ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Monsoon Impact: ಶಿಕ್ಷಣ ರಂಗದಲ್ಲಿ ಕ್ರಾಂತಿಕಾರಿ ಬದಲಾವಣೆ; ಇನ್ಮುಂದೆ ಏಪ್ರಿಲ್‌-ಮೇ ಬದಲು ಜೂನ್‌-ಜುಲೈಯಲ್ಲಿ ಶಾಲೆಗೆ ವಾರ್ಷಿಕ ರಜೆ?

V. Sivankutty: ಇನ್ನುಮುಂದೆ ಶಾಲೆಗಳ ಬೇಸಗೆ ರಜೆಯನ್ನು ಏಪ್ರಿಲ್‌-ಮೇ ಬದಲು ಜೂನ್‌-ಜುಲೈಯಲ್ಲಿ ನೀಡಲು ಕೇರಳ ಸರ್ಕಾರ ಮುಂದಾಗಿದೆ. ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಈ ಬಗ್ಗೆ ಸೂಚನೆ ನೀಡಿದ್ದಾರೆ. ಮಳೆಯ ಕಾರಣದಿಂದ ಪದೇ ಪದೆ ತರಗತಿ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ 2 ತಿಂಗಳ ರಜೆಯನ್ನು ಏಪ್ರಿಲ್-ಮೇ ಬದಲು ಜೂನ್-ಜುಲೈಗೆ ಬದಲಾಯಿಸಲು ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ.

ತಿರುವನಂತಪುರಂ: ಮಹತ್ವದ ಬೆಳವಣಿಗೆಯೊಂದರಲ್ಲಿ ಕೇರಳ ಸರ್ಕಾರ ಶೈಕ್ಷಣಿಕ ರಂಗದಲ್ಲಿ ಅಮೂಲಾಗ್ರ ಬದಲಾವಣೆ ತರಲು ಯೋಜನೆ ರೂಪಿಸುತ್ತಿದೆ. ಇನ್ನುಮುಂದೆ ಶಾಲೆಗಳ ಬೇಸಗೆ ರಜೆಯನ್ನು ಏಪ್ರಿಲ್‌-ಮೇ ಬದಲು ಜೂನ್‌-ಜುಲೈಯಲ್ಲಿ ನೀಡಲು ಮುಂದಾಗಿದೆ. ಕೇರಳದ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ (V. Sivankutty) ಈ ಬಗ್ಗೆ ಸೂಚನೆ ನೀಡಿದ್ದಾರೆ. ಮಳೆಯ ಕಾರಣದಿಂದ ಪದೇ ಪದೆ ತರಗತಿ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ 2 ತಿಂಗಳ ರಜೆಯನ್ನು ಏಪ್ರಿಲ್-ಮೇ ಬದಲು ಜೂನ್-ಜುಲೈಗೆ ಬದಲಾಯಿಸಲು ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ (Monsoon Impact). ಅದಾಗ್ಯೂ ಈ ಬಗ್ಗೆ ಇನ್ನೂ ಅಂತಿಮ ತೀರ್ಮಾನಕ್ಕೆ ಬಂದಿಲ್ಲ.

ಮಾಧ್ಯಮಗಳ ಜತೆ ಮಾತನಾಡಿದ ಅವರು, ಜೂನ್‌-ಜುಲೈಯಲ್ಲಿ ಭಾರಿ ಮಳೆ ಸುರಿಯುವ ಕಾರಣದಿಂದ ಹಲವು ಬಾರಿ ತರಗತಿ ನಡೆಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಇತರ ರಜಾ ದಿನಗಳಲ್ಲಿ ಹೆಚ್ಚುವರಿ ತರಗತಿ ನಡೆಸಬೇಕಾಗುತ್ತದೆ. ಇದನ್ನು ತಪ್ಪಿಸಲು ಈ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.



ಈ ಸುದ್ದಿಯನ್ನೂ ಓದಿ: Sadhvi Pragya Singh: 'ಅವಮಾನ ಸಹಿಸಿಕೊಂಡೆ'; ಮಾಲೆಗಾಂವ್‌ ತೀರ್ಪಿನ ಸಂದರ್ಭದಲ್ಲಿ ಭಾವುಕರಾದ ಪ್ರಜ್ಞಾ ಸಿಂಗ್‌

ಸಚಿವ ಶಿವನ್‌ಕುಟ್ಟಿ ಹೇಳಿದ್ದೇನು?

ʼʼಪ್ರತಿ ವರ್ಷ ಮುಂಗಾರು ಮಳೆ ತರಗತಿಯ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಶಾಲೆಗಳನ್ನು ನಿರಾಶ್ರಿತರ ತಾಣವನ್ನಾಗಿ ಮಾಡಬೇಕಾದ ಸ್ಥಿತಿಯೂ ನಿರ್ಮಾಣವಾಗುತ್ತದೆ. ಜತೆಗೆ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆʼʼ ಎಂದು ವಿವರಿಸಿದ್ದಾರೆ.

ಫೇಸ್‌ಬುಕ್‌ನಲ್ಲಿಯೂ ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ. ʼʼಸದ್ಯ ಕೇರಳದಲ್ಲಿ ಶಾಲೆಗಳಿಗೆ ಬೇಸಗೆ ರಜೆಯನ್ನು ಏಪ್ರಿಲ್‌-ಮೇಯಲ್ಲಿ ನೀಡಲಾಗುತ್ತದೆ. ಈ ವೇಳೆ ವಾತಾವರಣದ ತಾಪಮಾನ ಅಧಿಕವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಅನಾನುಕೂಲವಾಗುತ್ತದೆ ಎನ್ನುವ ಕಾರಣಕ್ಕೆ ಈ ತಿಂಗಳಲ್ಲಿ ರಜೆ ನೀಡುವ ಪದ್ಧತಿ ಆರಂಭವಾಗಿದೆ. ಇತ್ತ ಜೂನ್‌-ಜುಲೈಯಲ್ಲಿ ಧಾರಾಕಾರ ಸುರಿಯುವ ಮಳೆಯಿಂದಾಗಿ ಅನೇಕ ಬಾರಿ ತರಗತಿಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದಲೂ ಕೆಲವೊಮ್ಮೆ ರಜೆ ನೀಡಬೇಕಾಗುತ್ತದೆ. ಹೀಗಾಗಿ ಬೇಸಗೆ ರಜೆಯನ್ನು ಏಪ್ರಿಲ್‌-ಮೇ ಬದಲು ಧಾರಾಕಾರ ಮಳೆ ಸುರಿಯುವ ಜೂನ್‌-ಜುಲೈಗೆ ಬದಲಾಯಿಸಬೇಕೆಂಬ ಆಗ್ರಹ ಕೇಳಿ ಬಂದಿದೆ. ಇದರ ಜತೆಗೆ ಮೇ-ಜೂನ್‌ ಅವಧಿಯಲ್ಲಿ ರಜೆ ನೀಡುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ಈ ವಿಚಾರದಲ್ಲಿ ತಜ್ಞರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆʼʼ ಎಂದಿದ್ದಾರೆ.

ಅದಾಗ್ಯೂ ಈ ಬಗ್ಗೆ ಇನ್ನೂ ಅಂತಿಮ ತೀರ್ಮಾನಕ್ಕೆ ಬಂದಿಲ್ಲ ಎಂದೂ ಹೇಳಿದ್ದಾರೆ. ಸಾರ್ವಜನಿಕರು, ಪಾಲಕರು, ಶಿಕ್ಷಣ ತಜ್ಞರು ಮತ್ತು ಸರ್ಕಾರದ ಅಭಿಪ್ರಾಯ ಪಡೆದು ಈ ಬಗ್ಗೆ ನಿರ್ಧರಿಸಲಾಗುವುದು ಎಂದು ವಿವರಿಸಿದ್ದಾರೆ.

ʼʼಈ ನಿಯಮ ಜಾರಿಯಿಂದ ವಿದ್ಯಾರ್ಥಿಗಳಿಗಾಗುವ ಅನುಕೂಲ, ಅನಾನುಕೂಲಗಳೇನು? ಇದು ಅವರ ಶಿಕ್ಷಣ ಮತ್ತು ಆರೋಗ್ಯದ ಮೇಲೆ ಬೀರುವ ಪರಿಣಾಮಗಳೇನು? ಇತರ ದೇಶ, ರಾಜ್ಯಗಳಲ್ಲಿರುವ ವಾರ್ಷಿಕ ರಜೆಯ ಮಾದರಿ ನಮ್ಮಲ್ಲೂ ಅಳವಡಿಸಿಕೊಳ್ಳಬಹುದಾ? ಮುಂತಾದ ಅಂಶಗಳ ಬಗ್ಗೆಯೂ ಅಧ್ಯಯನ ನಡೆಯಲಿದೆʼʼ ಎಂದು ಅವರು ಹೇಳಿದ್ದಾರೆ.

ಒಂದುವೇಳೆ ಈ ನಿಯಮ ಜಾರಿಯಾದರೆ ಕೇರಳದ ಶೈಕ್ಷಕಣಿಕ ಕ್ಯಾಲಂಡರ್‌ ಬದಲಾಗಲಿದೆ. ಶಾಲೆಗಳ ವೇಳಾಪಟ್ಟಿಯನ್ನೇ ಅಮೂಲಾಗ್ರವಾಗಿ ಬದಲಾಯಿಸಲಿದೆ. ಜತೆಗೆ ಬೇರೆ ರಾಜ್ಯಗಳಲ್ಲಿ ಶಿಕ್ಷಣ ಮುಂದುವರಿಸಲು ಬಯಸುವ ವಿದ್ಯಾರ್ಥಿಗಳ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆ ಇದೆ.