಿಯ ಬಾಗಿಲು ತೆರೆದು, ಕಬ್ಬಿಣದ ಕಂಬಿಗಳನ್ನು ಬಗ್ಗಿಸಿ ಆಕೆಯನ್ನು ರಕ್ಷಿಸಿದರು. ಬಳಿಕ ಆಕೆಯನ್ನು ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಶಾಲಾ ಮತ್ತು ಸಾಮೂಹಿಕ ಶಿಕ್ಷಣ ಇಲಾಖೆಯ ಪ್ರಕಾರ ಜ್ಯೋತ್ಸ್ನಾ ಈಗ ಸುರಕ್ಷಿತವಾಗಿದ್ದಾಳೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತವು, ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಗೌರಹರಿ ಮಹಂತ ಅವರನ್ನು ಅಮಾನತುಗೊಳಿಸಿದೆ. ಈ ಘಟನೆ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಯ ಕೊರತೆಯನ್ನು ಬೆಳಕಿಗೆ ತಂದಿದೆ. ಶಿಕ್ಷಣ ಇಲಾಖೆಯ ಈ ಕ್ರಮವು ಇಂತಹ ಘಟನೆಗಳು ಮರುಕಳಿಸದಂತೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳ ಅಗತ್ಯವನ್ನು ಒತ್ತಿಹೇಳಿದೆ. ಜ್ಯೋತ್ಸ್ನಾಳ ಕುಟುಂಬ ಮತ್ತು ಗ್ರಾಮಸ್ಥರು ಶಾಲೆಯ ಆಡಳಿತದ ನಿರ್ಲಕ್ಷ್ಯವನ್ನು ಖಂಡಿಸಿದ್ದಾರೆ. ಈ ಘಟನೆಯಿಂದ ಶಾಲೆಯ ಸುರಕ್ಷತಾ ಕ್ರಮಗಳ ಬಗ್ಗೆ ರಾಜ್ಯಾದ್ಯಂತ ಚರ್ಚೆ ಆರಂಭವಾಗಿದೆ.