ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬುಧವಾರ (ಅಕ್ಟೋಬರ್ 8) ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು (NMIA) ಉದ್ಘಾಟಿಸಲಿಸಲಿದ್ದಾರೆ. ಲಂಡನ್, ನ್ಯೂಯಾರ್ಕ್ ಮತ್ತು ಟೋಕಿಯೊ ಸೇರಿದಂತೆ ಬಹು ವಿಮಾನ ನಿಲ್ದಾಣಗಳನ್ನು ಹೊಂದಿರುವ ವಿಶ್ವದ ಕೆಲವೇ ನಗರಗಳ ಪಟ್ಟಿಗೆ ಮುಂಬೈ ಸೇರಲಿದೆ. ಅತ್ಯಾಧುನಿಕ ವಿಮಾನ ನಿಲ್ದಾಣವು ಡಿಸೆಂಬರ್‌ನಲ್ಲಿ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಈ ವಿಮಾನ ನಿಲ್ದಾಣವನ್ನು ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಮತ್ತು ಸಿಡ್ಕೊ (ಮಹಾರಾಷ್ಟ್ರ ನಗರ ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮ ಲಿಮಿಟೆಡ್) ನಡುವಿನ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿಯಲ್ಲಿ ನಿರ್ಮಿಸಲಾಗಿದೆ.
ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತದ ಮೊದಲ ಸಂಪೂರ್ಣ ಡಿಜಿಟಲ್ ವಿಮಾನ ನಿಲ್ದಾಣವಾಗಲಿದ್ದು, ವಾಹನ ಪಾರ್ಕಿಂಗ್ ಸ್ಲಾಟ್‌ಗಳನ್ನು ಮೊದಲೇ ಬುಕಿಂಗ್ ಮಾಡುವ ಸೌಲಭ್ಯಗಳು, ಆನ್‌ಲೈನ್ ಬ್ಯಾಗೇಜ್ ಡ್ರಾಪ್ ಮತ್ತು ವಲಸೆ ಸೇವೆಗಳನ್ನು ಒಳಗೊಂಡಿರುತ್ತದೆ. ಇದು ಸಂಪೂರ್ಣ ಸ್ವಯಂಚಾಲಿತ, AI-ಸಕ್ರಿಯಗೊಳಿಸಿದ ಟರ್ಮಿನಲ್‌ನಿಂದ ಬೆಂಬಲಿತವಾಗಿರುತ್ತದೆ. 1,160 ಹೆಕ್ಟೇರ್ ವಿಸ್ತೀರ್ಣದ ಈ ವಿಮಾನ ನಿಲ್ದಾಣವು ಆರಂಭಿಕ ಹಂತದಲ್ಲಿ ಒಂದು ರನ್‌ವೇ ಮತ್ತು ಟರ್ಮಿನಲ್ ಮೂಲಕ ವಾರ್ಷಿಕವಾಗಿ 20 ಮಿಲಿಯನ್ ಪ್ರಯಾಣಿಕರನ್ನು ಸಾಗಿಸುವಷ್ಟು ದೊಡ್ಡದಾಗಿದೆ.
ಪೂರ್ಣ ಸಾಮರ್ಥ್ಯದಲ್ಲಿ, ವಿಮಾನ ನಿಲ್ದಾಣವು ನಾಲ್ಕು ಟರ್ಮಿನಲ್‌ಗಳು ಮತ್ತು ಎರಡು ರನ್‌ವೇಗಳ ಮೂಲಕ ವಾರ್ಷಿಕವಾಗಿ 155 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. 19,650 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ವಿಮಾನಯಾನ, ಲಾಜಿಸ್ಟಿಕ್ಸ್, ಐಟಿ, ಆತಿಥ್ಯ ಮತ್ತು ರಿಯಲ್ ಎಸ್ಟೇಟ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಡಿಸೆಂಬರ್‌ನಲ್ಲಿ ವಾಣಿಜ್ಯ ಕಾರ್ಯಾಚರಣೆಗಳು ಸುಮಾರು ಶೇ. 40 ರಷ್ಟು ಅಂತರರಾಷ್ಟ್ರೀಯ ಸಂಚಾರದೊಂದಿಗೆ ಪ್ರಾರಂಭವಾಗಲಿದೆ.
ಈ ಸುದ್ದಿಯನ್ನೂ ಓದಿ: Narendra Modi Biopic: ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್ ಅನೌನ್ಸ್ ! ಮೋದಿ ಪಾತ್ರದಲ್ಲಿ ಮಲಯಾಳಂ ನಟ ಉಣ್ಣಿ ಮುಕುಂದನ್
ನವಿ ಮುಂಬೈ ವಿಮಾನ ನಿಲ್ದಾಣವು ಎಕ್ಸ್‌ಪ್ರೆಸ್‌ವೇಗಳು, ಮೆಟ್ರೋ ಮತ್ತು ಉಪನಗರ ರೈಲು ಜಾಲಗಳು ಮತ್ತು ಜಲಮಾರ್ಗ ಸೇವೆಗಳು ಸೇರಿದಂತೆ ಹಲವಾರು ಸಾರಿಗೆ ವ್ಯವಸ್ಥೆಗಳಿಗೆ ಸಂಪರ್ಕ ಹೊಂದಿದ ಭಾರತದ ಮೊದಲ ಪ್ರಮುಖ ವಾಯುಯಾನ ಕೇಂದ್ರವಾಗಲಿದೆ.