New Rules: ರೈಲು ಪ್ರಯಾಣ, ಎಟಿಎಂ ಬಳಕೆ.. ಇಂದಿನಿಂದ ಹೊಸ ನಿಯಮಗಳು ಅನ್ವಯ
ಇಂದಿನಿಂದ (ಮೇ 1) ರೈಲ್ವೆಯಲ್ಲಿ ಹೊಸ ನಯಮಗಳು ಅನ್ವಯವಾಗುತ್ತಿವೆ. ಹೊಸ ನಿಯಮಗಳ ಪ್ರಕಾರ ವೈಟಿಂಗ್ ಲಿಸ್ಟ್ (Waiting list ticket) ಟಿಕೆಟ್‌ನೊಂದಿಗೆ ಸ್ಲೀಪರ್ ಅಥವಾ ಎಸಿ ಕೋಚ್‌ಗಳಲ್ಲಿ ಪ್ರಯಾಣಿಸುವುದನ್ನು ನಿರ್ಬಂಧಿಸಲಾಗಿದೆ. ದೃಢೀಕೃತ ಟಿಕೆಟ್‌ಗಳನ್ನು ಹೊಂದಿದ್ದರೆ ಮಾತ್ರ ಇದಕ್ಕೆ ಪ್ರವೇಶ ಪಡೆಯಬಹುದು.

ಸಾಂದರ್ಭಿಕ ಚಿತ್ರ

ನವದೆಹಲಿ: ರಾಜ್ಯದೊಳಗೆ, ಹೊರ ರಾಜ್ಯ, ದೇಶದ ವಿವಿಧ ಭಾಗಗಳಿಗೆ ರೈಲಿನಲ್ಲಿ (train travel) ಮೇ 1 ಅಂದರೆ ಇಂದಿನಿಂದ ಪ್ರಯಾಣ ಮಾಡುವ ಯೋಜನೆ ಇದ್ದರೆ ಭಾರತೀಯ ರೈಲ್ವೆ ಇಲಾಖೆಯು (Indian Railways) ಜಾರಿಗೆ ತಂದಿರುವ ಹೊಸ ನಿಯಮದ (New rule) ಬಗ್ಗೆ ತಿಳಿದು ಪ್ರಯಾಣಿಸುವುದು ಉತ್ತಮ. ಇಲ್ಲವಾದರೆ ಪ್ರಯಾಣದ ವೇಳೆ ತೊಂದರೆಯನ್ನು ಎದುರಿಸಬೇಕಾಗುತ್ತದೆ. ಭಾರತೀಯ ರೈಲ್ವೆಯು ಪ್ರಯಾಣಿಕರಿಗೆ ಸಂಬಂಧಿಸಿ ಆಗಾಗ್ಗೆ ಹೊಸ ನವೀಕರಣ ಯೋಜನೆಗಳನ್ನು ಪ್ರಕಟಿಸುತ್ತದೆ. ಅದರಂತೆ ಮೇ 1ರಿಂದ ಜಾರಿಯಾಗುವಂತೆ ಇದೀಗ ಹೊಸ ನಿಯಮವನ್ನು ಜಾರಿಗೊಳಿಸಿದೆ.
ಇನ್ನು ಮುಂದೆ ರೈಲು ಪ್ರಯಾಣಕ್ಕೆ ವೈಟಿಂಗ್ ಲಿಸ್ಟ್ ಟಿಕೆಟ್ ಪಡೆದು ಸ್ಲೀಪರ್ ಅಥವಾ ಎಸಿ ಕೋಚ್ ಪ್ರವೇಶಿಸುವ ಹಾಗಿಲ್ಲ. ಯಾಕೆಂದರೆ ಹೊಸ ನಿಯಮಗಳ ಪ್ರಕಾರ ವೈಟಿಂಗ್ ಲಿಸ್ಟ್ ಟಿಕೆಟ್‌ನೊಂದಿಗೆ ಸ್ಲೀಪರ್ ಅಥವಾ ಎಸಿ ಕೋಚ್‌ಗಳಲ್ಲಿ ಪ್ರಯಾಣಿಸುವುದನ್ನು ನಿರ್ಬಂಧಿಸಲಾಗಿದೆ. ದೃಢೀಕೃತ ಟಿಕೆಟ್‌ಗಳನ್ನು ಹೊಂದಿದ್ದರೆ ಮಾತ್ರ ಇದಕ್ಕೆ ಪ್ರವೇಶ ಪಡೆಯಬಹುದು. ದೃಢೀಕೃತ ಟಿಕೆಟ್ ಪಡೆದಿರುವ ಪ್ರಯಾಣಿಕರ ಅನುಕೂಲವನ್ನು ಖಚಿತಪಡಿಸಿಕೊಳ್ಳಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ವೈಟಿಂಗ್ ಲಿಸ್ಟ್ ಟಿಕೆಟ್ ಹೊಂದಿರುವ ಪ್ರಯಾಣಿಕರು ಸಾಮಾನ್ಯ ಕೋಚ್‌ಗಳಲ್ಲಿ ಮಾತ್ರ ಪ್ರಯಾಣಿಸಬಹುದು. ಮೇ 1ರಿಂದ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಟಿಕೆಟ್ ಪರೀಕ್ಷಕರು (ಟಿಟಿಇ) ವೈಟಿಂಗ್ ಲಿಸ್ಟ್ ಟಿಕೆಟ್‌ನೊಂದಿಗೆ ಸ್ಲೀಪರ್ ಅಥವಾ ಎಸಿ ಕೋಚ್‌ಗಳಲ್ಲಿ ಪ್ರಯಾಣಿಸುವ ಯಾವುದೇ ಪ್ರಯಾಣಿಕರನ್ನು ಗುರುತಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ವಾಯುವ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಕ್ಯಾಪ್ಟನ್ ಶಶಿ ಕಿರಣ್, ಈ ನಿರ್ಧಾರವನ್ನು ಕೇವಲ ದೃಢೀಕೃತ ಟಿಕೆಟ್‌ಗಳನ್ನು ಹೊಂದಿರುವ ಪ್ರಯಾಣಿಕರ ಅನುಕೂಲಕ್ಕಾಗಿ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಅನೇಕ ಸಂದರ್ಭಗಳಲ್ಲಿ ವೈಟಿಂಗ್ ಲಿಸ್ಟ್ ಟಿಕೆಟ್‌ಗಳನ್ನು ಹೊಂದಿರುವ ವ್ಯಕ್ತಿಗಳು ಸ್ಲೀಪರ್ ಮತ್ತು ಎಸಿ ಕೋಚ್‌ಗಳನ್ನು ಪ್ರವೇಶಿಸುತ್ತಾರೆ. ಇಲ್ಲಿ ಈಗಾಗಲೇ ಕಾಯ್ದಿರಿಸಿದ ಆಸನಗಳಲ್ಲಿ ಕುಳಿತುಕೊಳ್ಳುತ್ತಾರೆ ಅಥವಾ ಕೋಚ್‌ಗಳೊಳಗಿನ ಮಾರ್ಗಗಳನ್ನು ನಿರ್ಬಂಧಿಸುತ್ತಾರೆ. ಇದು ಹಲವು ಪ್ರಯಾಣಿಕರಿಗೆ ತೊಂದರೆ ಉಂಟು ಮಾಡಿರುವುದುರೈಲ್ವೆ ಇಲಾಖೆ ಗಮನಿಸಿದೆ. ಹೀಗಾಗಿ ಇನ್ನು ಮುಂದೆ ಈ ನಿಯಮಗಳನ್ನು ಉಲ್ಲಂಘಿಸುವುದರಿಂದ ದಂಡ ವಸೂಲಿ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಒಬ್ಬ ಪ್ರಯಾಣಿಕನು ವೈಟಿಂಗ್ ಲಿಸ್ಟ್ ಟಿಕೆಟ್‌ನೊಂದಿಗೆ ಸ್ಲೀಪರ್ ಕೋಚ್‌ನಲ್ಲಿ ಪ್ರಯಾಣಿಸುತ್ತಿರುವುದು ಕಂಡುಬಂದರೆ ಅವರಿಗೆ ಪ್ರಯಾಣದ ಪೂರ್ಣ ದರದ ಜೊತೆಗೆ 250 ರೂ. ದಂಡ ವಿಧಿಸಲಾಗುತ್ತದೆ. ಪ್ರಯಾಣಿಸಿದ ದೂರವನ್ನು ಆಧರಿಸಿ ಹೆಚ್ಚುವರಿ ಶುಲ್ಕಗಳು ಸಹ ವಸೂಲಿ ಮಾಡಲಾಗುತ್ತದೆ. ಅದೇ ರೀತಿ ಪ್ರಯಾಣಿಕನು ಥರ್ಡ್ ಎಸಿ ಅಥವಾ ಸೆಕೆಂಡ್ ಎಸಿ ಕೋಚ್‌ಗಳಲ್ಲಿ ವೈಟಿಂಗ್ ಲಿಸ್ಟ್ ಟಿಕೆಟ್‌ನೊಂದಿಗೆ ಪ್ರಯಾಣಿಸುತ್ತಿರುವುದು ಕಂಡುಬಂದರೆ ದಂಡ ಹೆಚ್ಚಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ಪ್ರಯಾಣ ಶುಲ್ಕದೊಂದಿಗೆ 440 ರೂ. ವರೆಗೆ ಹೆಚ್ಚುವರಿ ದಂಡವನ್ನು ವಿಧಿಸಲಾಗುತ್ತದೆ.
ಇದಲ್ಲದೆ ನಿಯಮ ಉಲ್ಲಂಘಿಸುವ ಪ್ರಯಾಣಿಕರನ್ನು ಸಾಮಾನ್ಯ ಕೋಚ್‌ಗೆ ವರ್ಗಾಯಿಸಲು ಅಥವಾ ಮುಂದಿನ ನಿಲ್ದಾಣದಲ್ಲಿ ಅವರನ್ನು ಕೆಳಗಿಳಿಸಲು ಟಿಟಿಇ ಅಧಿಕಾರವನ್ನು ಹೊಂದಿರುತ್ತಾರೆ. ಪ್ರಥಮ ದರ್ಜೆ ಕೋಚ್‌ನಲ್ಲಿ ಅಂತಹ ಉಲ್ಲಂಘನೆ ಸಂಭವಿಸಿದಲ್ಲಿ ದಂಡಗಳು ಇನ್ನಷ್ಟು ಹೆಚ್ಚಾಗುತ್ತದೆ ಎಂದು ರೈಲ್ವೆ ಇಲಾಖೆ ತನ್ನ ಆದೇಶದಲ್ಲಿ ಹೇಳಿದೆ.
ರೈಲು ಪ್ರಯಾಣದಲ್ಲಿ ಮಾತ್ರವಲ್ಲ ಇನ್ನು ಕೆಲವು ಹೊಸ ನಿಯಮಗಳು ಮೇ 1 ರಿಂದ ಜಾರಿಯಾಗಲಿದೆ. ಇದು ನಿಮ್ಮ ಜೇಬಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
ಎಟಿಎಂ ಬಳಕೆ
ರಿಸರ್ವ್ ಬ್ಯಾಂಕ್ ಈಗಾಗಲೇ ಎಟಿಎಂ ನಗದು ಪಡೆಯುವುದರ ಸಂಬಂಧ ಹೊಸ ನಿಯಮವನ್ನು ಘೋಷಿಸಿದ್ದು, ಇದು ಮೇ 1ರಿಂದ ಜಾರಿಯಾಗಲಿದೆ.ಇದರ ಪ್ರಕಾರ ಮೇ 1 ರಿಂದ ಎಟಿಎಂಗಳಲ್ಲಿ ನಗದು ಹಿಂಪಡೆಯುವಿಕೆ ಉಚಿತ ಮಿತಿಯನ್ನು ದಾಟಿದರೆ ಪ್ರತಿ ಎಟಿಎಂ ವಹಿವಾಟಿನ ಮೇಲೆ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಬಹುದು. ನಗದು ಹಿಂಪಡೆಯುವಿಕೆಯ ಶುಲ್ಕವು ಪ್ರತಿ ವಹಿವಾಟಿಗೆ 17 ರೂ. ನಿಂದ 19 ರೂ. ಮತ್ತು ಬ್ಯಾಲೆನ್ಸ್ ಚೆಕ್ ಶುಲ್ಕವು ಪ್ರತಿ ವಹಿವಾಟಿಗೆ 6 ರೂ. ನಿಂದ 7 ರೂ. ಗೆ ಹೆಚ್ಚಾಗಲಿದೆ.
ಗ್ಯಾಸ್ ಸಿಲಿಂಡರ್ ಬೆಲೆ
ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಪ್ರತಿ ತಿಂಗಳ ಮೊದಲ ದಿನದಂದು ಬದಲಾಗುತ್ತದೆ. ಈ ಬಾರಿಯೂ ಮೇ 1ರಿಂದ ಗ್ಯಾಸ್ ಸಿಲಿಂಡರ್‌ನ ಬೆಲೆ ಕಡಿಮೆ ಅಥವಾ ಹೆಚ್ಚಾಗುವ ಸಾಧ್ಯತೆ ಇದೆ. ಸಿಲಿಂಡರ್‌ಗಳ ಬೆಲೆ ಬದಲಾವಣೆಯು ಸಾಮಾನ್ಯ ಜನರ ಜೇಬಿನ ಮೇಲೆ ನೇರ ಪರಿಣಾಮ ಬೀರಲಿದೆ.
ಇದನ್ನೂ ಓದಿ: Gold ATM: ವಿಶ್ವದ ಮೊದಲ ಚಿನ್ನದ ಎಟಿಎಂ ಚೀನಾದಲ್ಲಿ ಸ್ಥಾಪನೆ; ಭಾರತಕ್ಕೂ ಬರಲಿ ಎಂದ ನೆಟ್ಟಿಗರು
ಎಫ್‌ಡಿ ದರ
ಮೇ 1ರಿಂದ ಎಫ್‌ಡಿ ಮತ್ತು ಉಳಿತಾಯ ಖಾತೆಯ ನಿಯಮಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳಾಗುವುದು. ಈ ಬದಲಾವಣೆಗಳು ಬಡ್ಡಿದರಗಳನ್ನು ಸಹ ಒಳಗೊಂಡಿರಬಹುದು. ಆರ್‌ಬಿಐ ಸೂಚನೆಗಳ ಪ್ರಕಾರ ಪ್ರಸ್ತುತ ಎಟಿಎಂ ಹಿಂಪಡೆಯುವ ಶುಲ್ಕಗಳಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ. ಆದರೆ ಎಫ್‌ಡಿ ಮತ್ತು ಉಳಿತಾಯ ಖಾತೆಯ ಬಡ್ಡಿದರಗಳು ಇನ್ನೂ ನಿಗದಿಪಡಿಸಿಲ್ಲ. ಆದರೆ ಇದರಲ್ಲಿ ಬದಲಾವಣೆಯಾಗುವ ನಿರೀಕ್ಷೆ ಇದೆ.
ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ವಿಲೀನ
ಮೇ 1ರಿಂದ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ (RRBs) ವಿಲೀನ ಯೋಜನೆಯನ್ನು ದೇಶದ 11 ರಾಜ್ಯಗಳಲ್ಲಿ "ಒಂದು ರಾಜ್ಯ, ಒಂದು ಆರ್ ಆರ್ ಬಿ " ಅಡಿಯಲ್ಲಿ ಜಾರಿಗೆ ತರಲಾಗುತ್ತದೆ. ಇದರ ಮುಖ್ಯ ಉದ್ದೇಶ ಬ್ಯಾಂಕ್ ಗಳ ದಕ್ಷತೆಯಲ್ಲಿ ಸುಧಾರಣೆ ಮತ್ತು ವೆಚ್ಚವನ್ನು ಕಡಿಮೆ ಮಾಡುವುದಾಗಿದೆ. 11 ರಾಜ್ಯಗಳಾದ ಆಂಧ್ರಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನದಲ್ಲಿ ಇದು ಪ್ರಾರಂಭವಾಗಲಿದೆ.