ಅನಂತಪುರ: ಆಂಧ್ರಪ್ರದೇಶದ (Andhra Pradesh) ಅನಂತಪುರದ (Anantapur) ಶಾಲೆಯೊಂದರ (School) ಅಡುಗೆಮನೆಯಲ್ಲಿ ಬಿಸಿ ಹಾಲಿನ ಪಾತ್ರೆಗೆ (Milk Container) ಬಿದ್ದ 17 ತಿಂಗಳ ಮಗು ಅಕ್ಷಿತಾ ದುರಂತ ಸಾವನ್ನಪ್ಪಿದ್ದಾಳೆ. ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಆಕೆಯ ತಾಯಿ ಕೃಷ್ಣವೇಣಿ, ಮನೆಯಲ್ಲಿ ಯಾರೂ ಇಲ್ಲದ ಕಾರಣ ಮಗಳನ್ನು ಶಾಲೆಗೆ ಕರೆತಂದಿದ್ದರು. ಈ ವೇಳೆ ದುರಂತ ಸಂಭವಿಸಿದೆ. ಸದ್ಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.
ಸೆಪ್ಟೆಂಬರ್ 24ರಂದು ಕೃಷ್ಣವೇಣಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾಗ, ಅಕ್ಷಿತಾ ಅಡುಗೆಮನೆಯ ಸಮೀಪ ಆಟವಾಡುತ್ತಿದ್ದಳು. ಆಗ ಬೆಕ್ಕೊಂದು ಅಡುಗೆಮನೆಗೆ ಬಂದಿತು. ಬೆಕ್ಕಿನ ಹಿಂದೆ ಓಡಿದ ಅಕ್ಷಿತಾ, ಬಿಸಿ ಹಾಲಿನ ದೊಡ್ಡ ಪಾತ್ರೆಯ ಬಳಿ ಬಂದಾಗ, ಕಾಲಿಗೆ ಪಾತ್ರೆ ತಾಗಿ ಆಕಸ್ಮಿಕವಾಗಿ ಅದರೊಳಗೆ ಬಿದ್ದಳು. ಬಿಸಿ ಹಾಲಿನಿಂದ ಆಕೆಯ ದೇಹ ಸಂಪೂರ್ಣವಾಗಿ ಸುಟ್ಟುಹೋಗಿತ್ತು.
ಅಕ್ಷಿತಾಳ ಕಿರುಚಾಟ ಕೇಳಿ ಓಡಿಬಂದ ಕೃಷ್ಣವೇಣಿ, ಮಗಳನ್ನು ಪಾತ್ರೆಯಿಂದ ಮೇಲೆತ್ತಿದರು. ಆಕೆಯನ್ನು ತಕ್ಷಣ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿಂದ ಜಿಲ್ಲಾಸ್ಪತ್ರೆಗೆ ವರ್ಗಾಯಿಸಲಾಯಿತು. ಆದರೆ, ಗಂಭೀರ ಗಾಯದಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಳು. ಈ ದುರಂತ ಆಕೆಯ ಕುಟುಂಬಕ್ಕೆ ತೀವ್ರ ಆಘಾತವನ್ನುಂಟುಮಾಡಿದೆ.
ಈ ಸುದ್ದಿಯನ್ನು ಓದಿ: Crime News: ಪೋಷಕರಿಂದಲೇ ಮಗಳ ಅಪಹರಣ; ಅತ್ತೆ- ಮಾವಂದಿರ ಮೇಲೆ ಡೆಡ್ಲಿ ಅಟ್ಯಾಕ್!
ಈ ಘಟನೆ ಶಾಲೆಯ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. “ಅಡುಗೆಮನೆಯಂತಹ ಅಪಾಯಕಾರಿ ಸ್ಥಳದಲ್ಲಿ ಮಕ್ಕಳನ್ನು ತಡೆಯಲು ಯಾವುದೇ ಕ್ರಮವಿರಲಿಲ್ಲವೇ?” ಎಂದು ಸ್ಥಳೀಯರು ಆಕ್ಷೇಪಿಸಿದ್ದಾರೆ. ಪೊಲೀಸರು ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಶಾಲಾ ಆಡಳಿತವು ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ, ಆದರೆ ಸುರಕ್ಷತಾ ಕ್ರಮಗಳನ್ನು ಕಡ್ಡಾಯಗೊಳಿಸುವಂತೆ ಒತ್ತಾಯ ಕೇಳಿಬಂದಿದೆ. ಹಾಗೂ ಸಾಮಾಜಿಕ ಜಾಲತಾಣದಲ್ಲಿ ಈ ಘಟನೆ ಚರ್ಚೆಗೆ ಕಾರಣವಾಗಿದೆ.