ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

S. Jaishankar: ʼʼಭಾರತ-ಪಾಕ್‌ ಕದನ ವಿರಾಮಕ್ಕೆ ಟ್ರಂಪ್‌ ಮಧ್ಯಸ್ಥಿಕೆ ವಹಿಸಿಲ್ಲʼʼ: ಸಂಸತ್‌ನಲ್ಲಿ ಜೈಶಂಕರ್‌ ಸ್ಪಷ್ಟನೆ

Operation Sindoor: ʼʼಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಧ್ಯೆ ಏಪ್ರಿಲ್‌ 22 ಮತ್ತು ಜೂನ್‌ 17ರ ಮಧ್ಯೆ ಯಾವುದೇ ಫೋನ್‌ ಸಂಭಾಷಣೆ ನಡೆದಿಲ್ಲʼʼ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ತಿಳಿಸಿದರು. ಸಂಸತ್‌ನಲ್ಲಿ ಸೋಮವಾರ (ಜುಲೈ 28) ನಡೆದ ಚರ್ಚೆಯ ವೇಳೆ ಅವರು ಈ ಸ್ಪಷ್ಟನೆ ನೀಡಿದರು.

ʼಭಾರತ-ಪಾಕ್‌ ಕದನ ವಿರಾಮಕ್ಕೆ ಟ್ರಂಪ್‌ ಮಧ್ಯಸ್ಥಿಕೆ ವಹಿಸಿಲ್ಲ: ಜೈಶಂಕರ್‌

Ramesh B Ramesh B Jul 28, 2025 8:06 PM

ದೆಹಲಿ: ʼʼಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಮಧ್ಯೆ ಏಪ್ರಿಲ್‌ 22 ಮತ್ತು ಜೂನ್‌ 17ರ ಮಧ್ಯೆ ಯಾವುದೇ ಫೋನ್‌ ಸಂಭಾಷಣೆ ನಡೆದಿಲ್ಲʼʼ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ (S. Jaishankar) ತಿಳಿಸಿದರು. ಪಹಲ್ಗಾಮ್‌ ದಾಳಿ ಮತ್ತು ಆಪರೇಷನ್‌ ಸಿಂದೂರ್‌ (Operation Sindoor) ಕಾರ್ಯಾಚರಣೆಯ ಬಗ್ಗೆ ಸಂಸತ್‌ನಲ್ಲಿ ಸೋಮವಾರ (ಜುಲೈ 28) ನಡೆದ ಚರ್ಚೆಯ ವೇಳೆ ಅವರು ಈ ಸ್ಪಷ್ಟನೆ ನೀಡಿದರು. ಆ ಮೂಲಕ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆದ ಕದನ ವಿರಾಮಕ್ಕೆ ತಾನೇ ಮಧ್ಯಸ್ಥಿಕೆ ವಹಿಸಿದ್ದು ಎನ್ನುವ ಡೊನಾಲ್ಡ್‌ ಟ್ರಂಪ್‌ ಅವರ ಹೇಳಿಕೆಯನ್ನು ತಳ್ಳಿ ಹಾಕಿದರು.

"ಪಹಲ್ಗಾಮ್‌ ದಾಳಿಗೆ ಪ್ರತಿಯಾಗಿ ಆಪರೇಷನ್‌ ಸಿಂದೂರ್‌ ಮೂಲಕ ಪಾಕಿಸ್ತಾನದ ವಿರುದ್ಧ ಸೇಡು ತೀರಿಸಿಕೊಂಡೆವು. ಯುದ್ಧ ನಿಲ್ಲಿಸಲು ಸಿದ್ಧ ಎಂದು ಪಾಕಿಸ್ತಾನದಿಂದ ನಮಗೆ ಫೋನ್ ಕರೆಗಳು ಬರತೊಡಗಿದವು. ಆದರೆ ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರಿಂದಲೇ (DGMO) ವಿನಂತಿ ಬರಬೇಕೆಂದು ನಾವು ಅವರಿಗೆ ಸೂಚಿಸಿದ್ದೆವು. ಹೀಗಾಗಿ ಕೊನೆಗೆ ಕದನ ವಿರಾಮ ಒಪ್ಪಂದಕ್ಕೆ ಒಪ್ಪಿಕೊಂಡೆವು" ಎಂದು ಅವರು ಸಂಸತ್ತಿನಲ್ಲಿ ತಿಳಿಸಿದರು.



ಈ ಸುದ್ದಿಯನ್ನೂ ಓದಿ: Operation Mahadev: ಪಹಲ್ಗಾಮ್‌ ದಾಳಿಯ ಹಿಂದಿನ 3 ಶಂಕಿತ ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ; ಮುಂದುವರಿದ ಆಪರೇಷನ್‌ ಮಾಹಾದೇವ್‌ ಕಾರ್ಯಾಚರಣೆ

ಭಾರತ-ಪಾಕಿಸ್ತಾನದ ನಡುವಿನ ಕದನ ವಿರಾಮಕ್ಕೆ ಡೊನಾಲ್ಡ್‌ ಟ್ರಂಪ್‌ ಮಧ್ಯಸ್ಥಿಕೆ ವಹಿಸಿದ್ದಾಗಿ ವದಂತಿ ದಟ್ಟವಾಗಿ ಹರಡಿರುವ ಹಿನ್ನೆಲೆಯಲ್ಲಿ ಜೈಶಂಕರ್‌ ಈ ಸ್ಪಷ್ಟನೆ ನೀಡಿದರು. ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಭಾರತ ಈಗಾಗಲೇ ನಿರಾಕರಿಸಿದೆ.

"ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆ ನಡೆಸಿದ ಹಿನ್ನೆಲೆಯಲ್ಲಿ ಮೇ 9ರಂದು ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಪ್ರಧಾನಿ ಮೋದಿ ಅವರಿಗೆ ಕರೆ ಮಾಡಿ ಮುಂದಿನ ಕೆಲವು ಗಂಟೆಗಳಲ್ಲಿ ಪಾಕಿಸ್ತಾನದಿಂದ ಭಾರಿ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದರು. ಅಂತಹ ದಾಳಿ ನಡೆದರೆ ನಮ್ಮ ಕಡೆಯಿಂದಲೂ ಸೂಕ್ತ ಪ್ರತಿದಾಳಿ ನಡೆಯಲಿದೆ ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದರು. ಪಾಕಿಸ್ತಾನದ ದಾಳಿಯನ್ನು ನಮ್ಮ ಸಶಸ್ತ್ರ ಪಡೆಗಳು ವಿಫಲಗೊಳಿಸಿದವು. ಮೇ 9 ಮತ್ತು 10ರಂದು ನಡೆದ ಭಾರಿ ದಾಳಿಯನ್ನು ಸಮರ್ಥವಾಗಿ ತಡೆದ ನಮ್ಮ ಸಶಸ್ತ್ರ ಪಡೆಗಳ ಕಾರ್ಯಕ್ಷಮತೆಗೆ ಸದನವು ಸಾಮೂಹಿಕವಾಗಿ ಮೆಚ್ಚುಗೆ ವ್ಯಕ್ತಪಡಿಸಬೇಕುʼʼ ಎಂದು ಜೈಶಂಕರ್‌ ಕರೆ ನೀಡಿದರು.

ʼʼಭಯೋತ್ಪಾದನೆ ವಿರುದ್ಧ ನಾವು ಯಾವ ರೀತಿ ಪ್ರತಿಕ್ರಿಯಿಸುತ್ತೇವೆ ಎನ್ನುವುದನ್ನು ಆಪರೇಷನ್‌ ಸಿಂದೂರ್‌ ಮೂಲಕ ತಿಳಿಸಿದ್ದೇವೆ. ಭಯೋತ್ಪಾದನೆಯನ್ನು ನಾವು ಸಹಿಸಿಕೊಳ್ಳುವುದೇ ಇಲ್ಲ ಎನ್ನುವ ಸಂದೇಶವನ್ನು ಸಾರಲು ಈಗಾಗಲೇ 33 ದೇಶಗಳಿಗೆ ಸಂಸದರ ನಿಯೋಗವನ್ನು ಕಳುಹಿಸಲಾಗಿದೆʼʼ ಎಂದು ಅವರು ವಿವರಿಸಿದರು.

ಏಪ್ರಿಲ್‌ 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ನಡೆದು ಪ್ರವಾಸಿಗರು ಸೇರಿ 26 ಭಾರತೀಯರು ಮೃತಪಟ್ಟಿದ್ದರು. ಇದರ ವಿರುದ್ಧ ಸೇಡು ತೀರಿಸಿಕೊಂಡ ಭಾರತ ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆಯನ್ನು ಮೇ 7ರಂದು ಆರಂಭಸಿ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಯನ್ನು ನಾಶಪಡಿಸಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಮತ್ತೆ ದಾಳಿ ನಡೆಸಲು ಮುಂದಾಗಿತ್ತು. ಇದನ್ನು ಭಾರತ ಸಮರ್ಥವಾಗಿ ಹಿಮ್ಮೆಟ್ಟಿಸಿತ್ತು. ಕೊನೆಗೆ ಎರಡೂ ದೇಶಗಳ ನಡುವೆ ಕದನ ವಿರಾಮ ಒಪ್ಪಂದ ಏರ್ಪಟ್ಟಿತ್ತು.