ಝಾಲಾವಾರ್: ರಾಜಸ್ಥಾನದ (Rajasthan) ಝಾಲಾವಾರ್ (Jhalawar) ಜಿಲ್ಲೆಯ ಪಿಂಪ್ಲೋಡ್‌ನ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡವು (School Building ) ಶುಕ್ರವಾರ ಬೆಳಗ್ಗೆ ಕುಸಿದು(collapse), ಏಳು ವಿದ್ಯಾರ್ಥಿಗಳು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ. ವಿದ್ಯಾರ್ಥಿಗಳು ಕಟ್ಟಡದಿಂದ ಕಲ್ಲುಗಳು ಬೀಳುತ್ತಿರುವ ಬಗ್ಗೆ ಶಿಕ್ಷಕರಿಗೆ ಎಚ್ಚರಿಕೆ ನೀಡಿದ್ದರೂ, ಉಪಾಹಾರ ಸೇವಿಸುತ್ತಿದ್ದ ಶಿಕ್ಷಕರು ಇದನ್ನು ಗಂಭೀರವಾಗಿ ಪರಿಗಣಿಸದೆ, ವಿದ್ಯಾರ್ಥಿಗಳನ್ನು ತರಗತಿಗೆ ಮರಳಿ ಕಳುಹಿಸಿದ್ದರು.
“ಕಲ್ಲುಗಳು ಬೀಳುತ್ತಿದ್ದವು. ವಿದ್ಯಾರ್ಥಿಗಳು ಶಿಕ್ಷಕರಿಗೆ ತಿಳಿಸಿದಾಗ, ಅವರು ಬೈದು ಉಪಾಹಾರ ಮುಂದುವರಿಸಿದರು. ಮಕ್ಕಳನ್ನು ಹೊರಗೆ ಕರೆದೊಯ್ದಿದ್ದರೆ ದುರಂತ ಸಂಭವಿಸುತ್ತಿರಲಿಲ್ಲ,” ಎಂದು ಎಂಟನೇ ತರಗತಿಯ ವಿದ್ಯಾರ್ಥಿಯೊಬ್ಬ ತಿಳಿಸಿದ್ದಾನೆ. 1ರಿಂದ 8ನೇ ತರಗತಿಯ ವಿದ್ಯಾರ್ಥಿಗಳು ಪ್ರಾರ್ಥನೆಗಾಗಿ ಕಟ್ಟಡದೊಳಗೆ ಕುಳಿತಿದ್ದರು. ಕಲ್ಲುಗಳು ಬೀಳಲಾರಂಭಿಸಿದಾಗ ಶಿಕ್ಷಕರು ವಿದ್ಯಾರ್ಥಿಗಳನ್ನು ತರಗತಿಯೊಳಗೆ ಕುಳಿತಿರಲು ಆದೇಶಿಸಿದ್ದರು. ಆನಂತರ ಗೋಡೆ ಕುಸಿದು, ಛಾವಣಿ ವಿದ್ಯಾರ್ಥಿಗಳ ಮೇಲೆ ಬಿದ್ದಿತು. ಹಲವರು ಓಡಿಹೋಗಿ ತಪ್ಪಿಸಿಕೊಂಡರೆ, ಕೆಲವರು ಅವಶೇಷಗಳಡಿ ಸಿಲುಕಿದರು. ಗ್ರಾಮಸ್ಥರ ಸಹಾಯದಿಂದ ಮಕ್ಕಳನ್ನು ರಕ್ಷಿಸಲಾಯಿತು.
ಮೂಲಗಳ ಪ್ರಕಾರ, ಶಾಲೆಯ ಗೋಡೆಗಳು ಮತ್ತು ಛಾವಣಿ ಶಿಥಿಲಗೊಂಡಿತ್ತು. ಒಂದು ತಿಂಗಳ ಹಿಂದೆ ಸಿಮೆಂಟ್ ಮತ್ತು ಪ್ಲಾಸ್ಟರ್ ಕೆಲಸ ಮಾಡಲಾಗಿತ್ತು. ಘಟನೆಯ ಬಳಿಕ, ಏಳು ಮಕ್ಕಳ ಸಾವಿಗೆ ಕಾರಣವಾದ ಕ್ರಿಮಿನಲ್ ನಿರ್ಲಕ್ಷ್ಯಕ್ಕಾಗಿ ಐವರು ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ. ಗಾಯಗೊಂಡವರನ್ನು ಸಮೀಪದ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿದೆ.
ಈ ಸುದ್ದಿಯನ್ನು ಓದಿ: Supreme Court: ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಆತ್ಮಹತ್ಯೆ; ಮಾನಸಿಕ ಸುರಕ್ಷತೆಗೆ ಸುಪ್ರೀಂ ಕೋರ್ಟ್ ಮಾರ್ಗಸೂಚಿ ಬಿಡುಗಡೆ
“ಶಾಲೆಯ ಕಳಪೆ ಸ್ಥಿತಿಯ ಬಗ್ಗೆ ಈ ಹಿಂದೆ ದೂರು ನೀಡಿದ್ದೆವು, ಆದರೆ ಕ್ರಮ ಕೈಗೊಳ್ಳಲಿಲ್ಲ” ಎಂದು ವಿದ್ಯಾರ್ಥಿಯ ಸಂಬಂಧಿಯೊಬ್ಬರು ತಿಳಿಸಿದ್ದಾರೆ. ಝಾಲಾವಾರ್ ಜಿಲ್ಲಾಧಿಕಾರಿ ಅಜಯ್ ಸಿಂಗ್ ರಾಠೋರ್, “ಜೂನ್‌ನಲ್ಲಿ ಶಿಥಿಲ ಕಟ್ಟಡಗಳಲ್ಲಿ ಮಕ್ಕಳನ್ನು ಕೂರಿಸಬಾರದೆಂದು ಆದೇಶಿಸಿದ್ದೆವು. ಶಿಕ್ಷಕರ ನಿರ್ಲಕ್ಷ್ಯ ಸ್ಪಷ್ಟವಾಗಿದೆ. ಐವರನ್ನು ಅಮಾನತುಗೊಳಿಸಲಾಗಿದೆ, ತನಿಖಾ ಸಮಿತಿಯ ವರದಿಯ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದಿದ್ದಾರೆ.
ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ, “ಈ ದುರಂತವು ಹೃದಯವನ್ನು ಇರಿದಂತಾಗಿದೆ,” ಎಂದಿದ್ದಾರೆ. ಕಾಂಗ್ರೆಸ್ ನಾಯಕ ಸಚಿನ್ ಪೈಲಟ್, “ಈ ಘಟನೆಯಿಂದ ನಾಚಿಕೆಯಾಗುತ್ತಿದೆ. ಜವಾಬ್ದಾರರ ವಿರುದ್ಧ ಕಠಿಣ ಕ್ರಮವಾಗಬೇಕು” ಎಂದು ಒತ್ತಾಯಿಸಿದ್ದಾರೆ. ಈ ಘಟನೆಯು ಶಾಲೆಗಳ ಸುರಕ್ಷತಾ ಮಾನದಂಡಗಳ ಕೊರತೆಯನ್ನು ಎತ್ತಿ ತೋರಿಸಿದ್ದು, ಸ್ಥಳೀಯರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ.