IndiGo Flight: 5 ವರ್ಷದ ಮಗುವಿನ ಕತ್ತಿನಲ್ಲಿದ್ದ ಚಿನ್ನದ ಸರ ಎಗರಿಸಿದ ಇಂಡಿಗೋ ಫ್ಲೈಟ್ ಸಿಬ್ಬಂದಿ
ಇಂಡಿಗೋ ಏರ್‌ಲೈನ್ಸ್‌ನ ಸಿಬ್ಬಂದಿಯೊಬ್ಬರು 5 ವರ್ಷದ ಮಗುವಿನಿಂದ ಚಿನ್ನದ ಸರ ಎಗರಿಸಿದ ಆರೋಪ ಕೇಳಿ ಬಂದಿದ್ದು, ಪ್ರಕರಣ ದಾಖಲಾಗಿದೆ. ಏ. 1ರಂದು ತಿರುವನಂತಪುರಂನಿಂದ ಬೆಂಗಳೂರಿಗೆ ತೆರಳುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಸಾಂದರ್ಭಿಕ ಚಿತ್ರ.

ಹೊಸದಿಲ್ಲಿ: ಅವ್ಯವಸ್ಥೆಗಳ ಕಾರಣದಿಂದ ಸದಾ ಸುದ್ದಿಯಾಗುತ್ತಿದ್ದ ಇಂಡಿಗೋ ಏರ್‌ಲೈನ್ ಮತ್ತೊಮ್ಮೆ ಸದ್ದು ಮಾಡಿದೆ. ಇಂಡಿಗೋ ಏರ್‌ಲೈನ್ಸ್‌ನ (IndiGo Flight) ಸಿಬ್ಬಂದಿಯೊಬ್ಬರು 5 ವರ್ಷದ ಮಗುವಿನಿಂದ ಚಿನ್ನದ ಸರ ಎಗರಿಸಿದ ಆರೋಪ ಕೇಳಿ ಬಂದಿದ್ದು, ಪ್ರಕರಣ ದಾಖಲಾಗಿದೆ. ಈ ಬಗ್ಗೆ ಇಂಡಿಗೋ ಸಿಬ್ಬಂದಿ ಪ್ರತಿಕ್ರಿಯಿಸಿದ್ದು, ಘಟನೆಯ ಮಾಹಿತಿ ಸಿಕ್ಕಿದ್ದು, ತನಿಖೆಗೆ ಎಲ್ಲ ರೀತಿಯಿಂದಲೂ ಸಹಕರಿಸುವುದಾಗಿ ತಿಳಿಸಿದೆ. ಜತೆಗೆ ಚಿನ್ನ ಕಳೆದುಕೊಂಡ ಪ್ರಯಾಣಿಕರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿದೆ. ಏ. 1ರಂದು ಈ ಘಟನೆ ನಡೆದಿತ್ತು.
ಬೆಂಗಳೂರು ಮೂಲದ ಮಗುವಿನ ತಾಯಿ ಸಿಬ್ಬಂದಿ ವಿರುದ್ದ ದೂರು ದಾಖಲಿಸಿದ್ದಾರೆ. ʼʼವಿಮಾನದ ಸಿಬ್ಬಂದಿಯೊಬ್ಬರು ಮಗುವನ್ನು ವಾಶ್ ರೂಂಗೆ ಕರೆದುಕೊಂಡು ಹೋಗಿದ್ದರು. ಅದಾದ ಬಳಿಕ ಮಗುವಿನ ಕೊರಳಲ್ಲಿ ಇದ್ದ ಚಿನ್ನದ ಸರ ಕಾಣೆಯಾಗಿದೆʼʼ ಎಂದು ಆರೋಪಿಸಿದ್ದಾರೆ.
ಮಹಿಳೆ ಹೇಳಿದ್ದೇನು?
ದೂರು ನೀಡಿದ ಪ್ರಿಯಾಂಕಾ ಮುಖರ್ಜಿ ಮಾತನಾಡಿ, ʼʼನಾವು ಇಂಡಿಗೋ 6ಇ 661 (IndiGo flight 6E 661) ವಿಮಾನದಲ್ಲಿ ಕೇರಳದ ತಿರುವನಂತಪುರಂನಿಂದ ಬೆಂಗಳೂರಿಗೆ ಇಬ್ಬರು ಮಕ್ಕಳೊಂದಿಗೆ ಪ್ರಯಾಣ ಬೆಳೆಸಿದ್ದೆವು. ಈ ವೇಳೆ ಮಗುವಿನ ಚಿನ್ನದ ಸರ ಕಾಣೆಯಾಗಿದೆʼʼ ಎಂದು ವಿವರಿಸಿದ್ದಾರೆ.
ಇಂಡಿಗೋ ಸಿಬ್ಬಂದಿ ಅದಿತಿ ಅಶ್ವಿನಿ ಶರ್ಮಾ ತಮ್ಮ ಮಗುವಿನ ಕತ್ತಿನಲ್ಲಿದ್ದ 80 ಸಾವಿರ ರೂ. ಮೌಲ್ಯದ 20 ಗ್ರಾಮ್ ಚಿನ್ನದ ಸರವನ್ನು ಎಗರಿಸಿದ್ದಾರೆ ಎಂದು ದೂರಿನಲ್ಲಿ ಅವರು ತಿಳಿಸಿದ್ದಾರೆ. ಸದ್ಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಇಂಡಿಗೋ ಹೇಳಿದ್ದೇನು?
ತಿರುವನಂತಪುರಂನಿಂದ ಬೆಂಗಳೂರಿಗೆ ಸಂಚರಿಸಿದ್ದ 6ಇ 661 ವಿಮಾನದಲ್ಲಿ ಸಿಬ್ಬಂದಿಯೊಬ್ಬರು ಪ್ರಯಾಣಿಕರೊಬ್ಬರ ಚಿನ್ನದ ಸರವನ್ನು ಕದ್ದಿರುವುದಾಗಿ ದೂರು ಕೇಳಿ ಬಂದಿದೆ. ಇಂತಹ ಘಟನೆಯನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ತನಿಖೆ ನಡೆಸುವ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಯಾರನ್ನೂ ಸಂರಕ್ಷಿಸುವ ಉದ್ದೇಶ ನಮಗಿಲ್ಲʼʼ ಎಂದು ಇಂಡಿಗೋ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
![]()
ಏ. 1ರಂದು ತಿರುವನಂತಪುರಂನಿಂದ ಬೆಂಗಳೂರಿಗೆ 5 ಮತ್ತು 2 ವರ್ಷದ ಮಕ್ಕಳೊಂದಿಗೆ ತೆರಳುತ್ತಿದ್ದೆ. ಈ ವೇಳೆ ವಿಮಾನದೊಳಗೆ ಇಬ್ಬರು ಮಕ್ಕಳು ಜಗಳವಾಡತೊಡಗಿದರು. ಆಗ ಅದಿತಿ ಬಳಿಗೆ ಬಂದು 5 ವರ್ಷದ ಮಗುವನ್ನು ಸಂಭಾಳಿಸುವುದಾಗಿ ತಿಳಿಸಿ ವಾಶ್ ರೂಂಗೆ ಕರೆದುಕೊಂಡು ಹೋದರು. ಚಿಕ್ಕ ಮಗುವನ್ನು ನಾನು ನೋಡಿಕೊಂಡೆ. ಸ್ವಲ್ಪ ಹೊತ್ತಿನಲ್ಲಿ ಮರಳಿ ಬಂದ ಮಗುವಿನ ಕತ್ತಿನಲ್ಲಿದ್ದ 20 ಗ್ರಾಂ ತೂಗುವ ಚಿನ್ನದ ಸರ ನಾಪತ್ತೆಯಾಗಿದ್ದು ಗಮನಿಸಿದೆ. ಈ ಬಗ್ಗೆ ಅದಿತಿ ಬಳಿ ಕೇಳಿದರೆ ಗೊತ್ತಿಲ್ಲ ಎಂದರು. ಹೀಗಾಗಿ ದೂರು ನೀಡಿದ್ದೇನೆ. ಇಂಡಿಗೋ ಸಿಬ್ಬಂದಿ ಅದಿತಿಯನ್ನು ರಕ್ಷಿಸಲು ಮುಂದಾಗಿದ್ದರು. ಘಟನೆ ಬಗ್ಗೆ ಸಿಸಿಟಿವಿ ದೃಶ್ಯ ಸಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. -ಪ್ರಿಯಾಂಕಾ ಮುಖರ್ಜಿ
83 ವರ್ಷದ ವೃದ್ಧೆಗೆ ಸಿಗದ ವ್ಹೀಲ್‌ಚೇರ್
ದಿಲ್ಲಿ ವಿಮಾನ ನಿಲ್ದಾಣದಲ್ಲಿ 83 ವರ್ಷದ ಮಹಿಳೆಗೆ ವ್ಹೀಲ್‌ಚೇರ್ ನೀಡದೆ ಇಂಡಿಗೋ ಏರ್‌ಲೈನ್ಸ್ ಎಡವಟ್ಟು ಮಾಡಿಕೊಂಡಿರುವ ಘಟನೆ ಕಳೆದ ತಿಂಗಳು ವರದಿಯಾಗಿತ್ತು. ಮಾ. 5ರಂದು 6ಇ 5061 (6E 5061) ವಿಮಾನದಲ್ಲಿ ಭುವನೇಶ್ವರದಿಂದ ದಿಲ್ಲಿಗೆ ತೆರಳಿದ್ದ ಸುಸಾಮಾ ರಥ್ ಎನ್ನುವ ವೃದ್ಧೆಗೆ ಈ ಕಹಿ ಅನುಭವವವಾಗಿತ್ತು.