ಲಖನೌ: ಹಿಂದೂ ಧಾರ್ಮಿಕ ನಾಯಕರ ಹತ್ಯೆಗೆ ಸಂಚು ರೂಪಿಸಿದ್ದ ಮತ್ತು "ಮುಜಾಹಿದ್ದೀನ್ ಆರ್ಮಿ" ಎಂಬ ಮೂಲಭೂತವಾದಿ ಸಂಘಟನೆಯನ್ನು ರಚಿಸಲು ಯತ್ನಿಸಿದ ಆರೋಪದ ಮೇಲೆ ಉತ್ತರ ಪ್ರದೇಶ (Terrorist Arrested) ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ನಾಲ್ವರು ವ್ಯಕ್ತಿಗಳನ್ನು ಬಂಧಿಸಿದೆ. ಈ ಗುಂಪು ಹಿಂಸಾತ್ಮಕ ಚಟುವಟಿಕೆಗಳಿಗೆ ( Uttar Pradesh) ತಯಾರಿ ನಡೆಸುತ್ತಿದ್ದು, ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಜನರನ್ನು ನೇಮಕ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳ ಕೆಲವು ವ್ಯಕ್ತಿಗಳು ಉಗ್ರಗಾಮಿ ಗುಂಪುಗಳಿಂದ ಪ್ರಭಾವಿತರಾಗಿದ್ದಾರೆ ಮತ್ತು ಹಿಂಸಾತ್ಮಕ ಕೃತ್ಯಗಳನ್ನು ಯೋಜಿಸುತ್ತಿದ್ದಾರೆ ಎಂದು ಗುಪ್ತಚರ ಮಾಹಿತಿಗಳು ಬಹಿರಂಗಪಡಿಸಿವೆ ಎಂದು ಎಟಿಎಸ್ ಐಜಿ ಪಿಕೆ ಗೌತಮ್ ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸುಲ್ತಾನ್‌ಪುರದ ಅಕ್ಮಲ್ ರಜಾ, ಸೋನ್‌ಭದ್ರಾದ ಸಫೀಲ್ ಸಲ್ಮಾನಿ, ಕಾನ್ಪುರದ ತೌಸಿಫ್ ಮತ್ತು ರಾಂಪುರದ ಖಾಸಿಮ್ ಅಲಿ ಎಂದು ಗುರುತಿಸಲಾಗಿದೆ. ಆರೋಪಿಗಳು ರಹಸ್ಯ ಸಭೆ ನಡೆಸುತ್ತಿದ್ದರು ಹಾಗೂ ಮೂಲಭೂತವಾದಿ ಪ್ರಚಾರವನ್ನು ಹರಡಲು ಮತ್ತು ಬೆಂಬಲವನ್ನು ಪಡೆಯಲು ಎನ್‌ಕ್ರಿಪ್ಟ್ ಮಾಡಿದ ಆನ್‌ಲೈನ್ ಗುಂಪುಗಳನ್ನು ನಡೆಸುತ್ತಿದ್ದರು ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ. ಶಸ್ತ್ರಾಸ್ತ್ರ ಮತ್ತು ಇತರ ಸಂಪನ್ಮೂಲಗಳನ್ನು ಸಂಗ್ರಹಿಸಲು ಅವರು ಹಣವನ್ನು ಸಂಗ್ರಹಿಸುತ್ತಿದ್ದರು.
ವಿಚಾರಣೆಯ ಸಮಯದಲ್ಲಿ, ಅಧಿಕಾರಿಗಳು ಆರೋಪಿಗಳಿಂದ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಕ್ಕೆ ಪಡೆದಿದ್ದಾರೆ. ಎಟಿಎಸ್ ಅವರ ವಿರುದ್ಧ ಪ್ರಕರಣ ದಾಖಲಿಸಿದೆ. ಅಧಿಕಾರಿಗಳು ಐದು ಮೊಬೈಲ್ ಫೋನ್‌ಗಳು, ಆಧಾರ್ ಕಾರ್ಡ್‌ಗಳು, ಪ್ಯಾನ್ ಕಾರ್ಡ್‌ಗಳು, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು ಮತ್ತು ಫೋನ್‌ಪೇ ಸ್ಕ್ಯಾನರ್ ಅನ್ನು ವಶಕ್ಕೆ ಪಡೆದಿದ್ದಾರೆ. ಸಮಾನ ಮನಸ್ಕ ಜನರನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಸಂಪರ್ಕಿಸುವ ಮೂಲಕ ತನ್ನ ಜಾಲವನ್ನು ವಿಸ್ತರಿಸುವುದು ಗುಂಪಿನ ಅಂತಿಮ ಗುರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರ ಸಂವಹನವು ಹಿಂಸಾತ್ಮಕ ಕ್ರಮವನ್ನು ಪ್ರಚೋದಿಸುವ ಆಡಿಯೋ ಮತ್ತು ವಿಡಿಯೋ ಸಂದೇಶಗಳನ್ನು ಒಳಗೊಂಡಿತ್ತು ಎಂದು ವರದಿಯಾಗಿದೆ.
ಈ ಸುದ್ದಿಯನ್ನೂ ಓದಿ: Pahalgam Attack: ಪಹಲ್ಗಾಮ್ ದಾಳಿ ವೇಳೆ ಭಯೋತ್ಪಾದಕರಿಗೆ ನೆರವಾಗಿದ್ದ ಕಾಶ್ಮೀರಿ ವ್ಯಕ್ತಿಯ ಬಂಧನ
ಬಂಧಿತ ನಾಲ್ವರು ವ್ಯಕ್ತಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದು, ಅವರ ಸಹಚರರು, ಆರ್ಥಿಕ ಬೆಂಬಲಿಗರು ಮತ್ತು ವ್ಯಾಪಕ ಜಾಲವನ್ನು ಪತ್ತೆಹಚ್ಚಲು ಪೊಲೀಸ್ ಕಸ್ಟಡಿಗೆ ಕೋರಲಿದೆ. ಪಿತೂರಿಯ ಇತರ ಸಂಭಾವ್ಯ ಸದಸ್ಯರು ಮತ್ತು ಬೆಂಬಲಿಗರನ್ನು ಗುರುತಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ.