Road Accident: ನಿಲ್ಲುತ್ತಿಲ್ಲ ಮಾರಣಹೋಮ; ಕಳೆದೊಂದು ತಿಂಗಳಲ್ಲಿ ಡೆಡ್ಲಿ ಆಕ್ಸಿಡೆಂಟ್ಸ್‌ಗೆ ಬಲಿಯಾದವರೆಷ್ಟು?
Deadly Accident:ರಾಜ್ಯವೂ ಸೇರಿದಂತೆ ದೇಶಾದ್ಯಂತ ರಸ್ತೆ ಅಪಘಾತಗಳ ಮಾರಣಹೋಮ ನಿಲ್ಲುತ್ತಲೇ ಮುಂದುವರಿದೆ. ಕಳೆದೊಂದು ತಿಂಗಳಲ್ಲಂತೂ ನಿತ್ಯ ಭೀಕರ ಅಪಘಾತಗಳ ವರದಿ ಎಡೆಬಿಡದೆ ಕೇಳಿ ಬರುತ್ತಿವೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಂತೂ ರಸ್ತೆ ಗುಂಡಿಗಳ ಕಾರಣ ಅಥವಾ ಬಿಎಂಟಿಸಿ ಚಾಲಕ ಅಜಾಗೂರಕತೆ ಪರಿಣಾಮ ನಿತ್ಯ ಒಂದಿಲ್ಲೊಂದು ಜೀವ ಬಲಿಯಾಗುತ್ತಲೇ ಇವೆ. ಹಾಗಾದರೆ ದೇಶದಲ್ಲಿ ಕಳೆದೊಂದು ತಿಂಗಳಲ್ಲಿ ನಡೆದ ಡೆಡ್ಲಿ ಅಪಘಾತದ ಬಗ್ಗೆ ಸಂಪೂರ್ಣ ವರದಿ ಇಲ್ಲಿದೆ.
ತೆಲಂಗಾಣ ದುರಂತ
ಇಂದು ಬೆಳ್ಳಂ ಬೆಳಗ್ಗೆ ಜಲ್ಲಿ ತುಂಬಿದ್ದ ಟ್ರಕ್ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ(Road Accident). ದುರ್ಘಟನೆಯಲ್ಲಿ ಸುಮಾರು 24ಜನ ದಾರುಣವಾಗಿ ಸಾವನ್ನಪ್ಪಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ತೆಲಂಗಾಣದ ರಂಗರೆಡ್ಡಿ ಜಿಲ್ಲೆಯ ಚೆವೆಲ್ಲಾ ಬಳಿಯ ಮಿರ್ಜಗುಡದಲ್ಲಿ ಈ ದುರಂತ ಸಂಭವಿಸಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ರಾಜಸ್ಥಾನದಲ್ಲಿ ಘೋರ ದುರಂತ; ನಿಂತಿದ್ದ ಟ್ರಕ್‌ಗೆ ಟಿಟಿ ಡಿಕ್ಕಿ
ರಾಜಸ್ಥಾನದ ಫಲೋಡಿಯಲ್ಲಿ ನಿನ್ನೆ ನಿಂತಿದ್ದ ಟ್ರಕ್‌ಗೆ ಟಿಟಿ ಡಿಕ್ಕಿ ಹೊಡೆದು ಕನಿಷ್ಠ 15 ಮಂದಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದರು. ಮೃತರು ಬಿಕಾನೇರ್‌ನ ಕೊಲಾಯತ್ ದೇವಸ್ಥಾನಕ್ಕೆ ಭೇಟಿ ನೀಡಿ ಜೋಧ್‌ಪುರದ ಸುರ್‌ಸಾಗರ್‌ಗೆ ಹಿಂತಿರುಗುತ್ತಿದ್ದ ಭಕ್ತರು ಎನ್ನಲಾಗಿದೆ. ಈ ದುಃಖದ ಸಮಯದಲ್ಲಿ ಸರ್ಕಾರ ಸಂತ್ರಸ್ತರ ಸಹಾಯಕ್ಕೆ ಧಾವಿಸಲಿದೆ ಎಂದು ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಹೇಳಿದ್ದಾರೆ. ರಾಜಸ್ಥಾನದ ರಾಜಧಾನಿ ಜೈಪುರದಿಂದ 400 ಕಿ.ಮೀ. ದೂರದಲ್ಲಿರುವ ಫಲೋಡಿಯಲ್ಲಿ ಈ ಅವಘಡ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಬಸ್‌ನಲ್ಲಿದ್ದ ಎಲ್ಲ ಭಕ್ತರು ಜೋಧಪುರದ ಸುರಸಾಗರ್ ವಲಯದ ನಿವಾಸಿಗಳು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಕರ್ನೂಲ್ ಬಸ್ ದುರಂತ
ಅ.23ರಂದು ಆಂಧ್ರ ಪ್ರದೇಶದ ಕರ್ನೂಲ್‌ನಲ್ಲಿ ನಡೆದ ಭೀಕರ ಬಸ್ ಅಪಘಾತ (Kurnool Bus tragedy)ಸಂಭವಿಸಿತ್ತು. ಹೈದರಾಬಾದ್‌ನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಕಾವೇರಿ ಖಾಸಗಿ ಟ್ರಾವೆಲ್ಸ್ ಬಸ್ ಉಳಿಂದಕೊಂಡ ಬಳಿ ಬೈಕ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ಬಸ್ ಕ್ಷಣಾರ್ಧದಲ್ಲಿ ಸಂಪೂರ್ಣವಾಗಿ ಸುಟ್ಟುಹೋಗಿದೆ. ಬಸ್ಸಿನಲ್ಲಿ ಒಟ್ಟು 44 ಪ್ರಯಾಣಿಕರಿದ್ದರು. ಅವರಲ್ಲಿ 12 ಮಂದಿ ಕೆಳಗೆ ಹಾರಿ ಬದುಕುಳಿದಿದ್ದಾರೆ ಎಂದು ವರದಿಯಾಗಿದೆ. 20 ಮಂದಿ ಸ್ಥಳದಲ್ಲೇ ದಹಿಸಿಹೋದರೆ, ಇತರರು ತೀವ್ರ ಸುಟ್ಟು ಗಾಯಗೊಂಡಿದ್ದರು. ಇನ್ನು ಈ ದುರ್ಘಟನೆಯಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಸಾಫ್ಟ್‌ವೇರ್ ಎಂಜಿನಿಯರ್‌ಗಳು ಕೂಡ ಮೃತಪಟ್ಟಿದ್ದರು.
ಶಾಲಾ ವಾಹನಕ್ಕೆ ಬೈಕ್ ಡಿಕ್ಕಿ
ಕಳೆದ ತಿಂಗಳು ಚಿಕ್ಕ ಬಳ್ಳಾಪುರದಲ್ಲೂ ಭೀಕರ ಅಪಘಾತವೊಂದು ಸಂಭವಿಸಿತ್ತು. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಬುರುಡುಗುಂಟೆ ಬಳಿ ಈ ದುರ್ಘಟನೆ ಸಂಭವಿಸಿದೆ. ಮದುವೆಗೆಂದು ತಲಕಾಯಲಬೆಟ್ಟಕ್ಕೆ ತೆರಳುತ್ತಿದ್ದ ಬೈಕ್ ಹಾಗೂ ಖಾಸಗಿ ಶಾಲಾ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಘಟನೆಯಲ್ಲಿ ಬೈಕ್ನಲ್ಲಿದ್ದ ಇಬ್ಬರು ಪುರುಷರು ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಬಾಲಾಜಿ(34), ವೆಂಕಟೇಶಪ್ಪ(50), ಹರೀಶ್(12), ಆರ್ಯ(3) ಮೃತರು. ಇನ್ನು ಘಟನೆಯಲ್ಲಿ ಮತ್ತೊಂದು ಮಗುವಿಗೆ ಗಂಭೀರ ಗಾಯಗಳಾಗಿತ್ತು. ಮದುವೆಯಲ್ಲಿ ಭಾಗಿಯಾಗಲು ಬೈಕ್‌ನಲ್ಲಿ ಇಬ್ಬರು ಪುರುಷರು ಮೂರು ಮಕ್ಕಳೊಂದಿಗೆ ತೆರಳುತ್ತಿದ್ದರು. ಈ ವೇಳೆ ಇನ್ನೊಂದೆಡೆ ಎದುರುಗಡೆ ಬಂದ ಖಾಸಗಿ ಶಾಲಾ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿತ್ತು.
ಧಗ ಧಗಿಸಿದ ಬಸ್; ಪ್ರಯಾಣಿಕರು ಸಜೀವ ದಹನ
ರಾಜಸ್ಥಾನದ ಜೈಸಲ್ಮೇರ್ ಮತ್ತು ಜೋಧ್‌ಪುರ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್ ಬೆಂಕಿಗಾಹುತಿಯಾಗಿ 20 ಮಂದಿ ಮೃತಪಟ್ಟ ಧಾರುಣ ಘಟನೆ ಅಕ್ಟೋಬರ್ 14ರಂದು ನಡೆದಿದೆ. ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಈ ದುರಂತ ಸಂಭವಿಸಿದೆ. ಈ ಬಸ್‌ನಲ್ಲಿ ಒಟ್ಟು 57 ಮಂದಿ ಪ್ರಯಾಣಿಕರಿದ್ದರು.