ದೆಹಲಿ: ಕೇವಲ 1 ವರ್ಷದ ವೈವಾಹಿಕ ಜೀವನವನ್ನು ಕೊನೆಗೊಳಿಸಲು 5 ಕೋಟಿ ರೂ. ಜೀವನಾಂಶ ಕೇಳಿದ ಮಹಿಳೆಯೊಬ್ಬರನ್ನು ಸುಪ್ರೀಂ ಕೋರ್ಟ್ (Supreme Court) ತರಾಟೆಗೆ ತೆಗೆದುಕೊಂಡಿದೆ. ಈ ಬೇಡಿಕೆ ಅತಿಯಾಯ್ತು ಎಂದು ಹೇಳಿದೆ. ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ (JB Pardiwala) ನೇತೃತ್ವದ ಪೀಠವು ಎರಡೂ ಕಡೆಯವರು ಅಕ್ಟೋಬರ್ 5ರಂದು ಮತ್ತೊಂದು ಸುತ್ತಿನ ಚರ್ಚೆಗಾಗಿ ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ಕೇಂದ್ರಕ್ಕೆ ಭೇಟಿ ನೀಡುವಂತೆ ನಿರ್ದೇಶಿಸಿದೆ. ಸದ್ಯ ಈ ಪ್ರಕರಣ ದೇಶಾದ್ಯಂತ ಚರ್ಚೆಗೆ ಕಾರಣವಾಗಿದ್ದು, ಕಾನೂನು ದುರುಪಯೋಗದ ಎಚ್ಚರಿಕೆ ನೀಡಿದೆ.
"ಪತ್ನಿಯ ನಿಲುವು ಹೀಗಿದ್ದರೆ ಆಕೆಗೆ ಇಷ್ಟವಾಗದ ಕೆಲವು ಆದೇಶಗಳನ್ನು ನಾವು ಹೊರಡಿಸಬೇಕಾಗುತ್ತದೆ. ಅವರು ಸಮಂಜಸವಾದ ಬೇಡಿಕೆಯನ್ನು ಮುಂದಿಟ್ಟು ಈ ಮೊಕದ್ದಮೆಯನ್ನು ಕೊನೆಗೊಳಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ" ಎಂಬುದಾಗಿ ವಿಚಾರಣೆಯ ಸಮಯದಲ್ಲಿ ನ್ಯಾಯಮೂರ್ತಿ ಪಾರ್ದಿವಾಲಾ ತಿಳಿಸಿದರು. ಮದುವೆಯು ಕೇವಲ ಒಂದು ವರ್ಷ ಮಾತ್ರ ಆಗಿರುವುದನ್ನು ಗಮನಿಸಿದ ನ್ಯಾಯಪೀಠ ಈ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿತು.
ಈ ಸುದ್ದಿಯನ್ನೂ ಓದಿ: Viral Video: ಸುಪ್ರೀಂಕೋರ್ಟ್‌ನ ಗಾರ್ಡನ್‍ನಿಂದ ಗುಲಾಬಿ ಹೂ ಕಿತ್ತ ಮಹಿಳೆ; ಪ್ರಶ್ನಿಸಿದ್ದಕ್ಕೆ ಹೇಳಿದ್ದೇನು? ವಿಡಿಯೊ ವೈರಲ್
"ನೀವು ಆಕೆಯೊಂದಿಗೆ ವೈವಾಹಿಕ ಜೀವನವನ್ನು ಉಳಿಸಿಕೊಳ್ಳಲು ಯತ್ನಿಸುವ ಮೂಲಕ ತಪ್ಪು ಮಾಡುತ್ತಿದ್ದೀರಿ. ಆಕೆಯ ಕನಸುಗಳು ತುಂಬಾ ದೊಡ್ಡದು. ಅದನ್ನು ಈಡೇರಿಸಲು ಕಷ್ಟ" ಎಂದು ಪತಿಗೆ ನ್ಯಾಯಮೂರ್ತಿ ಪಾರ್ದಿವಾಲಾ ಸೂಚಿಸಿದರು.
ವರದಿಗಳ ಪ್ರಕಾರ, ಅಮೆಜಾನ್‌ನಲ್ಲಿ ಕೆಲಸ ಮಾಡುತ್ತಿರುವ ಎಂಜಿನಿಯರ್ ಪತಿ ಪೂರ್ಣ ಮತ್ತು ಅಂತಿಮ ಇತ್ಯರ್ಥವಾಗಿ 35–40 ಲಕ್ಷ ರೂ. ನೀಡುವುದಾಗಿ ಹೇಳಿದ್ದಾರೆ. ಆದರೆ ಪತ್ನಿ ಅದನ್ನು ತಿರಸ್ಕರಿಸಿದ್ದು, ಹೆಚ್ಚಿನ ಹಣಕ್ಕಾಗಿ ಬೇಡಿಕೆ ಸಲ್ಲಿಸಿದ್ದಾಳೆ.
ಹಿಂದಿನ ಮಧ್ಯಸ್ಥಿಕೆ ಪ್ರಯತ್ನಗಳು ವಿಫಲವಾಗಿದ್ದವು ಎಂದು ಅವರ ವಕೀಲರು ಒಪ್ಪಿಕೊಂಡಿದ್ದಾರೆ. ಆದರೆ ನ್ಯಾಯಾಲಯವು ವಿವಾದವನ್ನು ಪರಿಹರಿಸಲು ಹೆಚ್ಚು ಪ್ರಾಯೋಗಿಕ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿದೆ. ಮಧ್ಯಸ್ಥಿಕೆ ಕೇಂದ್ರವು ತನ್ನ ವರದಿಯನ್ನು ಸಲ್ಲಿಸಿದ ನಂತರ ನ್ಯಾಯಾಲಯವು ಈ ವಿಚಾರವನ್ನು ಮತ್ತೆ ಕೈಗೆತ್ತಿಕೊಳ್ಳಲಿದೆ.