ಹೈದರಾಬಾದ್: ಬೆಟ್ಟಿಂಗ್ ಆ್ಯಪ್ ಹಗರಣ (Betting App Case) ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ಜಾರಿ ನಿರ್ದೇಶನಾಲಯ (ED) ನಟರಾದ ವಿಜಯ್ ದೇವರಕೊಂಡ, (Vijay Deverakonda) ರಾಣಾ ದಗ್ಗುಬಾಟಿ ಮತ್ತು ಪ್ರಕಾಶ್ ರಾಜ್ ಸೇರಿದಂತೆ ಇತರರಿಗೆ ಸಮನ್ಸ್ ಜಾರಿ ಮಾಡಿದೆ. ಜುಲೈ 23 ರಂದು ದಗ್ಗುಬಾಟಿ, ಜುಲೈ 30 ರಂದು ಪ್ರಕಾಶ್ ರಾಜ್, ಆಗಸ್ಟ್ 6 ರಂದು ವಿಜಯ್ ದೇವರಕೊಂಡ ಮತ್ತು ಆಗಸ್ಟ್ 13 ರಂದು ಲಕ್ಷ್ಮಿ ಮಂಚು ಅವರು ಕೇಂದ್ರೀಯ ಸಂಸ್ಥೆಯ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ. ಹೆಸರಿಸಲಾದ ಇತರರಿಗೆ ಸಂಸ್ಥೆಯು ಹಂತ ಹಂತವಾಗಿ ಸಮನ್ಸ್ ಜಾರಿ ಮಾಡುವುದನ್ನು ಮುಂದುವರಿಸುತ್ತದೆ.
ಪ್ರಣೀತಾ ಸುಭಾಷ್, ನಿಧಿ ಅಗರ್ವಾಲ್, ಅನನ್ಯ ನಾಗಲ್ಲ, ಸಿರಿ ಹನುಮಂತ್, ಶ್ರೀಮುಖಿ, ವರ್ಷಿಣಿ ಸೌಂದರರಾಜನ್, ವಸಂತಿ ಕೃಷ್ಣನ್, ಶೋಭಾ ಶೆಟ್ಟಿ, ಅಮೃತಾ ಚೌಧರಿ, ನಯನಿ ಪಾವನಿ, ನೇಹಾ ಪಠಾಣ್, ಪಾಂಡು, ಪದ್ಮಾವತಿ, ಇಮ್ರಾನ್ ಖಾನ್, ವಿಷ್ಣು ಪ್ರಿಯಾ, ಹರ್ಷ ಸಾಯಿ, ಇಮ್ರಾನ್ ಖಾನ್ ಸೇರಿದಂತೆ ಹಲವರಿಗೆ ಈಗಾಗಲೇ ನೋಟೀಸ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇವರ ವಿಚಾರಣೆ ನಡೆಸುತ್ತಾರೆ.
ಏನಿದು ಪ್ರಕರಣ?
ಅಕ್ರಮ ಬೆಟ್ಟಿಂಗ್ ಆಪ್ ಪ್ರಚಾರ ಮಾಡಿದ್ದಕ್ಕಾಗಿ ಜಾರಿ ನಿರ್ದೇಶನಾಲಯವು ಹಲವಾರು ಸೆಲೆಬ್ರಿಟಿಗಳು ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿಗಳ ವಿರುದ್ಧ ಪ್ರಕರಣ ದಾಖಲಿಸಿದೆ. ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ರಾಜ್ಯ ಪೊಲೀಸರು ದಾಖಲಿಸಿರುವ ಕನಿಷ್ಠ ಐದು ಎಫ್‌ಐಆರ್‌ಗಳ ಆಧಾರದ ಮೇಲೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಣ ಗಳಿಸುವ ಆಸೆ ತೋರಿಸಿ ಯುವ ಜನತೆಯನ್ನು ಬೆಟ್ಟಿಂಗ್ ಆ್ಯಪ್ಗಳು ದಾರಿ ತಪ್ಪಿಸುತ್ತಿವೆ. ಇದಕ್ಕೆ ಅನೇಕ ಸೆಲೆಬ್ರಿಟಿಗಳು ಮತ್ತು ಮಿಲಿಯನ್ಗಟ್ಟಲೆ ಫಾಲೋವರ್ಸ್ ಹೊಂದಿರುವ ವ್ಯಕ್ತಿಗಳು ಪ್ರಚಾರ ನೀಡುತ್ತಿದ್ದಾರೆ. ಇಂತಹ ಅಕ್ರಮ ಬೆಟ್ಟಿಂಗ್ ಆ್ಯಪ್ಗಳಿಂದ ಅನೇಕ ಯುವಕರು ಹಣ ಕಳೆದುಕೊಂಡಿದ್ದಾರೆ ಎಂದು ಇಡಿ ವಾದಿಸಿದೆ.
ಈ ಸುದ್ದಿಯನ್ನೂ ಓದಿ: Google-Meta: ಬೆಟ್ಟಿಂಗ್ ಆ್ಯಪ್ ಪ್ರಕರಣ; ಗೂಗಲ್, ಮೆಟಾಗೆ ಇಡಿ ನೋಟಿಸ್, ವಿಚಾರಣೆಗೆ ಸಮನ್ಸ್ ಜಾರಿ
ಗೂಗಲ್ ಮೆಟಾಗೂ ನೋಟಿಸ್
ಬೆಟ್ಟಿಂಗ್ ಆ್ಯಪ್‌ಗಳಿಗೆ ವೇದಿಕೆ ಮತ್ತು ಪ್ರಚಾರ ಕಲ್ಪಿಸಿದ ಗೂಗಲ್ ಮತ್ತು ಮೆಟಾ ಸಂಸ್ಥೆಗಳಿಗೆ ಜು.28ಕ್ಕೆ ಹಾಜರಾಗುವಂತೆ ಮತ್ತೊಮ್ಮೆ ಸಮನ್ಸ್ ಜಾರಿಗೊಳಿಸಲಾಗಿದೆ. ಹಲವು ಆನ್‌ಲೈನ್ ವೇದಿಕೆಗಳು ಅಕ್ರಮ ಬೆಟ್ಟಿಂಗ್ ಹಾಗೂ ಜೂಜಾಟದ ಆ್ಯಪ್‌ಗಳಿಗೆ ಜಾಹೀರಾತು, ಡೌನ್‌ಲೋಡ್ ಲಿಂಕ್ ಸೇರಿ ಹಲವು ಮಾರ್ಗಗಳಲ್ಲಿ ನೆರವು ಒದಗಿಸಿವೆ ಎಂದು ಜಾರಿ ನಿರ್ದೇಶನಾಲಯ ಹೇಳಿತ್ತು