ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM SVANidhi Scheme: ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆ ಪ್ರಯೋಜನ ಯಾರು ಪಡೆಯಬಹುದು? ಅರ್ಜಿ ಸಲ್ಲಿಸುವುದು ಹೇಗೆ?

ಬೀದಿ ವ್ಯಾಪಾರಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಗೆ ಆನ್‌ಲೈನ್‌ ಮೂಲಕವೂ ಈಗ ಅರ್ಜಿ ಸಲ್ಲಿಸಬಹುದಾಗಿದೆ. ಇದರ ಅಡಿಯಲ್ಲಿ ಸಾಲ ನೀಡುವ ಅವಧಿಯನ್ನು 2030 ರವರೆಗೆ ವಿಸ್ತರಿಸಲಾಗಿದ್ದು, ಅರ್ಹತೆ, ಪ್ರಯೋಜನಗಳು ಮತ್ತು ಹೊಸ ನಿಯಮಗಳೇನಿದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

ಬೆಂಗಳೂರು: ಬೀದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ (PM SVANidhi) ಯೋಜನೆಯಡಿಯಲ್ಲಿ ಸಾಲ ನೀಡುವ ಅವಧಿಯನ್ನು 2030ರ ಮಾರ್ಚ್ 31ರವರೆಗೆ ವಿಸ್ತರಿಸಲಾಗಿದ್ದು, ಇದರ ಪ್ರಯೋಜನ ಪಡೆಯಲು pmsvanidhi.mohua.gov.inನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಬೀದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡಲು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) 2020ರ ಜೂನ್ 1ರಂದು ಪಿಎಂ ಸ್ವನಿಧಿ ಯೋಜನೆಯನ್ನು ಪ್ರಾರಂಭಿಸಿತು. ಇದು ಮೈಕ್ರೋ-ಕ್ರೆಡಿಟ್ ಯೋಜನೆಯಾಗಿದ್ದು, ಇದರಲ್ಲಿ ಒಂದು ವರ್ಷದ ಅವಧಿಗೆ 10,000 ರೂ. ವರೆಗೆ ಯಾವುದೇ ದಾಖಲೆ ಒದಗಿಸದೆ ಸಾಲ ಪಡೆಯಬಹುದಾಗಿದೆ.

ಬೀದಿ ವ್ಯಾಪಾರಿಗಳಲ್ಲಿ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವ ಗುರಿ ಹೊಂದಿರುವ ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯಲ್ಲಿ ಫಲಾನುಭವಿಗಳು 20,000 ರೂ. ನಿಂದ 50,000 ರೂ. ವರೆಗೆ ಶೇ. 7ರಷ್ಟು ಬಡ್ಡಿ ಸಬ್ಸಿಡಿಯೊಂದಿಗೆ ಸಾಲ ಪಡೆಯಬಹುದಾಗಿದೆ.

ಅರ್ಹತೆ ಏನು?

ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ಅರ್ಹತೆ ನಿಯಮಗಳಿವೆ. ಅದನ್ನು ಪೂರೈಸಿದವರು ಮಾತ್ರ ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ. ಬೀದಿ ವ್ಯಾಪಾರಿಗಳು ನಗರ ಸ್ಥಳೀಯ ಸಂಸ್ಥೆಗಳು (ULBs) ನೀಡಿದ ಮಾರಾಟ ಪ್ರಮಾಣಪತ್ರ ಅಥವಾ ಗುರುತಿನ ಚೀಟಿಯನ್ನು ಹೊಂದಿರಬೇಕು. ನಗರ ಸ್ಥಳೀಯ ಸಂಸ್ಥೆಗಳು ನಡೆಸಿದ ಸಮೀಕ್ಷೆಯಲ್ಲಿ ಗುರುತಿಸಲಾಗಿರುವ ಮಾರಾಟಗಾರರು ಮಾರಾಟ ಪ್ರಮಾಣಪತ್ರ ಅಥವಾ ಗುರುತಿನ ಚೀಟಿ ಪಡೆಯದೇ ಇರುವವರು, ಸಮೀಕ್ಷೆಯಿಂದ ಹೊರಗುಳಿದ ಬೀದಿ ವ್ಯಾಪಾರಿಗಳು, ಸಮೀಕ್ಷೆ ಪೂರ್ಣಗೊಂಡ ಅನಂತರ ಮಾರಾಟವನ್ನು ಪ್ರಾರಂಭಿಸಲು ಶಿಫಾರಸು ಪತ್ರ ಪಡೆದಿರುವವರು ಅರ್ಜಿ ಸಲ್ಲಿಸಬಹುದಾಗಿದೆ.

ಏನು ದಾಖಲೆ ಬೇಕು?

ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ನಗರ ಸ್ಥಳೀಯ ಸಂಸ್ಥೆಗಳು (ULBs) ನೀಡಿದ ಮಾರಾಟ ಪ್ರಮಾಣಪತ್ರ, ಗುರುತಿನ ಚೀಟಿ, ಶಿಫಾರಸು ಪತ್ರದೊಂದಿಗೆ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ, ನರೇಗಾ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್‌ನ ಪ್ರತಿ, ಸದಸ್ಯತ್ವ ಕಾರ್ಡ್‌ನ ಪ್ರತಿ ಅಥವಾ ಇತರೆ ಪುರಾವೆ, ಮಾರಾಟಗಾರರಾಗಿ ಹಕ್ಕನ್ನು ದೃಢೀಕರಿಸಲು ಯುಎಲ್‌ಬಿಗೆ ನೀಡಿರುವ ಪತ್ರ, ಎರಡನೇ ಸಾಲವನ್ನು ಬಯಸುವ ಬೀದಿ ವ್ಯಾಪಾರಿಗಳು ಹಿಂದಿನ ಸಾಲ ಮುಕ್ತಾಯ ದಾಖಲೆಯನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿದಾರರು ಪಿಎಂ ಸ್ವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲುಅಧಿಕೃತ ವೆಬ್‌ಸೈಟ್ pmsvanidhi.mohua.gov.in ನಲ್ಲಿ ಲಾಗಿನ್ ಆಗಬೇಕು. ಬಳಿಕ ಅರ್ಜಿದಾರರನ್ನು ಆಯ್ಕೆ ಮಾಡಿ. ಲಾಗಿನ್ ಪೋರ್ಟಲ್‌ ನಲ್ಲಿ ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾವನ್ನು ನಮೂದಿಸಿ ಮತ್ತು ಒಟಿಪಿ ಹಾಕಿ. ಲಾಗಿನ್ ಮಾಡಿದ ಬಳಿಕ ಮಾರಾಟಗಾರರ ವರ್ಗವನ್ನು ಆಯ್ಕೆ ಮಾಡಿ ಸಮೀಕ್ಷೆ ಉಲ್ಲೇಖ ಸಂಖ್ಯೆ (SRN) ಅನ್ನು ಹಾಕಬೇಕು.

ಇದನ್ನೂ ಓದಿ: FASTag Update: ನವೆಂಬರ್‌ 15ರಿಂದ ಫಾಸ್ಟ್‌ಟ್ಯಾಗ್‌ ನಿಯಮದಲ್ಲಿ ಮಹತ್ತರ ಬದಲಾವಣೆ; ಹೊಸ ರೂಲ್ಸ್ ಏನು ಗೊತ್ತಾ?

ಹೊಸ ನಿಯಮಗಳಲ್ಲಿ ಏನಿದೆ?

ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ (PM SWANidhi) ಯೋಜನೆಯ ಸಾಲ ಅವಧಿಯನ್ನು 2030ರ ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ. ಈ ಯೋಜನೆಯ ಒಟ್ಟು ವೆಚ್ಚ 7,332 ಕೋಟಿ ರೂ. ಗಳಾಗಿವೆ. 50 ಲಕ್ಷ ಹೊಸ ಫಲಾನುಭವಿಗಳನ್ನು ಒಳಗೊಂಡಂತೆ 1.15 ಕೋಟಿ ಜನರಿಗೆ ಇದರ ಪ್ರಯೋಜನ ನೀಡುವ ಗುರಿಯನ್ನು ಹೊಂದಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author