ದಿಸ್‌ಪುರ: ಮುಂಬೈಯಿಂದ ಕೋಲ್ಕತಾಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ (IndiGo Flight) ಸಹಪ್ರಯಾಣಿಕನಿಂದ ಹಲ್ಲೆಗೊಳಗಾಗಿ ನಾಪತ್ತೆಯಾಗಿದ್ದ ಅಸ್ಸಾಂ ಮೂಲದ ಹುಸೇನ್ ಅಹ್ಮದ್ ಮಜುಂದಾರ್ (Hussain Ahmed Majumdar) ಅಸ್ಸಾಂನ ಬಾರ್ಪೇಟಾ (Barpeta) ರಸ್ತೆ ರೈಲು ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಮನೆಗೆ ಹಿಂದಿರುಗಿದ್ದಾರೆ. ಆಗಸ್ಟ್ 1ರಂದು ವಿಮಾನದೊಳಗೆ ನಡೆದ ಹಲ್ಲೆಯಿಂದ ಆಘಾತಕ್ಕೊಳಗಾಗಿದ್ದ ಲಾಥಿಗ್ರಾಮದ (Lathigram) ಹುಸೇನ್ ಅಹ್ಮದ್ ಕೋಲ್ಕತಾ ನಿಲ್ದಾಣದಿಂದ ನಾಪತ್ತೆಯಾಗಿದ್ದರು. ಭಾನುವಾರ ಅವರು ತಮ್ಮ ಮನೆಗೆ ಹಿಂದಿರುಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆ ಮೂಲಕ ಆತಂಕ ಮೂಡಿಸಿದ್ದ ಪ್ರಕರಣ ಸುಖಾಂತ್ಯ ಕಂಡಿದೆ.
ಕೋಲ್ಕಾತಾದಿಂದ ಮತ್ತೊಂದು ವಿಮಾನದಲ್ಲಿ ಅಸ್ಸಾಂನ ಸಿಲ್ಚಾರ್‌ಗೆ (Silchar) ತೆರಳಬೇಕಿದ್ದ ಹುಸೇನ್ ಘಟನೆ ಬಳಿಕ ಮಾನಸಿಕವಾಗಿ ನೊಂದಿದ್ದರು. ಹೀಗಾಗಿ ಕೋಲ್ಕತಾದಿಂದ ರೈಲು ಹತ್ತಿ ಅಸ್ಸಾಮ್‌ಗೆ ಮರಳಿದ್ದಾರೆ ಎನ್ನಲಾಗಿದೆ. ಭಾನುವಾರ ಬಾರ್ಪೇಟಾ ರಸ್ತೆ ರೈಲು ನಿಲ್ದಾಣದಲ್ಲಿ ಹುಸೇನ್‌ನನ್ನು ನೋಡುವ ತನಕ ಅವರೆಲ್ಲಿದ್ದಾರೆ ಎನ್ನುವ ಮಾಹಿತಿ ಯಾರಿಗೂ ಇರಲಿಲ್ಲ. ಇದೀಗ ಮನೆಯವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
समाज पूरी तरह सड़ चूका है pic.twitter.com/l03axtIqSc
— Adil siddiqui (azmi) (@adilsiddiqui7) August 1, 2025
ಈ ಸುದ್ದಿಯನ್ನೂ ಓದಿ: IndiGo Flight: 5 ವರ್ಷದ ಮಗುವಿನ ಕತ್ತಿನಲ್ಲಿದ್ದ ಚಿನ್ನದ ಸರ ಎಗರಿಸಿದ ಇಂಡಿಗೋ ಫ್ಲೈಟ್ ಸಿಬ್ಬಂದಿ
ಘಟನೆಯ ವಿವರ
ಮುಂಬೈಯಿಂದ ಕೋಲ್ಕತಾಗೆ ಬಂದ ಹುಸೇನ್ ಬಳಿಕ ಅಲ್ಲಿಂದ ಅಸ್ಸಾಂನ ಸಿಲ್ಚಾರ್‌ಗೆ ಮತ್ತೊಂದು ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಆದರೆ ಕೋಲ್ಕತಾ ತಲುಪುವ ಮುನ್ನ ನಡೆದ ಘಟನೆ ಅವರಿಗೆ ತೀವ್ರ ಆಘಾತ ಉಂಟು ಮಾಡಿತ್ತು. ಇದ್ದಕ್ಕಿಂತೆ ಹುಸೇನ್ ಕೆನ್ನೆಗೆ ಸಹಪ್ರಯಾಣಿಕ ಹಫೀಜುಲ್ ರೆಹಮಾನ್ ಹೊಡೆದಿದ್ದ. ಈ ಘಟನೆಗೆ ಸಂಬಂಧಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆ ವಿಡಿಯೊದಲ್ಲಿ ಸೀಟಿನಲ್ಲಿ ಕುಳಿತಿದ್ದ ಹಫೀಜುಲ್ ರೆಹಮಾನ್ ಇದ್ದಕ್ಕಿದ್ದಂತೆ ಹುಸೇನ್‌ಗೆ ಕಪಾಳಮೋಕ್ಷ ಮಾಡುವುದನ್ನು ಕಾಣಬಹುದು.
ಈ ವೇಳೆ ಅಲ್ಲಿದ್ದ ವಿಮಾನ ಸಿಬ್ಬಂದಿ ತಕ್ಷಣ ಹುಸೇನ್‌ನನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ಕಾಪಾಡಿದ್ದಾರೆ. ಆದರೆ ಇದ್ದಕ್ಕಿದ್ದಂತೆ ನಡೆದ ಹಲ್ಲೆಯಿಂದ ಆಘಾತಕ್ಕೊಳಗಾಗಿ ಹುಸೇನ್ ಅಳಲು ಶುರು ಮಾಡಿದ್ದರು. ಜತೆಗೆ ಉಳಿದ ಪ್ರಯಾಣಿಕರು ಹಲ್ಲೆ ನಡೆಸಿದಾತನ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಳ್ಳುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಆತ ಯಾಕಾಗಿ ಹುಸೇನ್ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನುವುದು ತಿಳಿದು ಬಂದಿಲ್ಲ.
ಕೋಲ್ಕತಾದಲ್ಲಿ ವಿಮಾನ ಬಂದಿಳಿಯುತ್ತಿದ್ದಂತೆ ಹಲ್ಲೆ ನಡೆಸಿದ ಹಫೀಜುಲ್ ರೆಹಮಾನ್‌ನನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದರು. ಜತೆಗೆ ಇನ್ನುಮುಂದೆ ತನ್ನ ವಿಮಾನದಲ್ಲಿ ಸಂಚರಿಸದಂತೆ ಇಂಡಿಗೋ ಸಂಸ್ಥೆ ನಿಷೇಧ ಹೇರಿದೆ.
ಗಾಬರಿಗೊಳಗಾಗಿದ್ದ ಹುಸೇನ್ ಮನೆಯವರು
ಹುಸೇನ್ ಬಂದಿಳಿಯುತ್ತಾರೆ ಎನ್ನುವ ಕಾರಣಕ್ಕೆ ಅವರ ಮನೆಯವರು ಸಿಲ್ಚಾರ್ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದರು. ಈ ಮಧ್ಯೆ ಹಲ್ಲೆಯ ವಿಡಿಯೊ ವೈರಲ್ ಆಗಿ ಅವರ ಗಮನಕ್ಕೆ ಬಂದಿತ್ತು. ಗಾಬರಿಯಿಂದ ಹುಸೇನ್‌ಗೆ ಕರೆ ಮಾಡಿದರೆ ಮೊಬೈಲ್ ಸ್ವಿಚ್‌ಆಫ್ ಆಗಿತ್ತು. ಜತೆಗೆ ವಿಮಾನ ನಿಲ್ದಾಣದಿಂದ ನಾಪತ್ತೆಯಾಗಿದ್ದಾರೆ ಎನ್ನುವ ಮಾಹಿತಿ ಅವರಿಗೆ ತಿಳಿದು ಇನ್ನಷ್ಟು ಗಾಬರಿಯಾಗಿತ್ತು. ಇದೀಗ ಕೊನೆಗೂ ಹುಸೇನ್ ಮನೆಗೆ ಮರಳಿದ್ದಾರೆ.
ಘಟನೆ ಬಗ್ಗೆ ಮಾತನಾಡಿದ ಹುಸೇನ್, ʼʼಸದ್ಯ ಮನೆಯವನ್ನು ಭೇಟಿಯಾಗಿದ್ದು ಸಮಾಧಾನ ತಂದಿದೆ. ಇಂತಹ ಅನುಭವ ಯಾರಿಗೂ ಅಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆʼʼ ಎಂಬುದಾಗಿ ಹೇಳಿದ್ದಾರೆ.