Fact Check: ಭಾರತೀಯ ಸೇನೆಯ ನೈತಿಕ ಸ್ಥೈರ್ಯ ಕೆಡಿಸಲು ಪಾಕಿಸ್ತಾನದ ಕಳ್ಳಾಟ; ಫ್ಯಾಕ್ಟ್ ಚೆಕ್‌ನಲ್ಲಿ ನಕಲಿ ಸುದ್ದಿಗಳ ಅಸಲಿಯತ್ತು ಬಯಲು
Pahalgam Attack: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ವಾತಾವರಣ ಮೂಡಿದೆ. ಈ ಮಧ್ಯೆ ಭಾರತೀಯ ಸೇನೆಯ ನೈತಿಕ ಸ್ಥೈರ್ಯ ಕೆಡಿಸುವ ನಕಲಿ ಸುದ್ದಿಗಳು ಹರಿದಾಡುತ್ತಿವೆ. ಈ ಸುದ್ದಿಗಳ ಅಸಲಿಯತ್ತೇನು ಎನ್ನುವ ವಿವರ ಇಲ್ಲಿದೆ.

ಸಾಂದರ್ಭಿಕ ಚಿತ್ರ.

ಹೊಸದಿಲ್ಲಿ: ಏ. 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ (Pahalgam Attack) 25 ಪ್ರವಾಸಿಗರು ಸೇರಿ ಒಟ್ಟು 26 ಮಂದಿ ಮೃತಪಟ್ಟಿದ್ದಾರೆ. ಇದಾದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಭೀತಿ ಮೂಡಿದೆ. ಇದರ ಮಧ್ಯೆ ಭಾರತೀಯ ಸೇನೆಯಲ್ಲಿ ಬಿರುಕು ಉಂಟಾಗಿದೆ ಎಂಬ ನಕಲಿ ಪತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದೀಗ ಪ್ರೆಸ್ ಇನ್ಫರ್ಮೇಷನ್ ಬ್ಯುರೋ (Press Information Bureau-PIB) ಫ್ಯಾಕ್ಟ್ ಚೆಕ್ (Fact Check) ವರದಿ ಪ್ರಕಟಿಸಿದ್ದು, ಇದು ನಕಲಿ ಎನ್ನುವುದನ್ನು ಸ್ಪಷ್ಟಪಡಿಸಿದೆ.
ಇದು ಭಾರತೀಯ ಸಶಸ್ತ್ರ ಪಡೆಗಳ ವಿಶ್ವಾಸಾರ್ಹತೆಯನ್ನು ಹಾಳು ಮಾಡುವ ದುರುದ್ದೇಶಪೂರಿತ ಪ್ರಯತ್ನ. ಎಚ್ಚರವಾಗಿರಿ ಮತ್ತು ಪರಿಶೀಲಿಸದ ಹೊರತು ಮಾಹಿತಿಯನ್ನು ಹಂಚಿಕೊಳ್ಳಬೇಡಿ ಎಂದು ಹೇಳಿದೆ.
ಫ್ಯಾಕ್ಟ್ ಚೆಕ್ ವರದಿ:
Pro-Pakistan social media accounts are falsely claiming that confidential documents related to the preparedness of the #IndianArmy have been leaked#PIBFactCheck
— PIB Fact Check (@PIBFactCheck) April 28, 2025
❌ These documents are #FAKE
✅ Please avoid sharing unverified information and rely only on official sources from… pic.twitter.com/qRGdn8vUgr
ಎಚ್ಚರಿಕೆ ನೀಡಿದ ಪಿಐಬಿ
ಇದರ ಜತೆಗೆ ಪಿಐಬಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಹಲವು ನಕಲಿ ಸುದ್ದಿಗಳ ಬಗ್ಗೆಯೂ ಎಚ್ಚರಿಕೆ ನೀಡಿದೆ. ಈಗ ಭಾರತ-ಪಾಕಿಸ್ತಾನ ನಡುವೆ ತಲೆದೋರಿರುವ ಉದ್ವಿಗ್ನ ಪರಿಸ್ಥಿತಿಯ ಮಧ್ಯೆ ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಭಾರತೀಯ ಸೇನೆಯ ಸಿದ್ಧತೆ ನಡೆಸುತ್ತಿದೆ ಎನ್ನಲಾದ ನಕಲಿ ಗೌಪ್ಯ ದಾಖಲೆಗಳೂ ವೃಯಲ್ ಆಗುತ್ತಿದೆ. ಸೋರಿಕೆಯಾದ ದಾಖಲೆಗಳು ಭಾರತದ ರಕ್ಷಣಾ ಸನ್ನದ್ಧತೆಯಲ್ಲಿನ ಗಂಭೀರ ಲೋಪವನ್ನು ಸೂಚಿಸುತ್ತವೆ ಎಂದೂ ಕೆಲವು ಪೋಸ್ಟ್‌ನಲ್ಲಿ ಬರೆಯಲಾಗಿದೆ. ಈ ಎಲ್ಲ ಸುದ್ದಿಗಳನ್ನೂ ಫ್ಯಾಕ್ಟ್ ಚೆಕ್ ಮೂಲಕ ನಿರಾಕರಿಸಲಾಗಿದೆ. ಗೌಪ್ಯ ಮಾಹಿತಿ ಸೋರಿಕೆಯಾಗಿದೆ ಎನ್ನುವ ಆರೋಪವನ್ನು ಕೇಂದ್ರ ಸರ್ಕಾರವು ತಳ್ಳಿ ಹಾಕಿದೆ. ಹರಿದಾಡುತ್ತಿರುವ ದಾಖಲೆಗಳನ್ನು ʼನಕಲಿʼ ಎಂದು ಕರೆದಿದೆ ಮತ್ತು ಈ ತಪ್ಪು ಮಾಹಿತಿಗೆ ನಂಬದಂತೆ ಎಚ್ಚರಿಕೆ ನೀಡಿದೆ.
ಫ್ಯಾಕ್ಟ್ ಚೆಕ್ ವರದಿ:
A WhatsApp message is going around claiming that government has opened a bank account for the modernization of the Indian Army.#PIBFactCheck
— PIB Fact Check (@PIBFactCheck) April 27, 2025
❌ This claim is MISLEADING
❌The bank account mentioned in the message is NOT meant for modernization of Indian Army or for purchase… pic.twitter.com/flm2vGe22G
ಈ ಸುದ್ದಿಯನ್ನೂ ಓದಿ: Pahalgam Terror Attack: ಪಾಕಿಸ್ತಾನಕ್ಕೆ ಮತ್ತೆ ಶಾಕ್ ಕೊಟ್ಟ ಭಾರತ; ಬಾಗ್ಲಿಹಾರ್ ಅಣೆಕಟ್ಟಿನ ಮೂಲಕ ನೀರಿನ ಹರಿವು ಕಡಿತ
ಹಾಗಾದರೆ ನಿಜವಾಗಿಯೂ ಏನು ನಡೆಯುತ್ತಿದೆ? ಯಾಕಾಗಿ ಸುಳ್ಳು ಸುದ್ದಿ ಹರಡುತ್ತಿದೆ? ಎನ್ನುವುದನ್ನು ನೋಡೋಣ. ಇತ್ತೀಚೆಗೆ ವೈರಲ್ ಆದ ಪೋಸ್ಟ್‌ನಲ್ಲಿ ಭಾರತೀಯ ಸೇನೆಯ ಸಮರ ಸಿದ್ಧತೆಯನ್ನು ವಿವರಿಸಲಾಗಿದೆ. ಜತೆಗೆ ಸೈನಿಕರ ನೈತಿಕ ಸ್ಥೈರ್ಯವು ಸಾರ್ವಕಾಲಿಕ ಕೆಳ ಮಟ್ಟದಲ್ಲಿದೆ, ಪಲಾಯನಗಳು ಹೆಚ್ಚುತ್ತಿವೆ ಎಂದಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿದೇಶಿ, ಅದರಲ್ಲೂ ವಿಶೇಷವಾಗಿ ಇಸ್ರೇಲಿಗರು ಭಾರತೀಯ ಸೈನಿಕ ಕಾರ್ಯಾಚರಣೆಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದಾರೆ ಎಂದೂ ಉಲ್ಲೇಖಿಸಲಾಗಿದೆ.
ಈ ಸುಳ್ಳು ಹೇಳಿಕೆಗಳು ಭೀತಿಯನ್ನು ಪ್ರಚೋದಿಸಲು ಮತ್ತು ಭಾರತದ ರಕ್ಷಣಾ ಪಡೆಗಳ ವಿರುದ್ಧ ಗೊಂದಲವನ್ನು ಉಂಟು ಮಾಡಲು ಸೃಷ್ಟಿಸಲಾಗಿದೆ ಎನ್ನುವುದು ಸ್ಪಷ್ಟವಾಗಿದೆ. ಕೇಂದ್ರ ಸರ್ಕಾರದ ಅಧಿಕೃತ ಮಾಧ್ಯಮ ಸಂವಹನ ವಿಭಾಗ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಸುಳ್ಳು ಮಾಹಿತಿಯನ್ನು ಖಂಡಿಸಿದೆ. #PIBFactCheck ಹ್ಯಾಶ್‌ಟ್ಯಾಗ್ ಬಳಸಿ, ಸೋರಿಕೆಯಾದ ಫೈಲ್ ನಕಲಿ ಮಾತ್ರವಲ್ಲ, ಪಾಕಿಸ್ತಾನ ಪರ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಈ ತಪ್ಪು ಮಾಹಿತಿ ಹರಡುತ್ತಿವೆ ಎಂದು ವಿವರಿಸಿದೆ. "ಇದು ಭಾರತೀಯ ಸಶಸ್ತ್ರ ಪಡೆಗಳನ್ನು ಧೈರ್ಯವನ್ನು ಕುಗ್ಗಿಸುವ ಮತ್ತು ಸಾರ್ವಜನಿಕರಲ್ಲಿ ಗೊಂದಲವನ್ನು ಸೃಷ್ಟಿಸುವ ಪಿತೂರಿಯ ಭಾಗ" ಎಂದು ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಐಎಎನ್ಎಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಭಾರತೀಯ ಸೇನೆಯ ಆಧುನೀಕರಣಕ್ಕೆ ಮತ್ತು ಗಾಯಗೊಂಡ ಅಥವಾ ಹುತಾತ್ಮ ಸೈನಿಕರ ಕುಡುಂಬಕ್ಕೆ ನೆರವಾಗಲು ಪ್ರತಿದಿನ 1 ರೂ.ಗಳನ್ನು ದೇಣಿಗೆ ನೀಡುವಂತೆ ಕೋರುವ ಸಂದೇಶವೊಂದು ಇತ್ತೀಚೆಗೆ ಹರಿದಾಡಿತ್ತು. ಇದು ಕೂಡ ನಕಲಿ ಸುದ್ದಿ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಈ ಸಂದೇಶವನ್ನು ದಾರಿ ತಪ್ಪಿಸುವ ಅಭಿಯಾನದ ಒಂದು ಭಾಗ ಎಂದು ಕರೆದಿರುವ ರಕ್ಷಣಾ ಸಚಿವಾಲಯ, ಅಂತಹ ಯಾವುದೇ ಅಭಿಯಾನವನ್ನು ಪ್ರಾರಂಭಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಜತೆಗೆ ಇಂತಹ ನಕಲಿ ಸುದ್ದಿಯನ್ನು ನಂಬಿ ಹಣ ಕಳುಹಿಸಬೇಡಿ ಎಂದು ಎಚ್ಚರಿಸಿದೆ.