ಜೈಶ್, ಲಷ್ಕರ್ ಭಯೋತ್ಪಾದಕ ಸಂಘಟನೆಗಳ ಮಧ್ಯೆ ಬಿರುಕು; ಬದಲಾದ ಭಾರತದ ಕಾರ್ಯತಂತ್ರ
Jaish And Lashkar Rift: ಇತ್ತೀಚಿನ ದಿನಗಳಲ್ಲಿ ಭಯೋತ್ಪಾದಕ ಗುಂಪುಗಳಾದ ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್‌ನ ಪ್ರಮುಖ ಸದಸ್ಯರ ನಡುವೆ ಸಂವಹನ ಕೊರತೆ ಕಂಡು ಬರುತ್ತಿರುವುದು ಭಾರತಕ್ಕೆ ಅನುಕೂಲವಾಗಿದೆ. ಸಿದ್ಧಾಂತದಲ್ಲಿನ ವ್ಯತ್ಯಾಸಗಳಿಂದಾಗಿ ಅವರು ಒಟ್ಟಿಗೆ ಕೆಲಸ ಮಾಡಲು ಬಯಸುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಸಾಂದರ್ಭಿಕ ಚಿತ್ರ.

ಹೊಸದಿಲ್ಲಿ: ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದ ಭಯೋತ್ಪಾದಕರನ್ನು ಪಾಕಿಸ್ತಾನ ಭಾರತಕ್ಕೆ, ಜಮ್ಮು ಮತ್ತು ಕಾಶ್ಮೀರದತ್ತ ಕಳುಹಿಸುತ್ತಿದೆ ಎಂದು ಮೂಲಗಳು ತಿಳಿಸಿವೆ ಎಂಬುದಾಗಿ ಎನ್‌ಡಿಟಿವಿ ವರದಿ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಉಗ್ರ ಒಳನುಸುಳುವಿಕೆ ಹೆಚ್ಚುತ್ತಿರುವುದರಿಂದ ಭಾರತೀಯ ಗುಪ್ತಚರ ಇಲಾಖೆ ಸಂಗ್ರಹಿಸಿದ ಮಾಹಿತಿಯಲ್ಲಿ ಈ ವಿವರ ಬಹಿರಂಗಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಭಯೋತ್ಪಾದಕ ಗುಂಪುಗಳಾದ ಲಷ್ಕರ್-ಎ-ತೈಬಾ (LeT) ಮತ್ತು ಜೈಶ್-ಎ-ಮೊಹಮ್ಮದ್ (JeM)ನ ಪ್ರಮುಖ ಸದಸ್ಯರ ನಡುವೆ ಸಂವಹನ ಕೊರತೆ ಕಂಡು ಬರುತ್ತಿರುವುದು ಭಾರತಕ್ಕೆ ಅನುಕೂಲವಾಗಿದೆ ಎಂದು ಮೂಲಗಳು ತಿಳಿಸಿವೆ.
"ಸಿದ್ಧಾಂತದಲ್ಲಿನ ವ್ಯತ್ಯಾಸಗಳಿಂದಾಗಿ ಅವರು ಒಟ್ಟಿಗೆ ಕೆಲಸ ಮಾಡಲು ಬಯಸುತ್ತಿಲ್ಲ. ಪಾಕಿಸ್ತಾನ ಸೇನೆಯು ಎರಡೂ ಗುಂಪುಗಳನ್ನು ಸಮಾಧಾನಪಡಿಸಲು ಪ್ರಯತ್ನಿಸಿ ವಿಫಲವಾಗಿದೆ. ಹೀಗಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಗ್ರರನ್ನು ಕಳುಹಿಸುತ್ತಿದೆ ಮತ್ತು ಭಾರತಕ್ಕೆ ನುಸುಳಲು ಸುರಕ್ಷಿತ ಮಾರ್ಗವನ್ನು ತೋರಿಸುತ್ತಿದೆ. ಕಳೆದ ಕೆಲವು ತಿಂಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜೈಶ್ ಭಯೋತ್ಪಾದಕರನ್ನು ಭಾರತಕ್ಕೆ ಕಳುಹಿಸಲಾಗಿದೆ" ಎಂದು ಹಿರಿಯ ಗುಪ್ತಚರ ಅಧಿಕಾರಿಯೊಬ್ಬರು ಎನ್‌ಡಿಟಿವಿಗೆ ತಿಳಿಸಿದ್ದಾರೆ.
Jaish And Lashkar Rift Widens, India Reworks Strategy Amid Changed Dynamics ✅ Read More: https://t.co/0dVIlmh90w pic.twitter.com/1zryOgQtcB
— Abhinand PS (@abhinandps) March 31, 2025
ಜೈಶ್-ಎ-ಮೊಹಮ್ಮದ್ ಸಂಘಟನೆಯು ಸುನ್ನಿ ವಿಭಾಗದ ಪುನರುಜ್ಜೀವನವಾದಿ ಆಂದೋಲನವಾದ ದಿಯೋಬಂಡಿ ಪಂಥವನ್ನು ಅನುಸರಿಸಿದರೆ, ಲಷ್ಕರ್-ಎ-ತೈಬಾ 18ನೇ ಶತಮಾನದ ಶಾ ವಲಿಯುಲ್ಲಾ ದೆಹ್ಲವಿ ರಚಿಸಿದ ಅಹ್ಲ್-ಇ ಹದೀಸ್ ಅನ್ನು ಅನುಸರಿಸುತ್ತದೆ. ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆದ ಹತ್ಯೆಗಳು ಈ 2 ಭಯೋತ್ಪಾದಕ ಗುಂಪುಗಳ ನಡುವಿನ ಸಂಘರ್ಷದ ಪರಿಣಾಮ ಎಂದು ಗುಪ್ತಚರ ಇಲಾಖೆಯ ಕಾರ್ಯಕರ್ತರು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಇತ್ತೀಚೆಗೆ ನಡೆದ ಉಗ್ರ ಒಳನುಸುಳುವಿಕೆ ಪ್ರಯತ್ನಗಳನ್ನು ಪರಿಶೀಲಿಸುತ್ತಿರುವ ಭಾರತೀಯ ಅಧಿಕಾರಿಗಳು ಈ ಭಯೋತ್ಪಾದಕರು ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದವರು ಎಂದು ಗುರುತಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅಡಗಿರುವ ಸುಮಾರು 120 ಭಯೋತ್ಪಾದಕರಲ್ಲಿ ಶೇ. 95ರಷ್ಟು ವಿದೇಶಿಯರು ಮತ್ತು ಇವರೆಲ್ಲರೂ ಜೆಎಂ ಸಂಘಟನೆಗೆ ಸೇರಿದವರು ಎಂದು ಮೂಲಗಳು ಮಾಹಿತಿ ನೀಡಿವೆ. ಇತ್ತ ಲಷ್ಕರ್-ಎ-ತೈಬಾ ಭಯೋತ್ಪಾದಕರಿಂದ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳು ಪಾಕಿಸ್ತಾನ ಅಥವಾ ಚೀನಾ ನಿರ್ಮಿತ ಎಂದು ಮೂಲಗಳು ತಿಳಿಸಿವೆ.
ಈ 2 ಭಯೋತ್ಪಾದಕ ಗುಂಪುಗಳ ನಡುವೆ ಹೆಚ್ಚುತ್ತಿರುವ ಬಿರುಕು ಭಾರತೀಯ ಭದ್ರತಾ ಸಂಸ್ಥೆಗಳಿಗೆ ಅನುಕೂಲವಾಗಿ ಪರಿಣಮಿಸಿದೆ. ಅದಕ್ಕೆ ಉದಾಹರಣೆ ಎನ್ನುವಂತೆ ಇತ್ತೀಚೆಗೆ ದಕ್ಷಿಣ ಕಾಶ್ಮೀರದಲ್ಲಿ ಅಡಗಿರುವ ಭಯೋತ್ಪಾದಕರ ಸ್ಥಳವನ್ನು ಪ್ರತಿಸ್ಪರ್ಧಿ ಗುಂಪು ಸೋರಿಕೆ ಮಾಡಿತ್ತು. ಮತ್ತೊಂದು ಪ್ರಕರಣದಲ್ಲಿ ಎಲ್ಇಟಿ ಜೆಎಂ ಭಯೋತ್ಪಾದಕನನ್ನು ಅಪಹರಿಸಿತ್ತು. "ಈ ಹೊಸ ಬೆಳವಣಿಗೆಗಳಿಂದಾಗಿ ಭಾರತವು ತನ್ನ ಕಾರ್ಯತಂತ್ರಗಳು ಮತ್ತು ಕಾರ್ಯಾಚರಣೆಗಳನ್ನು ಮರುರೂಪಿಸುತ್ತಿದೆ" ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
"ಜೈಶ್ ಸಂಘಟನೆಯನ್ನು ಪ್ರಧಾನಿಯಾಗಿದ್ದ ಪರ್ವೇಜ್ ಮುಷರಫ್ ನಿಷೇಧಿಸಿದ ನಂತರ ಉಗ್ರರು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮುಖ್ಯವಾಗಿ ಅಫ್ಘಾನಿಸ್ತಾನದ ನುರಿಸ್ತಾನ್ ಮತ್ತು ಕುನಾರ್ ಪ್ರಾಂತ್ಯಗಳಿಗೆ ಸೀಮಿತವಾಗಿದ್ದರು. ಇಮ್ರಾನ್ ಖಾನ್ ಅಧಿಕಾರಕ್ಕೆ ಬಂದ ನಂತರ, ಅವರಿಗೆ ಪಾಕಿಸ್ತಾನಕ್ಕೆ ಪ್ರವೇಶಿಸಲು ಅವಕಾಶ ನೀಡಲಾಯಿತು" ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕಥುವಾದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ವಾರ ಜಮ್ಮು ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸಲು ಶಾ ಭದ್ರತಾ ಪರಿಶೀಲನಾ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.