ಹೊಸದಿಲ್ಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy murder case) ಆರೋಪಿಯಾಗಿರುವ ನಟ ದರ್ಶನ್‌ಗೆ (Actor Darshan) ಕರ್ನಾಟಕ ಹೈಕೋರ್ಟ್ (Karnataka High Court) ಜಾಮೀನು ನೀಡಿದ ವಿಧಾನದ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಲೈವ್ ಲಾ ವೆಬ್‌ಸೈಟ್ ಪ್ರಕಾರ, ಜಸ್ಟಿಸ್ ಜೆ.ಬಿ.ಪರ್ದೀವಾಲಾ ಮತ್ತು ಜಸ್ಟಿಸ್ ಆರ್.ಮಹಾದೇವನ್ ಅವರನ್ನೊಳಗೊಂಡ ಪೀಠವು, ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಬಾರದು ಎಂಬುದಕ್ಕೆ ಬಲವಾದ ಕಾರಣಗಳನ್ನು ಪ್ರಸ್ತುತಪಡಿಸಲು ದರ್ಶನ್ ಪರ ವಕೀಲರನ್ನು ಕೇಳಿತು.
ದರ್ಶನ್ ಅವರಿಗೆ ಹೈಕೋರ್ಟ್ ಜಾಮೀನು ನೀಡಿರುವ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರವು ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಗುರುವಾರ (ಜು. 17) ಸುಪ್ರೀಂ ಕೋರ್ಟ್ ನಡೆಸಿತು. ಈ ವೇಳೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರಿಗೆ ಜಾಮೀನು ನೀಡುವ ವೇಳೆ ಕರ್ನಾಟಕ ಹೈಕೋರ್ಟ್ ಸೂಕ್ತ ವಿವೇಚನೆಯನ್ನು ಬಳಸಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ರಾಜ್ಯ ಸರ್ಕಾರದ ಮೇಲ್ಮನವಿಯ ಹಿನ್ನೆಲೆಯಲ್ಲಿ ದರ್ಶನ್ ಪರ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನು ಈ ವಿಚಾರವಾಗಿ ನೀವು ಏನು ಹೇಳುತ್ತೀರಿ? ಎಂದು ನ್ಯಾಯಮೂರ್ತಿ ಪರ್ದೀವಾಲಾ ಪ್ರಶ್ನಿಸಿದರು. ಮುಂದುವರಿದು, "ಪ್ರಾಮಾಣಿಕವಾಗಿ ಹೇಳಬೇಕೆಂದರೆ ಹೈಕೋರ್ಟ್ ಸೂಕ್ತ ರೀತಿಯಲ್ಲಿ ತನ್ನ ವಿವೇಚನೆಯನ್ನು ಬಳಸಿಲ್ಲ" ಎಂದು ಅವರು ಮೌಖಿಕವಾಗಿ ತಿಳಿಸಿದರು.
ಈ ಸುದ್ದಿಯನ್ನೂ ಓದಿ: Actor Darshan: ಸುಪ್ರೀಂ ಕೋರ್ಟ್‌ನಲ್ಲಿ ನಟ ದರ್ಶನ್ ಜಾಮೀನು ಮೇಲ್ಮನವಿ ವಿಚಾರಣೆ ಜುಲೈ 23ಕ್ಕೆ ಮುಂದೂಡಿಕೆ
ಈ ವೇಳೆ ಪ್ರತಿಕ್ರಿಯಿಸಿದ ಸಿಬಲ್, ʼʼಹೈಕೋರ್ಟ್ ಏನು ಮಾಡಿದೆ ಎನ್ನುವುದಿರಲಿ, ದಯಮಾಡಿ ಸಾಕ್ಷ್ಯವನ್ನೊಮ್ಮೆ ಗಮನಿಸಿ, ಸೆಕ್ಷನ್ 161 ಮತ್ತು 164ರ ಅಡಿ ದಾಖಲಿಸಿರುವ ಹೇಳಿಕೆಗಳನ್ನು ಪರಿಶೀಲಿಸಿʼʼ ಎಂದು ನ್ಯಾಯಾಲಯದ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಪರ್ದೀವಾಲಾ, ʼʼನಿಮ್ಮ ವಾದವನ್ನು ಜು. 22ರಂದು ಆಲಿಸಲಿದ್ದೇವೆ. ವಾದವನ್ನು ಸಿದ್ಧಪಡಿಸಿಕೊಂಡಿರಿ. ನಾವು ಏಕೆ ಮಧ್ಯಪ್ರವೇಶಿಸಬಾರದು ಎನ್ನುವ ನಿಮ್ಮ ವಾದವನ್ನು ಅಂದು ಆಲಿಸಲಿದ್ದೇವೆʼʼ ಎಂದು ಹೇಳಿದರು.
ಇದೇ ವೇಳೆ ಆರೋಪಿಗಳಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆಗಳಿವೆಯೇ ಎಂದು ಸರ್ಕಾರವನ್ನು ಪ್ರತಿನಿಧಿಸುವ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಅವರನ್ನು ನ್ಯಾಯಪೀಠ ಪ್ರಶ್ನಿಸಿತು. ಅಂತಹ ವಿವರಗಳನ್ನು ಮುಂದಿನ ವಿಚಾರಣೆಯಲ್ಲಿ ಪ್ರಸ್ತುತಪಡಿಸುವಂತೆ ನ್ಯಾಯಾಲಯ ಸೂಚಿಸಿತು. ಈ ವಿಷಯವು ಕೇವಲ ಪೂರ್ವಾಪರ ಮಾತ್ರವಲ್ಲದೆ ಜಾಮೀನು ಪಡೆದ ನಂತರದ ನಡವಳಿಕೆಯನ್ನೂ ಒಳಗೊಂಡಿದೆ ಎಂದು ಲೂತ್ರಾ ತಿಳಿಸಿದರು. "ಅವರು ನಮ್ಮ ಪ್ರಮುಖ ಸಾಕ್ಷಿಗಳಲ್ಲಿ ಒಬ್ಬರೊಂದಿಗೆ ಸಾರ್ವಜನಿಕ ಸಮಾರಂಭದಲ್ಲಿ ವೇದಿಕೆಯ ಮೇಲೆ ಕುಳಿತಿದ್ದಾರೆ. ಇದು ಸ್ವಲ್ಪ ಸಂಶಯಾಸ್ಪದವಾಗಿದೆ" ಎಂದು ಅವರು ಹೇಳಿದರು.
ಪ್ರಕರಣದ ಹಿನ್ನೆಲೆ
2024ರ ಜೂ. 8ರಂದು ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಅಪಹರಿಸಿ ಕೊಲೆ ಮಾಡಿದ್ದಾರೆ ಎಂಬ ಆರೋಪದಡಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. 6 ತಿಂಗಳ ಬಳಿಕ, 2024ರ ಡಿ.13ರಂದು ಕರ್ನಾಟಕ ಹೈಕೋರ್ಟ್ ಅವರಿಗೆ ಜಾಮೀನು ನೀಡಿತ್ತು. ಈ ಜಾಮೀನು ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಮೇ 21ರಂದು ನ್ಯಾಯಮೂರ್ತಿ ಪರ್ದೀವಾಲಾ ಪೀಠದ ಮುಂದೆ ಅರ್ಜಿ ವಿಚಾರಣೆಗೆ ಬಂದಿತ್ತು. ನ್ಯಾಯಪೀಠ ಅರ್ಜಿಯ ವಿಚಾರಣೆಯನ್ನು ಜು. 17ಕ್ಕೆ ಮುಂದೂಡಿತ್ತು.