ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಕುಲ್ಗಮ್ ಜಿಲ್ಲೆಯ ಅಖಾಲ್ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಆಪರೇಷನ್ ಅಖಾಲ್ ಅಡಿಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರಗಾಮಿಗಳ (Terrorist Encounter) ನಡುವೆ ನಡೆಯುತ್ತಿರುವ ಗುಂಡಿನ ಚಕಮಕಿಯಲ್ಲಿ ಓರ್ವ ಭಯೋತ್ಪಾದಕನನ್ನು ಸೇನೆ ಹೊಡೆದುರುಳಿಸಿದೆ ಎಂದು ತಿಳಿದು ಬಂದಿದೆ. ಇಬ್ಬರು ಭಯೋತ್ಪಾದಕರನ್ನು ಬಂಧಿಸಲಾಗಿದೆ ಎಂದು ಸೇನೆಯ ಚಿನಾರ್ ಕಾರ್ಪ್ಸ್ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ದೃಢಪಡಿಸಿದೆ. ಭಯೋತ್ಪಾದಕರು ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ಒಂದು ಶಾಖೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್‌ಗೆ ಸೇರಿದವರು ಎಂದು ತಿಳಿದು ಬಂದಿದೆ. ಶ್ರೀನಗರ ಬಳಿಯ ದಚಿಗಮ್ ರಾಷ್ಟ್ರೀಯ ಉದ್ಯಾನವನದೊಳಗೆ ಭಯೋತ್ಪಾದಕರು ಅಡಗಿದ್ದರು. ಒಬ್ಬ ಭಯೋತ್ಪಾದಕ ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಭಯೋತ್ಪಾದಕರು ನಿಷೇಧಿತ ಲಷ್ಕರ್-ಎ-ತೈಬಾ (LeT) ಸಂಘಟನೆಯ ಒಂದು ಭಾಗವಾದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಗೆ ಸೇರಿದವರಾಗಿದ್ದು, ಇತ್ತೀಚಿನ ಪಹಲ್ಗಾಮ್ ದಾಳಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕುಲ್ಗಾಮ್‌ನ ಅಖಾಲ್ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದರು. ಅಲ್ಲಿಂದ ಸೇನೆ ಕಾರ್ಯಾಚರಣೆ ಪ್ರಾರಂಭಿಸಿತು. ಸದ್ಯ ಭಯೋತ್ಪಾದಕರಿರುವ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತಿವರೆದು ಕಾರ್ಯಾಚರಣೆ ಪ್ರಾರಂಭಿಸಿದರು. ಭಾರತೀಯ ಸೇನೆ, ಸಿಆರ್‌ಪಿಎಫ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.
ಈ ಸುದ್ದಿಯನ್ನೂ ಓದಿ: Terrorist Encounter: ಜಮ್ಮು ಕಾಶ್ಮೀರದ ಕುಲ್ಗಾಮ್‌ನಲ್ಲಿ ಗುಂಡಿನ ಚಕಮಕಿ; ಲಷ್ಕರ್ ಭಯೋತ್ಪಾದಕರನ್ನು ಸುತ್ತುವರಿದ ಸೇನೆ
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಜಮ್ಮು-ಕಾಶ್ಮೀರದಲ್ಲಿ ‘ಆಪರೇಷನ್ ಮಹಾದೇವ್’ ಅಡಿಯಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ತೀವ್ರಗೊಳಿಸಿವೆ. ಈ ವಾರದ ಆರಂಭದಲ್ಲಿ, ಶ್ರೀನಗರದ ದಾಚಿಗಾಮ್‌ನಲ್ಲಿ ದಾಳಿಯ ಮಾಸ್ಟರ್‌ಮೈಂಡ್ ಸುಲೇಮಾನ್ ಶಾ ಸೇರಿದಂತೆ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಯಿತು. ಮರುದಿನ, ‘ಆಪರೇಷನ್ ಶಿವ ಶಕ್ತಿ’ ಅಡಿಯಲ್ಲಿ ಪೂಂಚ್ ವಲಯದ ಗಡಿರೇಖೆಯಲ್ಲಿ ಒಳನುಸುಳಲು ಯತ್ನಿಸಿದ ಇನ್ನಿಬ್ಬರು ಭಯೋತ್ಪಾದಕರನ್ನು ನಿಷ್ಕ್ರಿಯಗೊಳಿಸಲಾಯಿತು. ಕಳೆದ ಕೆಲವು ತಿಂಗಳಿಂದ ನಡೆಯುತ್ತಿರುವ ಈ ಕಾರ್ಯಾಚರಣೆಯಲ್ಲಿ ಹಲವು ಭಯೋತ್ಪಾದಕರು ಮತ್ತು ಬೆಂಬಲಿಗರನ್ನು ಬಂಧಿಸಲಾಗಿದೆ.