ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam Attack: ಪಹಲ್ಗಾಮ್ ದಾಳಿಕೋರರ ಮೊದಲ ಫೋಟೊ ಬೆಳಕಿಗೆ: ಆಪರೇಶನ್ ಮಹಾದೇವ್‌ನಲ್ಲಿ ಉಗ್ರರ ಹತ್ಯೆ

ಶ್ರೀನಗರದಲ್ಲಿ ನಡೆದ ಆಪರೇಷನ್ ಮಹಾದೇವ್ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯು ಮೂವರು ಶಂಕಿತ ಪಾಕಿಸ್ತಾನಿ ಭಯೋತ್ಪಾದಕರನ್ನು ಹತ್ಯೆಗೈದಿದೆ. ಈ ಭಯೋತ್ಪಾದಕರು ಮೂರು ತಿಂಗಳ ಹಿಂದೆ ಪಹಲ್ಗಾಮ್‌ನಲ್ಲಿ 26 ಜನರ ಸಾವಿಗೆ ಕಾರಣರಾಗಿದ್ದರು. ಸೇನೆ, ಜಮ್ಮು ಕಾಶ್ಮೀರ ಪೊಲೀಸ್ ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದು, ಭಯೋತ್ಪಾದಕರನ್ನು ಸದೆಬಡಿದೆ.

ನವದೆಹಲಿ: ಏಪ್ರಿಲ್ 22ರ ಪಹಲ್ಗಾಮ್ (Pahalgam) ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾದ ಮೂವರು ಉಗ್ರರಲ್ಲಿ ಇಬ್ಬರಾದ ಹಬೀಬ್ ತಾಹಿರ್ (Habib Tahir) ಮತ್ತು ಜಿಬ್ರಾನ್‌‌ನ (Jibran) ಮೊದಲ ಫೋಟೊ ಬೆಳಕಿಗೆ ಬಂದಿದೆ. ಇವರಿಬ್ಬರೂ ಪಾಕಿಸ್ತಾನದ ನಾಗರಿಕರಾಗಿದ್ದು (Pakistani Nationals) ಸೋಮವಾರ ಶ್ರೀನಗರದಲ್ಲಿ ಜಂಟಿ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಇವರು ಹತರಾದರು. ಲಷ್ಕರ್-ಎ-ತೊಯ್ಬಾದ ಉನ್ನತ ಕಮಾಂಡರ್ ಹಾಶಿಮ್ ಮೂಸಾ, ಈ ದಾಳಿಯ ಮಾಸ್ಟರ್‌ಮೈಂಡ್ ಆಗಿದ್ದು, ಇದೇ ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟಿದ್ದಾನೆ.

ವರದಿ ಪ್ರಕಾರ, ದಾಚಿಗಾಮ್ ಕಾಡಿನಲ್ಲಿ ತಾತ್ಕಾಲಿಕ ಬಿಡಾರದಲ್ಲಿ ವಿಶ್ರಾಂತಿಯಲ್ಲಿದ್ದ ಉಗ್ರರನ್ನು ಗುರುತಿಸಿದ್ದ ಭಾರತೀಯ ಸೇನೆ ಸಂಶಯಾಸ್ಪದ ಕಮ್ಯುನಿಕೇಷನ್‌ ಅನ್ನು ಟ್ರ್ಯಾಕ್‌ ಮಾಡಿತ್ತು. ಎರಡು ದಿನಗಳ ಕಾರ್ಡನ್ ಕಾರ್ಯಾಚರಣೆಯ ನಂತರ 4 ಪ್ಯಾರಾ ಸಿಬ್ಬಂದಿ ಗುಪ್ತ ತಾಣದಲ್ಲಿ ಉಗ್ರರನ್ನು ಕಂಡು ತಕ್ಷಣ ಗುಂಡಿನ ದಾಳಿ ನಡೆಸಿ, ಮೂವರನ್ನೂ ಸ್ಥಳದಲ್ಲೇ ಹತ್ಯೆ ಮಾಡಿದೆ. ಉಗ್ರರು ತಂತ್ರದಿಂದ ತಪ್ಪಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಅವರ ಅದೃಷ್ಟ ಕೈಕೊಟ್ಟಿತ್ತು.

ಜುಲೈ 11ರಂದು ಬೈಸಾರನ್ ಪ್ರದೇಶದಲ್ಲಿ ಚೀನಾದ ಸ್ಯಾಟಲೈಟ್ ಫೋನ್ ಸಕ್ರಿಯವಾಗಿರುವುದು ಪತ್ತೆಯಾಗಿತ್ತು. ಇದು ಕಾರ್ಯಾಚರಣೆಗೆ ನೆರವಾಗಿತ್ತು. ಲೋಕಸಭೆಯಲ್ಲಿ ಆಪರೇಶನ್ ಸಿಂಧೂರ್ ಚರ್ಚೆಯ ವೇಳೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಈ ಮೂವರು ಪಾಕಿಸ್ತಾನಿಗಳೆಂದು ದೃಢಪಡಿಸಿದರು. “ಇಬ್ಬರು ಉಗ್ರರಿಗೆ ಪಾಕಿಸ್ತಾನದ ಮತದಾರರ ಗುರುತಿನ ಸಂಖ್ಯೆ ಇದ್ದು, ಅವರ ಬಳಿಯಿಂದ ಸಿಕ್ಕ ಚಾಕೊಲೇಟ್‌ಗಳೂ ಪಾಕಿಸ್ತಾನದ್ದೇ ಆಗಿವೆ” ಎಂದರು.

NIA ಕಳೆದ ತಿಂಗಳು ಉಗ್ರರಿಗೆ ಆಶ್ರಯ ನೀಡಿದ್ದ ಪರ್ವೇಜ್ ಅಹ್ಮದ್ ಜೋಥರ್ ಮತ್ತು ಬಶೀರ್ ಅಹ್ಮದ್ ಎಂಬ ಇಬ್ಬರನ್ನು ಬಂಧಿಸಿತ್ತು. ಶವಗಳನ್ನು ಶ್ರೀನಗರಕ್ಕೆ ತಂದಾಗ, ಈ ಇಬ್ಬರು ಗುರುತನ್ನು ದೃಢೀಕರಿಸಿದರು. ಪಹಲ್ಗಾಮ್ ದಾಳಿಯ ಗುಂಡಿನ ಶೆಲ್‌ಗಳ ಫೊರೆನ್ಸಿಕ್ ವರದಿಯನ್ನು ಉಗ್ರರಿಂದ ವಶಪಡಿಸಿಕೊಂಡ ಒಂದು M9 ಮತ್ತು ಎರಡು AK-47 ರೈಫಲ್‌ಗಳ ಶೆಲ್‌ಗಳೊಂದಿಗೆ ಹೋಲಿಸಲಾಯಿತು. “ಈ ರೈಫಲ್‌ಗಳನ್ನು ಚಂಡೀಗಢಕ್ಕೆ ಕಳುಹಿಸಿ, ಶೆಲ್‌ಗಳನ್ನು ಪರೀಕ್ಷಿಸಿದಾಗ 100% ಹೊಂದಾಣಿಕೆ ದೃಢಪಟ್ಟಿತು” ಎಂದು ಅಮಿತ್ ಶಾ ತಿಳಿಸಿದರು.

ಈ ಸುದ್ದಿಯನ್ನು ಓದಿ: Pahalgam Attack: ಶ್ರೀನಗರದಲ್ಲಿ ಎನ್‌ಕೌಂಟರ್‌; ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್‌ಮೈಂಡ್ ಸುಲೇಮಾನ್ ಹತ

ಪಹಲ್ಗಾಮ್ ದಾಳಿಯ ನಂತರ ತಕ್ಷಣ ಯೋಜನೆ ರೂಪಿಸಿ, ಉಗ್ರರು ದೇಶ ಬಿಟ್ಟು ತಪ್ಪಿಸಿಕೊಳ್ಳದಂತೆ ತಡೆಯಲಾಯಿತು. ಮೇ 22ರಂದು ದಾಚಿಗಾಮ್ ಕಾಡಿನಲ್ಲಿ ಉಗ್ರರ ಇರುವಿಕೆಯ ಬಗ್ಗೆ ಮಾಹಿತಿ ಬಂದಿದೆ. “ನಮ್ಮ ಸೈನಿಕರು ವಾತಾವರಣದಲ್ಲಿ ಉಗ್ರರನ್ನು ಗುರುತಿಸಿದರು” ಎಂದು ಅಮಿತ್ ಶಾ ಹೇಳಿದರು. ಕಾರ್ಯಾಚರಣೆಯಿಂದ 17 ಗ್ರೆನೇಡ್‌ಗಳು, ಒಂದು M4 ಕಾರ್ಬೈನ್ ಮತ್ತು ಎರಡು AK-47 ರೈಫಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ.