ಚೆನ್ನೈ: ತಮಿಳುನಾಡಿನಲ್ಲಿ ನಡೆಯಲಿರುವ ಚೋಳ ಚಕ್ರವರ್ತಿಯ ಜನ್ಮ ವಾರ್ಷಿಕೋತ್ಸವದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಭಾಗವಹಿಸಲಿದ್ದಾರೆ. ಗಂಗೈಕೊಂಡ ಚೋಳಪುರಂ ದೇವಸ್ಥಾನದ ನಿರ್ಮಾಣ ದಿನ ಹಾಗೂ ಮಹಾನ್ ರಾಜೇಂದ್ರ ಚೋಳನ್ ಅವರ ದಕ್ಷಿಣಪೂರ್ವ ಏಷ್ಯಾಕ್ಕೆ ನಡೆದ ಸಮುದ್ರಯಾನಕ್ಕೆ ಸಾವಿರ ವರ್ಷಗಳು ಪೂರೈಸಿದ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಂಭ್ರಮಾಚರಣೆಯ ಭಾಗವಾಗಿ, ಮಹಾನ್ ಚೋಳ ಸಾಮ್ರಾಟನಿಗೆ ಗೌರವ ಸೂಚಿಸುವ ಸ್ಮರಣಿಕಾ ನಾಣ್ಯವನ್ನು ಬಿಡುಗಡೆ ಮಾಡಲಾಗುತ್ತದೆ. ಇದು ಆದಿ ತಿರುವಾಥಿರೈ ಹಬ್ಬದ ಸಂದರ್ಭಕ್ಕೆ ಅನುಗುಣವಾಗಿರುತ್ತದೆ ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಇಂದು, ದಕ್ಷಿಣಪೂರ್ವ ಏಷ್ಯಾಕ್ಕೆ ಮಹಾನ್ ರಾಜೇಂದ್ರ ಚೋಳನ್ ನಡೆಸಿದ ಸಮುದ್ರಯಾನದ ಸಾವಿರ ವರ್ಷಗಳ ಸಂಭ್ರಮಾಚರಣೆ ಹಾಗೂ ಚೋಳ ವಾಸ್ತುಶಿಲ್ಪದ ಒಂದು ಉಜ್ವಲ ಉದಾಹರಣೆಯಾದ ಸಾಂಪ್ರದಾಯಿಕ ಗಂಗೈಕೊಂಡ ಚೋಳಪುರಂ ದೇವಾಲಯದ ನಿರ್ಮಾಣದ ಪ್ರಾರಂಭವನ್ನು ಗುರುತಿಸಲು ಬಹಳ ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ. ಆದಿ ತಿರುಪತಿರೈ ಹಬ್ಬವನ್ನು ಆಚರಿಸುವ ಜೊತೆಗೆ ರಾಜೇಂದ್ರ ಚೋಳ I ರ ಗೌರವಾರ್ಥ ನಾಣ್ಯವನ್ನು ಬಿಡುಗಡೆ ಮಾಡುತ್ತಿರುವುದು ನಮ್ಮ ಸೌಭಾಗ್ಯ ಎಂದು ಪ್ರಧಾನಿ ಎಕ್ಸ್‌ನಲ್ಲಿ ಬರೆದಿದ್ದಾರೆ.
ಈ ಸಂಭ್ರಮಾಚರಣೆಯು ಮಹಾನ್ ಚೋಳ ಸಾಮ್ರಾಟ ರಾಜೇಂದ್ರ ಚೋಳನ್ ಅವರ ಜಯಂತಿಯನ್ನು ಕೂಡ ಸ್ಮರಿಸುತ್ತದೆ. ಇಂದು ನಡೆಯುವ ಉತ್ಸವದ ಅದ್ಧೂರಿ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.
ರಾಜೇಂದ್ರ ಚೋಳ I ಯಾರು?
ರಾಜೇಂದ್ರ ಚೋಳ I (ಕ್ರಿ.ಶ. 1014–1044) ಭಾರತೀಯ ಇತಿಹಾಸದಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ದೂರದೃಷ್ಟಿಯುಳ್ಳ ರಾಜರಲ್ಲಿ ಒಬ್ಬರಾಗಿದ್ದರು. ಅವರ ನಾಯಕತ್ವದಲ್ಲಿ, ಚೋಳ ಸಾಮ್ರಾಜ್ಯವು ದಕ್ಷಿಣ ಮತ್ತು ಆಗ್ನೇಯ ಏಷ್ಯಾದಾದ್ಯಂತ ತನ್ನ ಪ್ರಭಾವವನ್ನು ವಿಸ್ತರಿಸಿತು. ತನ್ನ ವಿಜಯೋತ್ಸವದ ನಂತರ ಅವರು ಗಂಗೈಕೊಂಡ ಚೋಳಪುರವನ್ನು ಚೋಳ ಸಾಮ್ರಾಜ್ಯದ ರಾಜಧಾನಿಯಾಗಿ ಸ್ಥಾಪಿಸಿದರು. ಅಲ್ಲಿ ಅವರು ನಿರ್ಮಿಸಿದ ದೇವಾಲಯವು 250 ವರ್ಷಗಳಿಗೂ ಹೆಚ್ಚು ಕಾಲ ಶೈವ ಭಕ್ತಿ, ಸ್ಮಾರಕ ವಾಸ್ತುಶಿಲ್ಪ ಮತ್ತು ಆಡಳಿತ ಪರಾಕ್ರಮದ ಸಂಕೇತವಾಗಿ ಕಾರ್ಯನಿರ್ವಹಿಸಿತು.
ಇಂದು, ಈ ದೇವಾಲಯವು ಯುನೆಸ್ಕೋ ವಿಶ್ವಪರಂಪರೆಯ ತಾಣವಾಗಿದೆ. ಇದು ಚೋಳ ಶಿಲ್ಪಕಲೆಗಳು, ಚೋಳರ ಕಂಚಿನ ಶಿಲ್ಪಗಳು ಮತ್ತು ಪ್ರಾಚೀನ ಶಾಸನಗಳಿಗೆ ಹೆಸರುವಾಸಿಯಾಗಿದೆ. ಆದಿ ತಿರುಪತಿರೈ ಹಬ್ಬವು ತಮಿಳು ಶೈವ ಭಕ್ತಿ ಪರಂಪರೆಯ ಸಮೃದ್ಧಿಯನ್ನು ಆಚರಿಸುತ್ತದೆ. ಇದನ್ನು ಚೋಳರು ಶ್ರದ್ಧೆಯಿಂದ ಬೆಂಬಲಿಸಿದರು ಮತ್ತು ತಮಿಳು ಶೈವ ಧರ್ಮದ ಸಂತ-ಕವಿಗಳಾದ 63 ನಾಯನ್ಮಾರ್‌ಗಳು (ತಮಿಳು ಶೈವ ಭಕ್ತ ಕವಿ ಸಂತರು) ಕೃತಿಗಳ ಮೂಲಕ ಶಾಶ್ವತಗೊಳಿಸಿದರು. ಅಂದಹಾಗೆ, ರಾಜೇಂದ್ರ ಚೋಳನ ಜನ್ಮ ನಕ್ಷತ್ರವಾದ ತಿರುಪತಿರೈ (ಆರ್ದ್ರಾ) ಜುಲೈ 23 ರಂದು ಪ್ರಾರಂಭವಾಗುವುದರಿಂದ, ಈ ವರ್ಷದ ಹಬ್ಬವು ಹೆಚ್ಚು ಮಹತ್ವದ್ದಾಗಿದೆ.
ಈ ಸುದ್ದಿಯನ್ನೂ ಓದಿ: PM Narendra Modi: ಮೋದಿ ಹೊಸ ದಾಖಲೆ! ಪ್ರಧಾನಿಯಾಗಿ 4,078 ದಿನಗಳು ಪೂರ್ಣ- ಇಂದಿರಾ ಗಾಂಧಿಯ ರೆಕಾರ್ಡ್ ಬ್ರೇಕ್
ಇನ್ನು ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ, ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಮಾಹಿತಿ ಮತ್ತು ಪ್ರಸಾರ ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ ಡಾ. ಎಲ್. ಮುರುಗನ್ ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ.