ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

B.V.Nagarathna: 2027ರಲ್ಲಿ ದೇಶದ ಪ್ರಥಮ ಮಹಿಳಾ ಸಿಜೆಐ ಆಗಲಿದ್ದಾರೆ ಕರ್ನಾಟಕದ ಬಿ.ವಿ.ನಾಗರತ್ನ

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ಬೆಂಗಳೂರಿನ ಬಿ.ವಿ.ನಾಗರತ್ನ 2027ರಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ. ಆ ಮೂಲಕ ಈ ಹುದ್ದೆ ಅಲಂಕರಿಸಿದ ಪ್ರಥಮ ಮಹಿಳೆ ಎನಿಸಿಕೊಳ್ಳಲಿದ್ದಾರೆ. ವಿಶೇಷವೆಂದರೆ ಅವರ ತಂದೆ ಇ.ಎಸ್.ವೆಂಕಟರಾಮಯ್ಯ 1989ರಲ್ಲಿ 6 ತಿಂಗಳ ಕಾಲ ಸಿಜೆಐ ಆಗಿದ್ದರು.

ಬಿ.ವಿ. ನಾಗರತ್ನ.

ಹೊಸದಿಲ್ಲಿ: ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ಬೆಂಗಳೂರಿನ ಬಿ.ವಿ. ನಾಗರತ್ನ (B.V.Nagarathna) 2027ರಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ. ಆ ಮೂಲಕ ಈ ಹುದ್ದೆ ಅಲಂಕರಿಸಿದ ಪ್ರಥಮ ಮಹಿಳೆ ಎನಿಸಿಕೊಳ್ಳಲಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂನ ಹಾಲಿ ಸದಸ್ಯರಲ್ಲಿ ಒಬ್ಬರಾದ ನ್ಯಾಯಮೂರ್ತಿ ಅಭಯ್ ಎಸ್. ಓಕಾ ನಿವೃತ್ತರಾದ ಹಿನ್ನೆಲೆಯಲ್ಲಿ ನ್ಯಾ. ಬಿ.ವಿ.ನಾಗರತ್ನ ಮೇ 25ರಿಂದ ಕೊಲಿಜಿಯಂನ ಭಾಗವಾಗಿದ್ದಾರೆ. ಸುಪ್ರೀಂ ಕೋರ್ಟ್ ಕೊಲಿಜಿಯಂ ಕೇವಲ 5 ಅತ್ಯಂತ ಹಿರಿಯ ನ್ಯಾಯಾಧೀಶರನ್ನು ಒಳಗೊಂಡಿರುತ್ತದೆ. ಇದರಲ್ಲಿ ಸಿಜೆಐ (ಭಾರತದ ಮುಖ್ಯ ನ್ಯಾಯಮೂರ್ತಿ) ಕೂಡ ಸೇರಿದ್ದಾರೆ.

ಸುಪ್ರೀಂ ಕೋರ್ಟ್‌ನ ಐವರು ಹಿರಿಯ ನ್ಯಾಯಮೂರ್ತಿಗಳನ್ನು ಒಳಗೊಂಡಿರುವ ಕೊಲಿಜಿಯಂ, ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಗಳನ್ನು ನೇಮಿಸುವ ಜತೆಗೆ ಹೈಕೋರ್ಟ್ ನ್ಯಾಯಮೂರ್ತಿಗಳ ವರ್ಗಾವಣೆ ನಿರ್ಧರಿಸುವ ಜವಾಬ್ದಾರಿ ಹೊಂದಿದೆ.

ಸಿಜೆಐ ಗವಾಯಿ ಅವರ ಅಧಿಕಾರಾವಧಿ ಪ್ರಾರಂಭವಾದಾಗ ಕೊಲಿಜಿಯಂನಲ್ಲಿ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ , ಅಭಯ್ ಎಸ್. ಓಕಾ, ವಿಕ್ರಮ್ ನಾಥ್ ಮತ್ತು ಜೆ.ಕೆ.ಮಹೇಶ್ವರಿ ಇದ್ದರು. ನ್ಯಾಯಮೂರ್ತಿ ಓಕಾ ಹುದ್ದೆಯಿಂದ ನಿವೃತ್ತರಾಗಿದ್ದು, ತೆರವಾದ ಕೊಲಿಜಿಯಂನ ಒಂದು ಸ್ಥಾನಕ್ಕೆ ನಾಗರತ್ನ ನೇಮಕವಾಗಿದ್ದಾರೆ.

ಈ ಸುದ್ದಿಯನ್ನೂ ಓದಿ: Supreme Court Collegium: ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ವಿಭು ಬಖ್ರು ನೇಮಕಕ್ಕೆ ಶಿಫಾರಸು

ನಾಗರತ್ನ ದೇಶದ ಮೊದಲ ಮಹಿಳಾ ಸಿಜೆಐ

ಭಾರತದಲ್ಲಿ ಸಿಜೆಐ ನೇಮಕಾತಿ ಹಿರಿತನದ ಆಧಾರದ ಮೇಲೆ ನಡೆಯುತ್ತದೆ. ಹೀಗಾಗಿ ದೇಶದ 5ನೇ ಹಿರಿಯ ನ್ಯಾಯಾಧೀಶೆಯಾಗಿರುವ ಬಿ.ವಿ.ನಾಗರತ್ನ 2027ರ ಸೆಪ್ಟೆಂಬರ್ 11ರಂದು ಭಾರತದ 50ನೇ ಮುಖ್ಯ ನ್ಯಾಯಮೂರ್ತಿ ಎನಿಸಿಕೊಳ್ಳಲಿದ್ದಾರೆ. ಆ ಮೂಲಕ ಈ ಹುದ್ದೆಯನ್ನು ತಲುಪಿದ ಮೊದಲ ಮಹಿಳೆಯಾಗಲಿದ್ದಾರೆ. ವಿಶೇಷ ಎಂದರೆ ಅವರ ತಂದೆ ಇ.ಎಸ್.ವೆಂಕಟರಾಮಯ್ಯ 1989ರಲ್ಲಿ 6 ತಿಂಗಳ ಕಾಲ ಸಿಜೆಐ ಆಗಿದ್ದರು.

1962ರಲ್ಲಿ ಜನಿಸಿದ ನಾಗರತ್ನ 1987ರ ಅಕ್ಟೋಬರ್‌ನಲ್ಲಿ ಬೆಂಗಳೂರಿನಲ್ಲಿ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದರು. ಅವರನ್ನು 2008ರಲ್ಲಿ ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಿಸಲಾಗಿತ್ತು. 2 ವರ್ಷಗಳ ನಂತರ ಕಾಯಂ ನ್ಯಾಯಾಧೀಶರಾಗಿ ನಿಯೋಜಿಸಲಾಯಿತು.

ತಂದೆಯೂ ಸಿಜೆಐ ಆಗಿದ್ದರು

ಸುಪ್ರೀಂ ಕೋರ್ಟ್ ಇತಿಹಾಸದಲ್ಲಿಇದುವರೆಗೂ ಮಹಿಳಾ ನ್ಯಾಯಮೂರ್ತಿ ಈ ಉನ್ನತ ಹುದ್ದೆಗೆ ಏರಿರಲಿಲ್ಲ. ಅಲ್ಲದೆ ತಂದೆ ಹಾಗೂ ಮಗಳಿಬ್ಬರೂ ಸಿಜೆಐ ಆದ ಮತ್ತೊಂದು ದಾಖಲೆಯೂ ನಿರ್ಮಾಣವಾಗಲಿದೆ. ಅದಾಗ್ಯೂ ಅವರ ಅಧಿಕಾರಾವಧಿ 1 ತಿಂಗಳಷ್ಟೇ ಇರಲಿದೆ.

ಮಹಿಳೆಯರು ನ್ಯಾಯಯುತ ಸ್ಥಾನ ಮರಳಿ ಪಡೆಯುತ್ತಿದ್ದಾರೆ: ನ್ಯಾ.ನಾಗರತ್ನ

ಮಹಿಳಾ ಸಶಕ್ತೀಕರಣವನ್ನು ಪ್ರತಿಪಾದಿಸುತ್ತಲೇ ಬಂದಿರುವ ನಾಗರತ್ನ, ʼʼಪುರುಷರು ನಿರ್ವಹಿಸುವಂತಹ ವೃತ್ತಿಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವುದು ಹೇರಿಕೆಯಲ್ಲ. ಪಿತೃ ಪ್ರಧಾನ ತಾರತಮ್ಯದಿಂದಾಗಿ ಚಾರಿತ್ರಿಕವಾಗಿ ನಿರಾಕರಿಸಲಾಗಿದ್ದ ತಮ್ಮ ಸ್ಥಾನಗಳನ್ನು ಸ್ತ್ರೀಯರು ಪಡೆಯುತ್ತಿದ್ದಾರೆʼʼ ಎಂದು ಬಿ.ವಿ.ನಾಗರತ್ನ ಇತ್ತೀಚೆಗೆ ತಿಳಿಸಿದ್ದರು.

ʼʼಮಹಿಳೆಯರು ಹೊರಗಿನವರು ಎಂಬ ಗ್ರಹಿಕೆ ಸಲ್ಲದು. ಅಧಿಕಾರ, ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಬುದ್ಧಿಶಕ್ತಿ ಸ್ವಾಭಾವಿಕವಾಗಿ ಪುರುಷರಿಗೆ ಸೇರಿದ್ದು ಎಂಬ ಅಂತಹ ದೃಷ್ಟಿಕೋನಗಳು ಕೇವಲ ಪ್ರಾಚೀನ ಸ್ವರೂಪದ್ದಷ್ಟೇ ಅಲ್ಲ ಮೂಲತಃ ದೋಷದಿಂದ ಕೂಡಿರುವಂತಹದ್ದುʼʼ ಎಂದು ಅವರು ಹೇಳಿದ್ದರು.