ನವದೆಹಲಿ: ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (HUL) ತನ್ನ (Price Decrease) ಅತ್ಯಂತ ಜನಪ್ರಿಯ ಉತ್ಪನ್ನಗಳಾದ ಕಿಸಾನ್ ಜಾಮ್, ಹಾರ್ಲಿಕ್ಸ್, ಲಕ್ಸ್ ಸೋಪ್ ಮತ್ತು ಡವ್ ಶಾಂಪೂ ಸೇರಿದಂತೆ ಕೆಲವು ಉತ್ಪನ್ನಗಳ ಬೆಲೆಗಳನ್ನು ಕಡಿಮೆ ಮಾಡಿದೆ, ಹೊಸ ದರಗಳು ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿವೆ ಎಂದು ಪತ್ರಿಕೆಯ ಜಾಹೀರಾತಿನಲ್ಲಿ ತಿಳಿಸಲಾದೆ. 340 ಮಿಲಿ ಡವ್ ಶಾಂಪೂ ಬಾಟಲಿಯ ಬೆಲೆ ಈಗ 435 ರೂ.ಗೆ ಇಳಿಕೆಯಾಗಿದೆ ಎಂದು ಕಂಪನಿ ಘೋಷಿಸಿದೆ, ಹಿಂದಿನ ಬೆಲೆ 490 ರೂ.ಗಳಷ್ಟಿತ್ತು. 75 ಗ್ರಾಂ ಲೈಫ್‌ಬಾಯ್ ಸೋಪ್‌ಗಳ ನಾಲ್ಕು ಪ್ಯಾಕ್‌ನ ಬೆಲೆಯನ್ನು 68 ರೂ.ಗಳಿಂದ 60 ರೂ.ಗಳಿಗೆ ಇಳಿಸಲಾಗಿದೆ. ಇದಲ್ಲದೆ, 200 ಗ್ರಾಂ ಹಾರ್ಲಿಕ್ಸ್ ಜಾರ್‌ನ ಬೆಲೆಯನ್ನು 130 ರೂ.ಗಳಿಂದ 110 ರೂ.ಗಳಿಗೆ ಇಳಿಸಲಾಗಿದೆ, 200 ಗ್ರಾಂ ಕಿಸ್ಸಾನ್ ಜಾಮ್ ಬೆಲೆ 90 ರೂ.ಗಳಿಂದ 80 ರೂ.ಗಳಿಗೆ ಇಳಿಕೆಯಾಗಿದೆ.
ಇದಷ್ಟೇ ಅಲ್ಲದೇ, ಲಕ್ಸ್ ರೇಡಿಯಂಟ್ ಗ್ಲೋ ಸೋಪ್, ಡವ್ ಸೀರಮ್ ಬಾರ್, ಸನ್‌ಸಿಲ್ಕ್ ಬ್ಲಾಕ್ ಶೈನ್ ಶಾಂಪೂ, ಹಾರ್ಲಿಕ್ಸ್ ಚಾಕೊಲೇಟ್, ಕ್ಲಿನಿಕ್ ಪ್ಲಸ್ ಸ್ಟ್ರಾಂಗ್ & ಲಾಂಗ್ ಶಾಂಪೂ, ಬೂಸ್ಟ್, ಸೇರಿದಂತೆ ಹಲವು ಉತ್ಪನ್ನಗಳ ಬೆಲೆ ಕಡಿಮೆಯಾಗಿದೆ. ಗ್ರಾಹಕ ಸರಕುಗಳ ತಯಾರಕರು ಜಿಎಸ್‌ಟಿ ಕಡಿತದ ಪ್ರಯೋಜನಗಳನ್ನು ಗ್ರಾಹಕರಿಗೆ ವರ್ಗಾಯಿಸಬೇಕು ಎಂಬ ಸರ್ಕಾರದ ನಿರ್ದೇಶನದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸೆಪ್ಟೆಂಬರ್ 3 ರಂದು, ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್ ತನ್ನ 56 ನೇ ಸಭೆಯಲ್ಲಿ ಶಾಂಪೂ ಮತ್ತು ಹೇರ್ ಆಯಿಲ್‌ನಂತಹ ದೈನಂದಿನ ಬಳಕೆಯ ಉತ್ಪನ್ನಗಳಿಂದ ಹಿಡಿದು ಆಟೋಮೊಬೈಲ್‌ಗಳು ಮತ್ತು ಟೆಲಿವಿಷನ್‌ಗಳವರೆಗೆ ಹಲವಾರು ವಸ್ತುಗಳ ಮೇಲಿನ ದರಗಳನ್ನು ಕಡಿತಗೊಳಿಸಿತು. ಕೌನ್ಸಿಲ್ ರಚನೆಯನ್ನು ಮೂರು ಸ್ಲ್ಯಾಬ್‌ಗಳಿಗೆ - 5%, 18% ಮತ್ತು 40% ಗೆ ಸರಳೀಕರಿಸಿತು.
ಯುಎಚ್‌ಟಿ ಹಾಲು, ಪನೀರ್, ಖಾಕ್ರಾ, ಪಿಜ್ಜಾ ಬ್ರೆಡ್, ರೋಟಿ ಮತ್ತು ಪರಾಠಾಗಳನ್ನು ಜಿಎಸ್‌ಟಿಯಿಂದ ಸಂಪೂರ್ಣವಾಗಿ ವಿನಾಯಿತಿ ನೀಡಲಾಗಿದೆ. ಬೆಣ್ಣೆ, ತುಪ್ಪ, ಚೀಸ್, ಕಂಡೆನ್ಸ್ಡ್ ಮಿಲ್ಕ್, ಜಾಮ್‌ಗಳು, ಸಾಸ್‌ಗಳು, ಸೂಪ್‌ಗಳು, ಪಾಸ್ತಾ, ನಮ್ಕೀನ್‌ಗಳು ಮತ್ತು ಮಿಠಾಯಿ ವಸ್ತುಗಳ ಮೇಲಿನ ತೆರಿಗೆಯನ್ನು ಈಗ ಕೇವಲ 5% ಕ್ಕೆ ಇಳಿಸಲಾಗಿದೆ, ಇದು 12-18% ರಿಂದ ಕಡಿಮೆಯಾಗಿದೆ. ಬಾದಾಮಿ, ಗೋಡಂಬಿ, ಪಿಸ್ತಾ, ಖರ್ಜೂರ, ಅಂಜೂರ ಮತ್ತು ಸಿಟ್ರಸ್ ಹಣ್ಣುಗಳಂತಹ ಒಣ ಹಣ್ಣುಗಳ ಮೇಲಿನ ತೆರಿಗೆಯನ್ನು ಸಹ 5% ಕ್ಕೆ ಇಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Thimmanna Bhagwath Column: ಟ್ರಂಪ್ ಸುಂಕದ ಬರೆಗೆ ಜಿಎಸ್‌ಟಿ ಕಡಿತದ ಮುಲಾಮು
ಸೆಪ್ಟೆಂಬರ್ 22 ರಿಂದ ಜಾರಿಗೆ ಬರುವ ಹಲವಾರು ಉತ್ಪನ್ನಗಳು ಮತ್ತು ಸೇವೆಗಳ ಮೇಲಿನ ಜಿಎಸ್‌ಟಿ ಕಡಿತದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಬೆಲೆ ಇಳಿಕೆ ಬಳಿಕ ಕಂಪನಿಗಳು ಪರಿಷ್ಕರಣೆಯ ಬಗ್ಗೆ ಒಂದು ಅಥವಾ ಹೆಚ್ಚಿನ ಪತ್ರಿಕೆಗಳಲ್ಲಿ ಕನಿಷ್ಠ ಎರಡು ಜಾಹೀರಾತುಗಳನ್ನು ನೀಡಬೇಕು ಮತ್ತು ವಿತರಕರು ಹಾಗೂ ರಾಜ್ಯ ಮತ್ತು ಕೇಂದ್ರ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಸರ್ಕಾರ ತಿಳಿಸಿದೆ.