Supreme Court Collegium: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ವಿಭು ಬಖ್ರು ನೇಮಕಕ್ಕೆ ಶಿಫಾರಸು
ಕರ್ನಾಟಕ ಸೇರಿ ವಿವಿಧ ರಾಜ್ಯಗಳ ಹೈಕೋರ್ಟ್‌ಗೆ ಮುಖ್ಯ ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಸೋಮವಾರ (ಮೇ 26) ಶಿಫಾರಸು ಮಾಡಿದೆ. ಅದರಂತೆ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳನ್ನಾಗಿ ದಿಲ್ಲಿ ಹೈಕೋರ್ಟ್‌ನ ನ್ಯಾಯಾಧೀಶ ವಿಭು ಬಖ್ರು ಅವರನ್ನು ಶಿಫಾರಸು ಮಾಡಲಾಗಿದೆ.

ವಿಭು ಬಖ್ರು.

ಹೊಸದಿಲ್ಲಿ: ಕರ್ನಾಟಕ ಸೇರಿ ವಿವಿಧ ರಾಜ್ಯಗಳ ಹೈಕೋರ್ಟ್‌ಗೆ ಮುಖ್ಯ ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಸೋಮವಾರ (ಮೇ 26) ಶಿಫಾರಸು ಮಾಡಿದೆ (Supreme Court Collegium). ಸಭೆಯಲ್ಲಿ ಬೇರೆ ಬೇರೆ ಹೈಕೋರ್ಟ್‌ಗಳ ನ್ಯಾಯಾಧೀಶರಿಗೆ ಮುಖ್ಯ ನ್ಯಾಯಮೂರ್ತಿಗಳನ್ನಾಗಿ ಬಡ್ತಿ ನೀಡಲಾಗಿದೆ. ಅದರಂತೆ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳನ್ನಾಗಿ ದಿಲ್ಲಿ ಹೈಕೋರ್ಟ್‌ನ ನ್ಯಾಯಾಧೀಶ ವಿಭು ಬಖ್ರು (Vibhu Bakhru) ಅವರನ್ನು ಶಿಫಾರಸು ಮಾಡಲಾಗಿದೆ. ಬಡ್ತಿ ಪಡೆದ ನ್ಯಾಯಾಧೀಯರ ಸಂಪೂರ್ಣ ವಿವರ ಇಲ್ಲಿದೆ:
ಬಡ್ತಿ ಪಡೆದ ನ್ಯಾಯಾಧೀಶರು
ನ್ಯಾಯಾಧೀಶರ ಹೆಸರು | ಪ್ರಸ್ತುತವಿರುವ ಹೈಕೋರ್ಟ್ | ಮುಖ್ಯ ನ್ಯಾಯಮೂರ್ತಿಗಳಾಗಿ ನಿಯುಕ್ತರಾದ ಹೈಕೋರ್ಟ್ |
---|---|---|
ಸಂಜೀವ್ ಸಚ್‌ದೇವ್ | ಮಧ್ಯ ಪ್ರದೇಶ | ಮಧ್ಯ ಪ್ರದೇಶ |
ವಿಭು ಬಖ್ರು | ದಿಲ್ಲಿ | ಕರ್ನಾಟಕ |
ಅಶುತೋಷ್ ಕುಮಾರ್ | ಪಾಟ್ನಾ | ಗುವಹಾಟಿ |
ವಿಪುಲ್ ಮನುಭಾಯಿ ಪಾಂಚೋಲಿ | ಪಾಟ್ನಾ | ಪಾಟ್ನಾ |
ತರ್ಲೋಕ್ ಸಿಂಗ್ ಚೌಹಾಣ್ | ಹಿಮಾಚಲ ಪ್ರದೇಶ | ಝಾರ್ಖಂಡ್ |
Supreme Court Collegium Recommends Chief Justices for 4 High Courts. pic.twitter.com/vtm7O3n4Ru
— Live Law (@LiveLawIndia) May 26, 2025
ಮೂವರು ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್‌ಗೆ ನೇಮಿಸಲು ಕೊಲಿಜಿಯಂ ಶಿಫಾರಸು
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಸೇರಿ ಮೂವರು ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಸೋಮವಾರ ಕೇಂದ್ರ ಸರ್ಕಾರಕ್ಕೆ ಸಿಜೆಐ ಬಿ.ಆರ್.ಗವಾಯಿ ನೇತೃತ್ವದ ಕೊಲಿಜಿಯಂ ಶಿಫಾರಸು ಮಾಡಿದೆ.
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ (ಮಾತೃ ಹೈಕೋರ್ಟ್ ಗುಜರಾತ್), ಗುವಾಹಟಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಜಯ್ ಬಿಷ್ಣೋಯ್ (ಮಾತೃ ಹೈಕೋರ್ಟ್ ರಾಜಸ್ಥಾನ), ಬಾಂಬೆ ನ್ಯಾಯಮೂರ್ತಿ ಅತುಲ್ ಎಸ್. ಚಂದೂರ್ಕರ್ ಅವರ ಹೆಸರನ್ನು ಶಿಫಾರಸು ಮಾಡಿದೆ.
ಈ ಸುದ್ದಿಯನ್ನೂ ಓದಿ: BJP Leader's Inappropriate Video : ಮಹಿಳಾ ಕಾರ್ಯಕರ್ತೆಯೊಂದಿಗೆ ಅನುಚಿತ ವರ್ತನೆ: ಬಿಜೆಪಿ ಗೊಂಡಾ ಜಿಲ್ಲಾಧ್ಯಕ್ಷನಿಗೆ ನೊಟೀಸ್
ನ್ಯಾ. ಅಂಜಾರಿಯಾ ಗುಜರಾತ್ ಹೈಕೋರ್ಟ್‌ನಲ್ಲಿ 1988ರ ಆಗಸ್ಟ್‌ನಲ್ಲಿ ಹಿರಿಯ ವಕೀಲ ಎಸ್.ಎನ್.ಶೇಲತ್ ಅವರ ಬಳಿ ವೃತ್ತಿ ಜೀವನ ಆರಂಭಿಸಿದ್ದರು. ನ್ಯಾ.ಅಂಜಾರಿಯಾ ಸಾಂವಿಧಾನಿಕ, ಸಿವಿಲ್, ಕಾರ್ಮಿಕ ಮತ್ತು ಸೇವಾ ವಿಷಯಗಳನ್ನು ನಡೆಸಿದ್ದು, ಹೈಕೋರ್ಟ್, ರಾಜ್ಯ ಚುನಾವಣಾ ಆಯೋಗ ಮತ್ತು ಗುಜರಾತ್ ಕೈಗಾರಿಕಾ ಅಭಿವೃದ್ಧಿ ಕಾರ್ಪೊರೇಶನ್ ಸೇರಿ ರಾಜ್ಯದ ಹಲವು ಸಂಸ್ಥೆಗಳ ವಕೀಲರಾಗಿ ಕರ್ತವ್ಯ ನಿಭಾಯಿಸಿದ್ದಾರೆ. 2024ರ ಫೆಬ್ರವರಿ 25ರಂದು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿಗೊಂಡಿದ್ದರು.
ನ್ಯಾಯಮೂರ್ತಿ ಬಿಷ್ಣೋಯ್ 1989ರ ಜುಲೈಯಲ್ಲಿ ವಕೀಲರಾಗಿ ನೋಂದಣಿಕೊಂಡರು. ರಾಜಸ್ಥಾನ ಹೈಕೋರ್ಟ್ ಮತ್ತು ಜೋಧಪುರದ ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿಯಲ್ಲಿ ಪ್ರಾಕ್ಟೀಸ್ ಮಾಡಿದ್ದಾರೆ. ಸಿವಿಲ್, ಕ್ರಿಮಿನಲ್, ಸಾಂವಿಧಾನಿಕ, ಸೇವಾ ಮತ್ತು ಚುನಾವಣಾ ಪ್ರಕರಣಗಳನ್ನು ನಡೆಸಿದ್ದಾರೆ. 2013ರ ಜನವರಿ 8ರಂದು ರಾಜಸ್ಥಾನ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ನ್ಯಾ. ಬಿಷ್ಣೋಯ್, 2015ರ ಜನವರಿ 7ರಂದು ಕಾಯಂಗೊಂಡಿದ್ದರು. 2024ರ ಫೆಬ್ರವರಿ 5ರಂದು ಗುವಾಹಟಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.
ನ್ಯಾ. ಚಂದೂರ್ಕರ್ 1988ರ ಜುಲೈ 21ರಂದು ವಕೀಲರಾಗಿ ಕರ್ತವ್ಯ ಆರಂಭಿಸಿದರು. ನಂತರ ನ್ಯಾಯಮೂರ್ತಿಯಾಗಿ ಪದೋನ್ನತಿಗೊಂಡಿದ್ದರು. ನ್ಯಾ. ಚಂದೂರ್ಕರ್ ʼಮಹಾರಾಷ್ಟ್ರ ಪುರಸಭೆ ಮಂಡಳಿ, ನಗರ ಪಂಚಾಯಿತಿಗಳು ಮತ್ತು ಕೈಗಾರಿಕಾ ಟೌನ್‌ಶಿಪ್ ಕಾಯಿದೆ 1965ʼ ಮತ್ತು ʼಮಹಾರಾಷ್ಟ್ರ ಬಾಡಿಗೆ ನಿಯಂತ್ರಣ ಕಾಯಿದೆ 1999ʼ ಎಂಬ ಎರಡು ಪುಸ್ತಕ ರಚಿಸಿದ್ದಾರೆ. ನ್ಯಾ.ಚಂದೂರ್ಕರ್ ಅವರನ್ನು 2013ರ ಜೂನ್ 21ರಂದು ಬಾಂಬೆ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯನ್ನಾಗಿ ನೇಮಿಸಲಾಗಿತ್ತು.