ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RailOne App: ಹೊಸ ಆ್ಯಪ್ ಪರಿಚಯಿಸಿದ ರೈಲ್ವೆ; ಮೊಬೈಲ್‌ನಲ್ಲೇ ಸಿಗಲಿದೆ ಸಂಪೂರ್ಣ ಸೇವೆ

Indian Railways: ರೈಲ್‌ಒನ್ ಹೆಸರಿನ ಆ್ಯಪ್ ಅನ್ನು ರೈಲ್ವೆ ಮಂಗಳವಾರ ಬಿಡುಗಡೆಗೊಳಿಸಿದೆ. ಈ ಆ್ಯಪ್‌ ಮೂಲಕ ಟಿಕೆಟ್ ಬುಕಿಂಗ್, ರೈಲು ಮತ್ತು ಪಿಎನ್‌ಆರ್ ವಿಚಾರಣೆ ಮತ್ತು ಊಟ ಬುಕಿಂಗ್‌ನಂತಹ ಎಲ್ಲ ಸೇವೆಗಳನ್ನು ಸುಲಭವಾಗಿ ಪಡೆಯಬಹುದು. ಬೇರೆ ಬೇರೆ ಅಗತ್ಯಕ್ಕೆ ಪ್ರತ್ಯೇಕ ಅಪ್ಲಿಕೇಷನ್‌ ಹೊಂದುವ ಕಿರಿಕಿರಿಯನ್ನು ಇದು ತಪ್ಪಿಸಲಿದೆ.

ಹೊಸದಿಲ್ಲಿ: ರೈಲ್ವೆ ಪ್ರಯಾಣಿಕರಿಗೆ ಅಗತ್ಯವಾದ ಎಲ್ಲ ಸೇವೆಗಳು ಇನ್ನು ಬೆರಳಂಚಿನಲ್ಲಿ ಲಭ್ಯ. ಹೌದು, ಇಂತಹದ್ದೊಂದು ಸೂಪರ್ ಅಪ್ಲಿಕೇಷನ್‌ ಒಂದನ್ನು ಭಾರತೀಯ ರೈಲ್ವೆ ಇಲಾಖೆ (Indian Railways) ಮಂಗಳವಾರ (ಜು. 1) ಬಿಡುಗಡೆ ಮಾಡಿದೆ. ರೈಲ್‌ಒನ್ (RailOne App) ಹೆಸರಿನ ಈ ಆ್ಯಪ್ ಅನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಬಿಡುಗಡೆಗೊಳಿಸಿದ್ದಾರೆ. ಆ್ಯಪ್‌ ಮೂಲಕ ಟಿಕೆಟ್ ಬುಕಿಂಗ್, ರೈಲು ಮತ್ತು ಪಿಎನ್‌ಆರ್ ವಿಚಾರಣೆ ಮತ್ತು ಊಟ ಬುಕಿಂಗ್‌ನಂತಹ ಎಲ್ಲ ಸೇವೆಗಳನ್ನು ಸುಲಭವಾಗಿ ಪಡೆಯಬಹುದು. ಬೇರೆ ಬೇರೆ ಅಗತ್ಯಕ್ಕೆ ಪ್ರತ್ಯೇಕ ಅಪ್ಲಿಕೇಷನ್‌ ಹೊಂದುವ ಕಿರಿಕಿರಿಯನ್ನು ಇದು ತಪ್ಪಿಸುತ್ತದೆ.

ರೈಲ್ವೆಯನ್ನು ಮತ್ತಷ್ಟು ಪ್ರಯಾಣಿಕಸ್ನೇಹಿಯನ್ನಾಗಿಸುವ ನಿಟ್ಟಿನಲ್ಲಿ ಈ ಆ್ಯಪ್ ಪರಿಚಯಿಸಲಾಗಿದೆ. ಸೆಂಟರ್ ಫಾರ್ ರೈಲ್ವೆ ಇನ್ಫಾರ್ಮೇಶನ್ ಸಿಸ್ಟಮ್ಸ್​​ನ (CRIS) 40ನೇ ಸಂಸ್ಥಾಪನಾ ದಿನವಾದ ಮಂಗಳವಾರ ಸಚಿವ ಅಶ್ವಿನಿ ವೈಷ್ಣವ್ ರೈಲ್ ಒನ್ ಆ್ಯಪ್ ಲೋಕಾರ್ಪಣೆಗೊಳಿಸಿದರು.

"ಪ್ರಯಾಣಿಕರ ಸೌಲಭ್ಯಗಳನ್ನು ಸುಧಾರಿಸಲು ರೈಲ್ವೆ ನಿರಂತರವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಹೊಸ ಪೀಳಿಗೆಯ ರೈಲುಗಳನ್ನು ಪರಿಚಯಿಸುವುದು, ನಿಲ್ದಾಣಗಳನ್ನು ಪುನರಾಭಿವೃದ್ಧಿಗೊಳಿಸುವುದು, ಹಳೆಯ ಬೋಗಿಗಳನ್ನು ನವೀಕರಿಸುವುದು ಮತ್ತಿತರ ಕ್ರಮಗಳ ಮೂಲಕ ಪ್ರಯಾಣಿಕಿಗೆ ಉತ್ತಮ ಸೇವೆ ನೀಡಲಾಗುತ್ತಿದೆ" ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ರೈಲ್​ಒನ್ ಆ್ಯಪ್ ಆಂಡ್ರಾಯ್ಡ್ ಮತ್ತು ಆ್ಯಪಲ್‌ನಲ್ಲೂ ಲಭ್ಯ.



ಈ ಸುದ್ದಿಯನ್ನೂ ಓದಿ: Indian Railways: ರೈಲ್ವೆ ಪ್ರಯಾಣಿಕರಿಗೆ ಗುಡ್‌ನ್ಯೂಸ್; 8 ಗಂಟೆ ಮೊದಲೇ ಕನ್ಫರ್ಮ್ ಆಗಲಿದೆ ರಿಸರ್ವೇಶನ್ ಸೀಟ್

ರೈಲ್​ಒನ್ ಒದಗಿಸುವ ಸೇವೆಗಳು

ರೈಲ್‌ಒನ್ ಬಳಕೆದಾರ ಸ್ನೇಹಿ ಇಂಟರ್ಫೇಸ್ ಹೊಂದಿರುವ ಆಲ್-ಇನ್-ಒನ್ ಅಪ್ಲಿಕೇಶನ್. ಇದು ರಿಸರ್ವ್ಡ್ ಮತ್ತು ಅನ್​ರಿಸರ್ವ್ಡ್ ಟಿಕೆಟ್, ಪ್ಲಾಟ್‌ಫಾರ್ಮ್ ಟಿಕೆಟ್‌ ಬುಕಿಂಗ್‌, ಲೈವ್ ರೈಲು ಟ್ರ್ಯಾಕಿಂಗ್, ಕುಂದುಕೊರತೆ ಪರಿಹಾರ, ಇ-ಕ್ಯಾಟರಿಂಗ್‌, ಪೋರ್ಟರ್ ಬುಕಿಂಗ್ ಮತ್ತು ಲಾಸ್ಟ್‌ ಮೈಲಿ ಟ್ಯಾಕ್ಸಿಯಂತಹ ಎಲ್ಲ ಪ್ರಯಾಣಿಕ ಸೇವೆಗಳನ್ನು ನೀಡಲಿದೆ.

ʼʼಈ ಆ್ಯಪ್ ಮೂಲಕ ಪ್ರಯಾಣಿಕರು ಕಾಯ್ದಿರಿಸಿದ, ಕಾಯ್ದಿರಿಸದ ಟಿಕೆಟ್, ಪ್ಲಾಟ್‌ಫಾರ್ಮ್ ಟಿಕೆಟ್‌ ಬುಕಿಂಗ್, ರೈಲು ಮತ್ತು ಪಿಎನ್‌ಆರ್ ವಿಚಾರಣೆ, ಪ್ರಯಾಣ ಯೋಜನೆ, ರೈಲ್ವೆಯ ಎಲ್ಲ ಸೇವೆ, ರೈಲಿನಲ್ಲಿ ಊಟ ಬುಕಿಂಗ್ ಕೂಡ ಪಡೆಯಬಹುದುʼʼ ಎಂದು ಅದಿಕಾರಿಗಳು ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಐಆರ್​​ಸಿಟಿಸಿ, ರೈಲ್​ಕನೆಕ್ಟ್, ಯುಟಿ ಸನ್ ಮೊಬೈಲ್, ರೈಲ್ ಮದದ್ ಇತ್ಯಾದಿ ವಿವಿಧ ಪೋರ್ಟಲ್​​ಗಳು ನೀಡುವ ಎಲ್ಲ ಸೇವೆಗಳನ್ನು ರೈಲ್‌ಒನ್ ಆ್ಯಪ್​ವೊಂದರಲ್ಲೇ ಪಡೆಯಬಹುದು.

ರೈಲ್‌ಒನ್ ಆ್ಯಪ್ ಡೌನ್‌ಲೋಡ್‌ ಮಾಡಲು ಆಂಡ್ರಾಯ್ಡ್ ಬಳಕೆದಾರರು ಇಲ್ಲಿ ಕ್ಲಿಕ್‌ ಮಾಡಿ (https://play.google.com/store/apps/details?)

ರೈಲ್‌ಒನ್ ಆ್ಯಪ್ ಡೌನ್‌ಲೋಡದದ ಮಾಡಲು iOs ಬಳಕೆದಾರರು ಇಲ್ಲಿ ಕ್ಲಿಕ್‌ ಮಾಡಿ (https://apps.apple.com/in/app/railone/id6473384334)

"ರೈಲ್‌ಒನ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ, ರೈಲ್‌ಕನೆಕ್ಟ್ ಅಥವಾ ಯುಟಿ ಸನ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಅಸ್ತಿತ್ವದಲ್ಲಿರುವ ಬಳಕೆದಾರರ ಐಡಿ ಬಳಸಿ ಲಾಗಿನ್ ಆಗಬಹುದು. ಇದು ಬಳಕೆದಾರರು ವಿಭಿನ್ನ ಸೇವೆಗಳಿಗೆ ಪ್ರತ್ಯೇಕ ಅಪ್ಲಿಕೇಶನ್‌ಗಳನ್ನು ಹೊಂದುವ ಅಗತ್ಯವನ್ನು ನಿವಾರಿಸುತ್ತದೆ" ಎಂದು ರೈಲ್ವೆ ಹೇಳಿದೆ. ಹೊಸ ಬಳಕೆದಾರರಿಗೆ ಕನಿಷ್ಠ ಮಾಹಿತಿಯನ್ನು ಒದಗಿಸುವ ಮೂಲಕ ನೋಂದಾಯಿಸಿಕೊಳ್ಳಲು ಅವಕಾಶವಿದ್ದು, ಇದು ಪ್ರಕ್ರಿಯೆಯನ್ನು ಸುಲಭ ಮತ್ತು ವೇಗಗೊಳಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.