ಲಖನೌ: ತಮ್ಮನ್ನು ಗುಂಪೊಂದು ಅಪಹರಣ ಹಲ್ಲೆ ನಡೆಸಿರುವುದಾಗಿ ಇಬ್ಬರು ಪುರುಷರು ಆರೋಪಿರುವ ಘಟನೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನಡೆದಿದೆ. ಧಾರ್ಮಿಕ ಮತಾಂತರ (ಲವ್ ಜಿಹಾದ್) ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ಸಲ್ಲಿಸಿದ್ದ ಹಿಂದಿನ ದೂರಿನ ಸೇಡು ತೀರಿಸಿಕೊಳ್ಳಲು, ಗುಂಪೊಂದು ತಮ್ಮನ್ನು ಮೇಲೆ ಅಪಹರಿಸಿ ಹಲ್ಲೆ ನಡೆಸಿದೆ (Brutal Retaliation) ಎಂದು ಅವರು ಆರೋಪಿಸಿದ್ದಾರೆ.
ಜುಲೈ 23ರಂದು ಈ ಘಟನೆ ನಡೆದಿದ್ದು, ಸಂತ್ರಸ್ತರಲ್ಲಿ ಒಬ್ಬರಾದ ಚಂದನ್ ಮೌರ್ಯ ಎಂಬವರು ರಾಮಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚಂದನ್ ದೂರಿನ ಪ್ರಕಾರ, ಅವರು ತಮ್ಮ ಸೋದರಸಂಬಂಧಿ ಮೋಹಿತ್ ಮತ್ತು ಅನ್ನು ಎಂಬ ಸ್ನೇಹಿತನೊಂದಿಗೆ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಹೋಗುತ್ತಿದ್ದರು. ಈ ವೇಳೆ ಮೆಹಾರಿ ಬೈಖಾ ಗ್ರಾಮದ ಶಹಾಬುದ್ದೀನ್ ಮತ್ತು ಇತರ ಇಬ್ಬರು ಅವರನ್ನು ತಡೆದಿದ್ದಾರೆ.
ಅನಸ್ ಮತ್ತು ಜೀಶನ್ ಎಂದು ಗುರುತಿಸಲಾದ ಇನ್ನಿಬ್ಬರು ವ್ಯಕ್ತಿಗಳು ನಂತರ ಅವರೊಂದಿಗೆ ಸೇರಿಕೊಂಡರು ಎಂದು ವರದಿಯಾಗಿದೆ. ಈ ವೇಳೆ ಚಂದನ್ ಮತ್ತು ಮೋಹಿತ್ ಅವರನ್ನು ಬಲವಂತವಾಗಿ ವಾಹನಕ್ಕೆ ಎಳೆದೊಯ್ದು, ನಂತರ ದೂರದ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ಮಾಡಲಾಯಿತು ಎಂದು ಆರೋಪಿಸಲಾಗಿದೆ.
ತಮ್ಮನ್ನು ವಿವಸ್ತ್ರಗೊಳಿಸಿ, ರಾಡ್ ಮತ್ತು ಕೋಲುಗಳಿಂದ ಹೊಡೆದು, ನೀರು ಕೊಡದೆ, ಬಲವಂತವಾಗಿ ಮೂತ್ರ ಸೇವಿಸುವಂತೆ ಮಾಡಿದ್ದಾರೆ ಎಂದು ಚಂದನ್ ಆರೋಪಿಸಿದ್ದಾರೆ. ಬಂದೂಕು ತೋರಿಸಿ ಬೆದರಿಸಿ ಧಾರ್ಮಿಕ ಘೋಷಣೆಗಳನ್ನು ಕೂಗುವಂತೆ ಮಾಡಲಾಗಿದೆ ಎಂದು ಅವರು ದೂರಿದ್ದಾರೆ.
ಪೊಲೀಸರು ಇದುವರೆಗೆ ಮೂವರು ಆರೋಪಿಗಳಾದ ಶಹಾಬುದ್ದೀನ್, ಅನಸ್ ಮತ್ತು ಜೀಶನ್‍ನನ್ನು ಬಂಧಿಸಿದ್ದಾರೆ. ಘಟನೆಯಲ್ಲಿ ಬಳಸಲಾಗಿದೆ ಎನ್ನಲಾದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದುರ್ಗಾ ಪ್ರಸಾದ್ ತಿವಾರಿ ಮಾತನಾಡಿ, ʼʼಪ್ರಾಥಮಿಕ ತನಿಖೆಯಲ್ಲಿ ವೈಯಕ್ತಿಕ ವಿವಾದವೇ ಹಲ್ಲೆಗೆ ಕಾರಣವಾಗಿರಬಹುದು ಎಂದು ತಿಳಿದುಬಂದಿದೆ. ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದ್ದು, ಸಂತ್ರಸ್ತರನ್ನು ರಕ್ಷಿಸಲಾಗಿದೆ ಮತ್ತು ಪ್ರಕರಣದ ಎಲ್ಲ ಅಂಶಗಳನ್ನು ಪರಿಶೀಲಿಸುತ್ತಿದ್ದೇವೆʼʼ ಎಂದು ತಿಳಿಸಿದರು.
ಇನ್ನು ಧಾರ್ಮಿಕ ಘೋಷಣೆಗಳಿಗೆ ಸಂಬಂಧಿಸಿದ ಆರೋಪಗಳ ಕುರಿತು ಮಾತನಾಡಿದ ತಿವಾರಿ, ಈ ಹೇಳಿಕೆಗಳನ್ನು ಪೊಲೀಸ್ ದೂರಿನಲ್ಲಿ ದಾಖಲಿಸಲಾಗಿಲ್ಲ ಎಂದು ಹೇಳಿದರು. ಇವುಗಳನ್ನು ಈಗ ವಿಸ್ತೃತ ತನಿಖೆಯ ಭಾಗವಾಗಿ ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದರು.
ಚಂದನ್ ಮತ್ತೊಂದು ಗಂಭೀರ ಆರೋಪ ಮುಂದಿಟ್ಟಿದ್ದು, ಆರೋಪಿಗಳು ಹಿಂದೂಗಳ ಹೆಸರಿಟ್ಟುಕೊಂಡು ವಾಟ್ಸ್‌ಆ್ಯಪ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಮಹಿಳೆಯರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪಿಗಳ ಸಂಶಯಾಸ್ಪದ ಚಟುವಟಿಕೆಗಳ ಬಗ್ಗೆ ಎರಡು ತಿಂಗಳ ಹಿಂದೆಯೇ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಆದರೆ ಕ್ರಮ ಕೈಗೊಳ್ಳದ ಪೊಲೀಸರು ತನ್ನ ಫೋನ್‌ನಿಂದ ಡೇಟಾವನ್ನು ಅಳಿಸಿಹಾಕಿ ರಾಜಿಗೆ ಒತ್ತಾಯಿಸಿದರು ಎಂದು ಆರೋಪಿಸಿದರು. ಸದ್ಯ ಪ್ರಕರಣದ ತನಿಖೆ ನಡೆಸಲಾಗುತ್ತಿದೆ.