ಮುಂಬೈ: ಟ್ರಕ್ ಚಾಲಕನ ಅಪಹರಣ (Kidnapping Case) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಐಎಎಸ್ ಪ್ರೊಬೆಷನರ್ ಪೂಜಾ ಖೇಡ್ಕರ್ (Former IAS probationer Puja Khedkar) ಅವರ ಕುಟುಂಬದ ಅಂಗರಕ್ಷಕನನ್ನು ಶುಕ್ರವಾರ ರಾತ್ರಿ ಮಹಾರಾಷ್ಟ್ರದ ಧುಲೆಯಲ್ಲಿ (Maharashtras Dhule) ಬಂಧಿಸಲಾಗಿದೆ. ನವಿ ಮುಂಬೈನಲ್ಲಿ(Navi Mumbai) ನಡೆದ ರಸ್ತೆ ಗಲಭೆಯ ಬಳಿಕ ಟ್ರಕ್ ಚಾಲಕನ ಅಪಹರಣ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಖೇಡ್ಕರ್ ಕುಟುಂಬದ ಅಂಗರಕ್ಷಕ ಮತ್ತು ಚಾಲಕನಾಗಿರುವ ಪ್ರಫುಲ್ ಸಲುಂಖೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಪ್ರಫುಲ್ ಸಲುಂಖೆಯನ್ನು ಶುಕ್ರವಾರ ರಾತ್ರಿ ಮಹಾರಾಷ್ಟ್ರದ ಧುಲೆಯಲ್ಲಿ ಬಂಧಿಸಲಾಗಿದ್ದು, ನವಿ ಮುಂಬೈ ಬೇಲಾಪುರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಖೇಡ್ಕರ್ ಅವರ ಪೋಷಕರಾದ ದಿಲೀಪ್ ಮತ್ತು ಮನೋರಮಾ ನಾಪತ್ತೆಯಾಗಿದ್ದು, ಅವರು ದೇಶದಿಂದ ಪಲಾಯನ ಮಾಡಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಪ್ರಹ್ಲಾದ್ ಕುಮಾರ್ (22) ಚಲಾಯಿಸುತ್ತಿದ್ದ ಕಾಂಕ್ರೀಟ್ ಮಿಕ್ಸರ್ ಟ್ರಕ್ ಮುಲುಂಡ್- ಐರೋಲಿ ರಸ್ತೆಯಲ್ಲಿ ಕಾರಿಗೆ ಡಿಕ್ಕಿಯಾಗಿತ್ತು. ಈ ವೇಳೆ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಟ್ರಕ್ ಚಾಲಕನೊಂದಿಗೆ ವಾಗ್ವಾದ ನಡೆಸಿದ್ದು, ಕಾರಿಗೆ ಉಂಟಾದ ಹಾನಿಗೆ ಪರಿಹಾರ ಪಡೆಯಲು ಖೇಡ್ಕರ್ ಅವರ ತಂದೆ ಮತ್ತು ಅವರ ಅಂಗರಕ್ಷಕ ಟ್ರಕ್ ಚಾಲಕನನ್ನು ಕಾರಿನಲ್ಲಿ ತುಂಬಿಸಿ ತಮ್ಮ ಬಂಗಲೆಗೆ ಕರೆದುಕೊಂಡು ಹೋಗಿದ್ದಾರೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ.
ಪೊಲೀಸರು ಟ್ರಕ್ ಚಾಲಕನನ್ನು ಹುಡುಕಿಕೊಂಡು ಖೇಡ್ಕರ್ ಬಂಗಲೆಗೆ ಬಂದಾಗ ಖೇಡ್ಕರ್ ಅವರ ತಾಯಿ ಅವರನ್ನು ಬಂಗಲೆಯ ಆವರಣಕ್ಕೆ ಪ್ರವೇಶಿಸದಂತೆ ತಡೆದರು. ಅಪಹರಣ ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರು ಆರೋಪಿಗಳನ್ನು ಮಧ್ಯಾಹ್ನ 3 ಗಂಟೆಯೊಳಗೆ ಪುಣೆಯ ಚತುಶ್ರಿಂಗಿ ಪೊಲೀಸ್ ಠಾಣೆಗೆ ಕರೆತರುವುದಾಗಿ ಪೊಲೀಸರಿಗೆ ಭರವಸೆ ನೀಡಿದ್ದು, ಬಳಿಕ ಅವರು ಪರಾರಿಯಾಗಿದ್ದಾರೆ. ಬಳಿಕ ಟ್ರಕ್ ಚಾಲಕನನ್ನು ರಕ್ಷಿಸಲಾಗಿದೆ.
ಇದನ್ನೂ ಓದಿ: Viral Video: ಫುಟ್‌ಪಾತ್‌ನಲ್ಲಿ ಬೈಕ್ ಚಲಾಯಿಸಿ ಹುಚ್ಚಾಟ! ಜನ ಬದುಕುಳಿದಿದ್ದೇ ಅದೃಷ್ಟ- ವಿಡಿಯೊ ನೋಡಿ
ಖೇಡ್ಕರ್ ಕುಟುಂಬವು ಅನೇಕ ವಿವಾದಗಳಲ್ಲಿ ಸಿಲುಕಿಕೊಂಡಿದ್ದು 2024ರಲ್ಲಿ ತರಬೇತಿ ಐಎಎಸ್ ಅಧಿಕಾರಿಯಾಗಿದ್ದ ಖೇಡ್ಕರ್ ತಮ್ಮ ಯುಪಿಎಸ್‌ಸಿ ಉಮೇದುವಾರಿಕೆಯಲ್ಲಿ ಅಧಿಕಾರ ದುರುಪಯೋಗ ಮತ್ತು ಸುಳ್ಳು ಹೇಳಿಕೆಗಳ ಆರೋಪಗಳ ಬಳಿಕ ತನಿಖೆಗಳನ್ನು ಎದುರಿಸಿದ್ದರು. ಖೇಡ್ಕರ್ ಅವರ ತಾಯಿಯನ್ನು ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿತ್ತು.