ನವದೆಹಲಿ: ಭಾರತವನ್ನು ಐಷಾರಾಮಿ ಕಾರಿನೊಂದಿಗೆ ಮತ್ತು ತನ್ನ ಸ್ವಂತ ದೇಶವನ್ನು ಡಂಪ್ ಟ್ರಕ್‌ನೊಂದಿಗೆ ಹೋಲಿಸುವ ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ (Asim Munir) ಅವರ ವಿಲಕ್ಷಣ ಪ್ರಯತ್ನವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಶುಕ್ರವಾರ ಅಪಹಾಸ್ಯ ಮಾಡಿದ್ದಾರೆ. ಈ ಹೇಳಿಕೆಯು ಪಾಕಿಸ್ತಾನದ ವೈಫಲ್ಯದ ತಪ್ಪೊಪ್ಪಿಗೆಯಾಗಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಆಪರೇಷನ್ ಸಿಂದೂರದ ಬಳಿಕ ಭಾರತ ಶಕ್ತಿ ಏನೆಂದು ಪಾಕಿಸ್ತಾನ ನೋಡಿದೆ. ಪಾಕ್‌ನ ಯಾವುದೇ ಬೆದರಿಕೆಗಳಿಗೆ ನಾವು ಬಗ್ಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಎರಡು ದೇಶಗಳು ಒಂದೇ ಸಮಯದಲ್ಲಿ ಸ್ವಾತಂತ್ರ್ಯ ಗಳಿಸಿದರೆ, ಮತ್ತು ಒಂದು ದೇಶವು ಕಠಿಣ ಪರಿಶ್ರಮ, ಉತ್ತಮ ನೀತಿಗಳು ಮತ್ತು ದೂರದೃಷ್ಟಿಯ ಮೂಲಕ ಫೆರಾರಿಯಂತಹ ಆರ್ಥಿಕತೆಯನ್ನು ನಿರ್ಮಿಸಿದರೆ, ಇನ್ನೊಂದು ದೇಶವು ಇನ್ನೂ ಡಂಪರ್ ಸ್ಥಿತಿಯಲ್ಲಿದ್ದರೆ, ಅದು ಅವರ ಸ್ವಂತ ವೈಫಲ್ಯ ಎಂದು ತಿಳಿದು ಬರುತ್ತದೆ. ಅಸಿಮ್ ಮುನೀರ್ ಅವರ ಈ ಹೇಳಿಕೆಯನ್ನು ನಾನು ತಪ್ಪೊಪ್ಪಿಗೆಯಾಗಿಯೂ ನೋಡುತ್ತೇನೆ" ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಭಾರತದ ಸಮೃದ್ಧಿಯ ಜೊತೆಗೆ, ನಮ್ಮ ರಕ್ಷಣಾ ಸಾಮರ್ಥ್ಯ ಮತ್ತು ರಾಷ್ಟ್ರೀಯ ಗೌರವಕ್ಕಾಗಿ ನಮ್ಮ ಹೋರಾಟದ ಮನೋಭಾವವು ಸಮಾನವಾಗಿ ಬಲವಾಗಿರುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಆಪರೇಷನ್ ಸಿಂದೂರ್ ಈಗಾಗಲೇ ನಮ್ಮ ದೃಢಸಂಕಲ್ಪವನ್ನು ತೋರಿಸಿದೆ. ಭಾರತದ ಶಕ್ತಿಯ ಬಗ್ಗೆ ಯಾವುದೇ ಭ್ರಮೆ ಪಾಕಿಸ್ತಾನದ ಮನಸ್ಸಿನಲ್ಲಿ ಬೇರೂರಲು ನಾವು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Operation Sindoor: ಆಪರೇಷನ್ ಸಿಂದೂರ್‌ನಲ್ಲಿ ಪಾಕಿಸ್ತಾನದ 150 ಸೈನಿಕರು ಹತ; ದಾಖಲೆ ಸಮೇತ ವರದಿ ಮಾಡಿದ ಪಾಕ್ ಟಿವಿ
ಈ ತಿಂಗಳ ಆರಂಭದಲ್ಲಿ ಅಸಿಮ್ ಮುನೀರ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ಅವರ ಹೇಳಿಕೆ ಬಂದಿದೆ. ಫ್ಲೋರಿಡಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಅಸೀಮ್ ಮುನೀರ್ ಅವರು ವಿಚಿತ್ರವಾದ ಹೋಲಿಕೆಯನ್ನು ಮಾಡಿದ್ದರು. “ಭಾರತವು ಮರ್ಸಿಡಿಸ್ನಂತೆ. ಹೆದ್ದಾರಿಯಲ್ಲಿ ಬರುವ ಮರ್ಸಿಡಿಸ್‌ನೊಂದಿಗೆ ಹೊಳೆಯುತ್ತಿದೆ. ಆದರೆ ನಾವು ಜಲ್ಲಿಕಲ್ಲುಗಳಿಂದ ತುಂಬಿದ ಡಂಪ್ ಟ್ರಕ್. ಒಂದುವೇಳೆ ಟ್ರಕ್ ಕಾರಿಗೆ ಡಿಕ್ಕಿ ಹೊಡೆದರೆ ಯಾರು ಸೋಲುತ್ತಾರೆ? ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ” ಎಂದು ಅವರು ಹೇಳಿದ್ದರು. ಅವರ ಈ ಹೋಲಿಕೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟ್ರೋಲಿಂಗ್‌ಗೆ ಕಾರಣವಾಗಿತ್ತು.