Improve Kids Handwriting: ಮಕ್ಕಳು ದುಂಡಗೆ, ಮುತ್ತು ಪೋಣಿಸಿದಂತೆ ಬರೆಯಬೇಕೆ? ಈ ಟಿಪ್ಸ್ ಫಾಲೋ ಮಾಡಿ
ಈಗ ತಾನೇ ಸ್ಕೂಲ್ ಮೆಟ್ಟಿಲು ಹತ್ತಿರುವ ಪುಟ್ಟಪುಟ್ಟ ಕಂದಮ್ಮಗಳ ಪುಸ್ತಕ ತೆರೆದು ನೋಡಿದಾಗ ಪೋಷಕರಿಗೆ ಒಮ್ಮೆ ತಲೆ ತಿರುಗುವುದು ಗ್ಯಾರಂಟಿ. ಯಾಕೆಂದರೆ ಶಾಲೆಯಲ್ಲಿ ಟೀಚರ್ ಏನು ಹೇಳಿಕೊಟ್ಟಿದ್ದಾರೆ, ಅವರು ಏನು ಬರೆದಿದ್ದಾರೆ ಎನ್ನುವುದು ಕೊಂಚವು ಅರ್ಥವಾಗುವುದಿಲ್ಲ. ಇದಕ್ಕಾಗಿ ಕೆಲವೊಮ್ಮೆ ಬೈದು, ಹೊಡೆದು ಎಲ್ಲ ಪ್ರಯತ್ನಗಳನ್ನೂ ಮಾಡಿದರೂ ಪ್ರಯೋಜನವಾಗುವುದಿಲ್ಲ. ಹೀಗಾಗಿ ಎಷ್ಟೋ ಪೋಷಕರು ಮಕ್ಕಳ ಬರವಣಿಗೆಯನ್ನು ಸುಧಾರಿಸಲು ಪ್ರಯತ್ನಿಸಿ ಕೊನೆಗೆ ಸೋಲೊಪ್ಪಿಕೊಳ್ಳುವುದು ಇದೆ. ಆದರೆ ಈ ಬಗ್ಗೆ ನಿರಾಸೆ ಹೊಂದಬೇಕಾಗಿಲ್ಲ. ಮಕ್ಕಳ ಕೈಬರಹವನ್ನು ಉತ್ತಮಗೊಳಿಸಲು ಕೆಲವೊಂದು ಸರಳ ಉಪಾಯಗಳಿವೆ.



ಈಗಷ್ಟೇ ಶಾಲೆ ಮೆಟ್ಟಿಲು ಹತ್ತಿ ಅಕ್ಷರಾಭ್ಯಾಸ ಪ್ರಾರಂಭಿಸಿರುವ ಮಕ್ಕಳ ಕೈ ಬರಹವನ್ನು ಸುಧಾರಿಸುವುದು ಬಹುತೇಕ ಶಿಕ್ಷಕರು, ಪೋಷಕರಿಗೆ ಅತ್ಯಂತ ಸವಾಲಿನ ಕಾರ್ಯವೇ ಆಗಿರುತ್ತದೆ. ಆದರೆ ಪ್ರಾರಂಭದಲ್ಲೇ ಇದನ್ನು ಅಭ್ಯಾಸ ಮಾಡಿಸುವುದು ಬಹುಮುಖ್ಯ. ಕೆಲವೊಂದು ಸರಳ ವಿಧಾನವನ್ನು ಅನುಸರಿಸಿದರೆ ಮಕ್ಕಳ ಕೈಬರಹವನ್ನು ಸುಧಾರಿಸಬಹುದು. ಅದಕ್ಕಾಗಿ ಇಲ್ಲಿದೆ ಟಿಪ್ಸ್.

ಮಕ್ಕಳ ಪುಟ್ಟ ಕೈಗಳ ಹಿಡಿತ ಮತ್ತು ಬರೆಯುವ ಶೈಲಿಗೆ ಸೂಕ್ತವಾದ ಆರಾಮದಾಯಕ, ನಯವಾದ, ಹರಿತವಾಗಿರುವ ಪೆನ್ ಅಥವಾ ಪೆನ್ಸಿಲ್ಗಳನ್ನು ನೀಡಿ. ಇದರಿಂದ ಅವರು ಬರವಣಿಗೆ ಮೇಲೆ ಹೆಚ್ಚು ನಿಯಂತ್ರಣವನ್ನು ಪಡೆಯುತ್ತಾರೆ ಮತ್ತು ಅವರ ಅಕ್ಷರಗಳು ಸುಂದರವಾಗುತ್ತದೆ.

ಮಕ್ಕಳಿಗೆ ಹೆಚ್ಚು ಒತ್ತಿ ಬರೆಯಲು ಪ್ರೇರೇಪಿಸಬೇಡಿ. ಅವರು ಸಡಿಲ ಮತ್ತು ಹಗುರವಾಗಿ ಕೈ ಭುಜಗಳನ್ನು ಇಟ್ಟು ಬರೆಯಲಿ. ನೇರವಾದ ಭಂಗಿಯಲ್ಲಿ ಕುಳಿತು ಬರೆಯುವಂತೆ ನೋಡಿಕೊಳ್ಳಿ. ಅಕ್ಷರ ಉತ್ತಮವಾಗಲು ಕುಳಿತುಕೊಳ್ಳುವ ಸರಿಯಾದ ಭಂಗಿಯು ಕೂಡ ಮುಖ್ಯವಾಗಿರುತ್ತದೆ. ಇದು ಬರವಣಿಗೆಯ ವೇಗವನ್ನು ಹೆಚ್ಚಿಸುತ್ತದೆ.

ಅಕ್ಷರಗಳನ್ನು ಸರಿಯಾಗಿ ಜೋಡಿಸಲು ಗೆರೆಗಳಿರುವ ಪೇಪರ್ ಅನ್ನು ಬಳಸಿ. ದಿನಕ್ಕೆ ಕನಿಷ್ಠ 15 ನಿಮಿಷಗಳ ಕಾಲ ಬರೆಯುವ ಅಭ್ಯಾಸವನ್ನು ರೂಢಿಸಿ. ಇದರಿಂದ ಮಕ್ಕಳು ಬಹುಬೇಗನೆ ಬರವಣಿಗೆ ಮೇಲೆ ಹಿಡಿತ ಸಾಧಿಸುತ್ತಾರೆ.

ಅಚ್ಚುಕಟ್ಟಾಗಿ ಬರೆಯುವ ವೇಗವನ್ನು ಹೆಚ್ಚಿಸುವ ಮೊದಲು ಪ್ರತಿಯೊಂದು ಅಕ್ಷರವನ್ನು ಸರಿಯಾಗಿ ಬರೆಯುವ ಅಭ್ಯಾಸ ಮಾಡಿಸಿ. ಉದಾಹರಣೆಗೆ ವರ್ಣಮಾಲೆಗಳನ್ನು ಸಮಾನ ಆಕಾರದಲ್ಲಿ ಅಂದರೆ ಒಂದೇ ಎತ್ತರ, ಅಂತರ ಮತ್ತು ದುಂಡಗೆ ಬರೆಯುವಂತೆ ನೋಡಿ. ವಿಶೇಷವಾಗಿ ಕರ್ಸಿವ್ ಅಥವಾ ಜೋಡನೆಯ ಬರವಣಿಗೆಯಲ್ಲಿ ಈ ಅಭ್ಯಾಸ ಮಾಡಿಸುವುದು ಒಳ್ಳೆಯದು.

ಪೆನ್ ಅಥವಾ ಪೆನ್ಸಿಲ್ ಅನ್ನು ಮೃದುವಾಗಿ ಹಿಡಿದುಕೊಳ್ಳಲು ಹೇಳಿ. ಪೆನ್ನು ಅಥವಾ ಪೆನ್ಸಿಲ್ ಅನ್ನು ಹೆಚ್ಚು ಗಟ್ಟಿಯಾಗಿ ಒತ್ತಿ ಹಿಡಿದು ಬರೆಯುವುದರಿಂದ ಬರವಣಿಗೆಯಲ್ಲಿ ಗೊಂದಲವಾಗುತ್ತದೆ ಮತ್ತು ಇದರಿಂದ ಹೆಚ್ಚು ಆಯಾಸವಾಗುತ್ತದೆ.

ಕೈ ಬರಹವನ್ನು ಉತ್ತಮಗೊಳಿಸಲು ಸಿಗುವ ಪುಸ್ತಕಗಳನ್ನು ಮಕ್ಕಳಿಗೆ ಕೊಡಿ. ಇದರಲ್ಲಿ ಅವರು ಅಭ್ಯಾಸ ಮಾಡುವುದರಿಂದ ಕೈ ಬರಹವನ್ನು ಸುಧಾರಿಸಬಹುದು. ಅಕ್ಷರಗಳ ನಡುವಿನ ಅಂತರ ಸಮಸ್ಯೆಗಳನ್ನು ಗುರುತಿಸಿ. ಇದರಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಪ್ರೇರೇಪಿಸಲು ಮತ್ತೆ ಮತ್ತೆ ಬರೆಸಿ.