ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mann Ki Baat: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯ ಜಗತ್ತಿನ ಗಮನ ಸೆಳೆದಿದೆ: ಮನ್‌ ಕಿ ಬಾತ್‌ನಲ್ಲಿ ಮೋದಿ

Narendra Modi: ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್'ನ 124ನೇ ಸಂಚಿಕೆಯಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಗಮನ ಸೆಳೆಯುತ್ತಿರುವ ಭಾರತದ ಸಾಮರ್ಥ್ಯಗಳನ್ನು ಶ್ಲಾಘಿಸಿದರು. ಜತೆಗೆ ಮಕ್ಕಳಲ್ಲಿ ಬಾಹ್ಯಾಕಾಶದ ಬಗ್ಗೆ ಕುತೂಹಲ ಮೂಡುದೆ ಎಂದರು.

ದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ (ಜುಲೈ 27) ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' (Mann Ki Baat)ನ 124ನೇ ಸಂಚಿಕೆಯಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಗಮನ ಸೆಳೆಯುತ್ತಿರುವ ಭಾರತದ ಸಾಮರ್ಥ್ಯಗಳನ್ನು ಶ್ಲಾಘಿಸಿದರು. ಅಲ್ಲದೆ ಇತ್ತೀಚೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಪ್ರಯಾಣ ಬೆಳೆಸಿದ ಐಎಎಫ್ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ (Shubhanshu Shukla) ಅವರನ್ನು ವಿಶೇಷವಾಗಿ ಉಲ್ಲೇಖಿಸಿದರು. ಚಂದ್ರಯಾನ 3ರ ಯಶಸ್ವಿ ಉಡಾವಣೆ ಮತ್ತು 12 ಮರಾಠಾ ಕೋಟೆಗಳನ್ನು ವಿಶ್ವ ಪರಂಪರೆಯ ತಾಣಗಳಾಗಿ ಗುರುತಿಸುವುದನ್ನು ಸಹ ಪ್ರಧಾನಿ ಮೋದಿ ಪ್ರಸ್ತಾವಿಸಿದರು.

"ಇತ್ತೀಚೆಗೆ ಶುಭಾಂಶು ಶುಕ್ಲಾ ಬಾಹ್ಯಾಕಾಶದಿಂದ ಹಿಂದಿರುಗಿದ ಬಳಿಕ ದೇಶದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು. ಅವರು ಭೂಮಿಗೆ ಸುರಕ್ಷಿತವಾಗಿ ಬಂದಿಳಿದ ತಕ್ಷಣ ಜನರು ಸಂತೋಷ ವ್ಯಕ್ತಪಡಿಸಿದರು. ಇಡೀ ದೇಶವು ಹೆಮ್ಮೆಯಿಂದ ಬೀಗಿತು. ಇದಾದ ನಂತರ ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶ ಅಧ್ಯಯನದ ಬಗ್ಗೆ ಆಸಕ್ತಿ ಹೆಚ್ಚಿದೆ. ಚಂದ್ರಯಾನ 3ರ ಬಳಿಕ, ಹಲವು ವಿದ್ಯಾರ್ಥಿಗಳು ಸ್ಪೇಸ್​ ಸೈಂಟಿಸ್ಟ್​ ಆಗುವ ಕನಸು ಹೊತ್ತಿದ್ದಾರೆʼʼ ಎಂದು ಪ್ರಧಾನಿ ಮೋದಿ ಹೇಳಿದರು.



"ನನಗೆ ಈಗಲೂ ನೆನಪಿದೆ 2023ರ ಆಗಸ್ಟ್‌ನಲ್ಲಿ ಚಂದ್ರಯಾನ-3 ಯಶಸ್ವಿಯಾದಾಗ ದೇಶದಲ್ಲಿ ಹೊಸ ವಾತಾವರಣವನ್ನು ಸೃಷ್ಟಿಯಾಯ್ತು. ಮಕ್ಕಳಲ್ಲಿ ವಿಜ್ಞಾನದ ಬಗ್ಗೆ, ಬಾಹ್ಯಾಕಾಶದ ಬಗ್ಗೆ ಹೊಸ ಕುತೂಹಲವೂ ಹುಟ್ಟಿಕೊಂಡಿತು. ನಾವು ಬಾಹ್ಯಾಕಾಶಕ್ಕೂ ಹೋಗುತ್ತೇವೆ, ನಾವು ಚಂದ್ರನ ಮೇಲೆ ಇಳಿಯುತ್ತೇವೆ, ನಾವು ಬಾಹ್ಯಾಕಾಶ ವಿಜ್ಞಾನಿಗಳಾಗುತ್ತೇವೆ ಎಂದು ಈಗ ಪುಟ್ಟ ಮಕ್ಕಳೂ ಹೇಳುತ್ತಾರೆ" ಎಂಬುದಾಗಿ ಪ್ರಧಾನಿ ಮೋದಿ ತಿಳಿಸಿದರು.



ಈ ಸುದ್ದಿಯನ್ನೂ ಓದಿ: Mann ki Baat: ಜಲ ಸಂರಕ್ಷಣೆ, ಸ್ಟಾರ್ಟ್‌ ಅಪ್‌, ಕ್ರೀಡೆ, ; ಮನ್‌ ಕಿ ಬಾತ್‌ನಲ್ಲಿ ಮೋದಿ ಹೇಳಿದ್ದೇನು?

ಮೋದಿ ಅವರ ಭಾಷಣದ ಹೈಲೈಟ್‌ ಇಲ್ಲಿದೆ:

  • ಅಭಿವೃದ್ಧಿ ಹೊಂದಿದ ಹಾದಿಯಲ್ಲಿರುವ ಭಾರತ ಸ್ವಾವಲಂಬನೆ ಸಾಧಿಸುತ್ತಿದೆ. ಇದು ಆತ್ಮನಿರ್ಭರ ಭಾರತದ ಬಲವಾದ ಅಡಿಪಾಯಕ್ಕೆ ಸಾಕ್ಷಿ.
  • 1905ರ ಆಗಸ್ಟ್ 7ರಂದು ಹೊಸ ಕ್ರಾಂತಿ ಪ್ರಾರಂಭವಾಯಿತು. ಈ ಸ್ವದೇಶಿ ಚಳುವಳಿಯು ಸ್ಥಳೀಯ ಉತ್ಪನ್ನಗಳಿಗೆ, ವಿಶೇಷವಾಗಿ ಕೈಮಗ್ಗಗಳಿಗೆ ಹೊಸ ಶಕ್ತಿಯನ್ನು ತುಂಬಿತು. ಈ ನೆನಪಿಗಾಗಿ ದೇಶವು ಪ್ರತಿ ವರ್ಷ ಆಗಸ್ಟ್ 7ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸುತ್ತದೆ. ಜವಳಿ ವಲಯವು ದೇಶದ ಶಕ್ತಿಯಾಗುತ್ತಿದೆ. ಮಹಾರಾಷ್ಟ್ರದ ಪೈಥಾನ್ ಗ್ರಾಮದ ಕವಿತಾ ಧಾವಳೆ ಯಾವುದೇ ಸ್ಥಳ ಮತ್ತು ಸೌಲಭ್ಯಗಳಿಲ್ಲದ ಸಣ್ಣ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ಅವರು ಸರ್ಕಾರದ ಸಹಾಯದಿಂದ ಸ್ವಯಂ ನೇಯ್ದ ಪೈಥಾನಿ ಸೀರೆಗಳನ್ನು ಮಾರಾಟ ಮಾಡುವ ಮೂಲಕ ಸ್ವಾಬಲಂಬಿ ಜೀವನ ಸಾಗಿಸುತ್ತಿದ್ದಾರೆ. ಒಡಿಶಾದ ಮಯೂರ್‌ಭಂಜ್‌ನಲ್ಲಿ ಬುಡಕಟ್ಟು ಮಹಿಳೆಯರು ಸಂತಾಲಿ ಸೀರೆಗಳಿಗೆ ಹೊಸ ಜೀವ ನೀಡಿದ್ದಾರೆ. ಬಿಹಾರದ ನಳಂದದ ನವೀನ್ ಕುಮಾರ್ ಅವರ ಸಾಧನೆಗಳು ಸಹ ಸ್ಫೂರ್ತಿದಾಯಕ.
  • ಭಾರತ ಒಲಿಂಪಿಕ್ಸ್ ಮತ್ತು ಒಲಿಂಪಿಯಾಡ್‌ಗಾಗಿ ಮುನ್ನಡೆಯುತ್ತಿದೆ. ಯುನೆಸ್ಕೋ ಮಹಾರಾಷ್ಟ್ರದಲ್ಲಿ 12 ಕೋಟೆಗಳನ್ನು ಗುರುತಿಸಿದೆ. ಇವು ಭವ್ಯ ಇತಿಹಾಸಕ್ಕೆ ಸಾಕ್ಷಿ. ನಾನು ಸ್ವಲ್ಪ ಸಮಯದ ಹಿಂದೆ ರಾಯಗಢ ಕೋಟೆಗೆ ಹೋಗಿದ್ದೆ. ಈ ಕೋಟೆಗಳು ನಮ್ಮ ಸ್ವಾಭಿಮಾನಕ್ಕೆ ಉತ್ತಮ ಉದಾಹರಣೆ. ದೇಶಾದ್ಯಂತ ಅನೇಕ ಕೋಟೆಗಳಿವೆ. ಜನರು ಈ ಕೋಟೆಗಳಿಗೆ ಭೇಟಿ ನೀಡಬೇಕು.
  • ದೇಶದಲ್ಲಿ 3,000ಕ್ಕೂ ಹೆಚ್ಚು ನವೋದ್ಯಮಗಳಿವೆ. 2047ರ ವೇಳೆಗೆ ವಿಕಸಿತ್‌ ಭಾರತದ ಕನಸು ಆತ್ಮ ನಿರ್ಭರಕ್ಕೆ ಸಂಬಂಧಿಸಿದೆ. ಜಾನಪದ ಗೀತೆಗಳು ನಮ್ಮ ದೇಶದ ಸಂಸ್ಕೃತಿಯನ್ನು ಪ್ರದರ್ಶಿಸುತ್ತವೆ.
  • ನಾವು ವರ್ತಮಾನ ಮತ್ತು ಭೂತಕಾಲದ ಲಿಪಿಗಳನ್ನು ತಿಳಿದುಕೊಳ್ಳಬೇಕು. ಅವುಗಳನ್ನು ಸಂರಕ್ಷಿಸಬೇಕು. ಈ ಕೆಲಸವನ್ನು ತಮ್ಮ ಜೀವನವನ್ನಾಗಿ ಮಾಡಿಕೊಂಡ ಅನೇಕರು ಇದ್ದಾರೆ. ತಮಿಳುನಾಡಿನ ಮಣಿ ಮಾರನ್ 'ಪಾಂಡು ಲಿಪಿ'ಯನ್ನು ಕಲಿಸುತ್ತಿದ್ದಾರೆ. ಈ ಬಗ್ಗೆ ಸಂಶೋಧನೆ ನಡೆಯುತ್ತಿದೆ.
  • ದೇಶದಲ್ಲಿ ಕ್ರೀಡೆಗಳನ್ನು ಉತ್ತೇಜಿಸಲಾಗುತ್ತಿದೆ. ಇದನ್ನು ಸರ್ಕಾರ ಸಾಕಷ್ಟು ಬೆಂಬಲ ನೀಡುತ್ತಿದೆ.



  • ತ್ಯಾಜ್ಯ ನಿರ್ವಹಣೆಯ ಕುರಿತು ಮಾತನಾಡಿದ ಪ್ರಧಾನಿ, ಉತ್ತರಾಖಂಡದ ಕೀರ್ತಿನಗರದ ಜನರು ಹೊಸ ಮಾದರಿಯನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿದರು. ಇದೇ ರೀತಿ ಮಂಗಳೂರಿನಲ್ಲಿ ತಂತ್ರಜ್ಞಾನದ ಸಹಾಯದಿಂದ ಸಾವಯವ ತ್ಯಾಜ್ಯ ನಿರ್ವಹಣೆಯನ್ನು ಮಾಡಲಾಗುತ್ತಿದೆ. ಅರುಣಾಚಲ ಪ್ರದೇಶದಲ್ಲಿ ರೋಯಿಂಗ್ ಎಂಬ ಸಣ್ಣ ನಗರವಿದೆ. ತ್ಯಾಜ್ಯ ನಿರ್ವಹಣೆ ದೊಡ್ಡ ಸವಾಲಾಗಿ ಪರಿಣಮಿಸಿದ್ದ ಕಾಲವಿತ್ತು. ಈಗ ಅಲ್ಲಿನ ಜನರು ಅದರ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಹೀಗೆ 'ಗ್ರೀನ್ ರೋಯಿಂಗ್ ಇನಿಶಿಯೇಟಿವ್' ಪ್ರಾರಂಭಿಸಲಾಯಿತು ಮತ್ತು ಮರುಬಳಕೆಯ ತ್ಯಾಜ್ಯದಿಂದ ಸಂಪೂರ್ಣ ಉದ್ಯಾನವನವನ್ನು ರಚಿಸಲಾಯಿತು. ಅದೇ ರೀತಿ ಕರಾಡ್ ಮತ್ತು ವಿಜಯವಾಡದಲ್ಲಿ ನೀರಿನ ನಿರ್ವಹಣೆಯ ಹೊಸ ಮಾದರಿಯನ್ನು ಪರಿಚಯಿಸಲಾಗಿದೆ. ಅಹಮದಾಬಾದ್‌ನ ನದಿ ದಂಡೆಯಲ್ಲಿನ ಸ್ವಚ್ಛತೆಯು ಎಲ್ಲರ ಗಮನ ಸೆಳೆದಿದೆ.