Flamingoes: ಮನಮೋಹಕ ಫ್ಲೆಮಿಂಗೊ ನೋಡಲು ಭಾರತದ ಈ ತಾಣಗಳಿಗೆ ಭೇಟಿ ನೀಡಿ
ನೀವು ಪಕ್ಷಿ ಪ್ರೇಮಿಗಳಾ? ವಿಭಿನ್ನ ಬಗೆಯ ಪಕ್ಷಿಗಳನ್ನು ನೋಡಬೇಕು, ಅವುಗಳ ದನಿಯನ್ನು ಕೇಳಬೇಕು ಅಂದುಕೊಳ್ಳುವವರಾ? ಅಂತಹ ಮಂದಿ ನೋಡಲೇಬೇಕಿರುವ ಪಕ್ಷಿಗಳ ಪೈಕಿ ಫ್ಲೆಮಿಂಗೊ ಪ್ರಮುಖವಾದುದು. ವಿಭಿನ್ನವಾದ ಮೈಬಣ್ಣದ ಮೂಲಕವೇ ಪಕ್ಷಿ ಪ್ರೇಮಿಗಳನ್ನು ಸೆಳೆಯುವ ಫ್ಲೆಮಿಂಗೊಗಳು (Flamingoes) ಅಮೆರಿಕ ಮೂಲದವು. ನಂತರ ಜಗತ್ತಿನ ಇತರ ಭಾಗಗಳಿಗೆ, ವಿಶೇಷವಾಗಿ ಆಫ್ರಿಕಾ ಮತ್ತು ಯುರೇಷಿಯಾಕ್ಕೆ ಹರಡಿಕೊಂಡಿವೆ. ಆದರೆ ಫ್ಲೆಮಿಂಗೊಗಳನ್ನು ನೋಡುವುದಕ್ಕೆ ವಿದೇಶಗಳಿಗೆ ತೆರಳಬೇಕಾ? ಭಾರತದಲ್ಲಿ ಫ್ಲೆಮಿಂಗೊಗಳು ಕಾಣಸಿಗುವುದಿಲ್ಲವೇ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದ್ದರೆ ಇಲ್ಲಿದೆ ಉತ್ತರ. ಇತರ ಭಾಗಗಳಿಗೆ, ವಿಶೇಷವಾಗಿ ಆಫ್ರಿಕಾ ಮತ್ತು ಯುರೇಷಿಯಾಕ್ಕೆ ಹರಡಿಕೊಂಡಿವೆ. ಆದರೆ ಫ್ಲೆಮಿಂಗೊಗಳನ್ನು ನೋಡುವುದಕ್ಕೆ ವಿದೇಶಗಳಿಗೆ ತೆರಳಬೇಕಾ? ಭಾರತದಲ್ಲಿ ಫ್ಲೆಮಿಂಗೊಗಳು ಕಾಣಸಿಗುವುದಿಲ್ಲವೇ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದ್ದರೆ, ಭಾರತದ ಅನೇಕ ಕಡೆಗಳಲ್ಲಿ ಇದಕ್ಕೆ ಅವಕಾಶವಿದೆ. ಅವು ಪ್ರತಿ ಚಳಿಗಾಲ ಮತ್ತು ಬೇಸಗೆಯ ಆರಂಭದಲ್ಲಿ ಭಾರತದ ಸರೋವರಗಳು, ಕರಾವಳಿಗಳಿಗೆ ಹಿಂಡು ಹಿಂಡಾಗಿ ಬರುತ್ತವೆ. ರಾನ್ ಆಫ್ ಕಛ್ನ ಮರುಭೂಮಿಯಿಂದ ತೊಡಗಿ ಮುಂಬೈಯ ಹಲವೆಡೆಗಳಲ್ಲಿ ಫ್ಲೆಮಿಂಗೊ ಕಾಣಸಿಗುತ್ತವೆ.

ಫ್ಲೆಮಿಂಗೊಗಳು.


ಥೋಲ್ ಸರೋವರ, ಗುಜರಾತ್
ಗುಜರಾತ್ನ ಅಹಮದಾಬಾದ್ನಿಂದ ಸ್ವಲ್ಪ ದೂರದಲ್ಲಿರುವ ಥೋಲ್ ಸರೋವರವು ಪಕ್ಷಿ ಪ್ರೇಮಿಗಳ ನೆಚ್ಚಿನ ತಾಣ. ಈ ಸಿಹಿನೀರಿನ ಸರೋವರವು ಜೌಗು ಪ್ರದೇಶಗಳು ಮತ್ತು ಕೃಷಿಭೂಮಿಗಳಿಂದ ಆವೃತವಾಗಿದ್ದು, ಫ್ಲೆಮಿಂಗೊಗಳ ಆಹಾರ ಹುಡುಕಲು ಹಾಗೂ ನೆಲೆ ಕಂಡುಕೊಳ್ಳಲು ಸೂಕ್ತ ಸ್ಥಳವೆನ್ನಿಸಿದೆ.
ಭೇಟಿ ನೀಡಲು ಉತ್ತಮ ಸಮಯ: ನವೆಂಬರ್ನಿಂದ ಫೆಬ್ರವರಿ.
ಹತ್ತಿರದ ನಗರ: ಅಹಮದಾಬಾದ್ (25 ಕಿ.ಮೀ.)

ಕಛ್, ಗುಜರಾತ್
ದಕ್ಷಿಣ ಏಷ್ಯಾದಲ್ಲಿ ಫ್ಲೆಮಿಂಗೊಗಳ ಸಂತಾನೋತ್ಪತ್ತಿಗೆ ಸೂಕ್ತವಾಗಿರುವ ಏಕೈಕ ಸ್ಥಳ ಗುಜರಾತ್ನ ಕಛ್. ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಫ್ಲೆಮಿಂಗೊಗಳು ಕಾಣಸಿಗುವುದರಿಂದ ಈ ಪ್ರದೇಶವನ್ನು 'ಫ್ಲೆಮಿಂಗೊ ನಗರ' ಎಂದೂ ಕರೆಯುತ್ತಾರೆ. ಸ್ಥಳೀಯ ಮಾರ್ಗದರ್ಶಿಗಳು ಇಲ್ಲದೆ ಅಲ್ಲಿಗೆ ಹೋಗುವುದು ಅಷ್ಟು ಸುಲಭವಲ್ಲ.
ಭೇಟಿ ನೀಡಲು ಉತ್ತಮ ಸಮಯ: ಅಕ್ಟೋಬರ್ನಿಂದ ಮಾರ್ಚ್.
ಹತ್ತಿರದ ನಗರ: ಭುಜ್.

ಸೇವ್ರಿ ಮಡ್ಫ್ಲಾಟ್ಸ್, ಮುಂಬೈ
ಮೆಟ್ರೋ ಪಾಲಿಟನ್ ಸಿಟಿಯಾಗಿರುವ ಮುಂಬೈಯಲ್ಲಿ ಬಹುಮಹಡಿಯ ಕಟ್ಟಡಗಳು ವಾಹನ ದಟ್ಟಣೆಯೇ ಹೆಚ್ಚಿರುವಾಗ ಫ್ಲೆಮಿಂಗೊಗಳು ಕಾಣಸಿಗುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಅಚ್ಚರಿಯಾದರೂ ನಿಜ. ಜನವರಿಯಲ್ಲಿ ಸೇವ್ರಿ ಮಡ್ಫ್ಲಾಟ್ಸ್ ಪ್ರದೇಶದಲ್ಲಿ ಫ್ಲೆಮಿಂಗೊಗಳ ಸಾಕಷ್ಟು ಸಂಖ್ಯೆಯಲ್ಲಿ ಕಾಣಸಿಗುತ್ತವೆ. ಅಲ್ಲದೆ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಇಲ್ಲಿ ಫ್ಲೆಮಿಂಗೊ ವೀಕ್ಷಣೆಗೆ ವಿಶೇಷ ವೇದಿಕೆಯನ್ನು ಕಲ್ಪಿಸಿಕೊಡುತ್ತದೆ.
ಭೇಟಿ ನೀಡಲು ಉತ್ತಮ ಸಮಯ: ಜನವರಿಯಿಂದ ಮೇ.
ಹತ್ತಿರದ ನಗರ: ಸೆವ್ರಿ (ಹಾರ್ಬರ್ ಲೈನ್)

ಸಂಭಾರ್ ಸರೋವರ, ರಾಜಸ್ಥಾನ
ಭಾರತದ ಅತಿದೊಡ್ಡ ಉಪ್ಪುನೀರಿನ ಸರೋವರ ಸಂಭಾರ್ ಸರೋವರವು ರಾಜಸ್ಥಾನ ರಾಜಧಾನಿ ಜೈಪುರದಿಂದ ಕೇವಲ ಒಂದೆರಡು ಗಂಟೆಗಳ ದೂರದಲ್ಲಿದೆ. ಇದು ಚಳಿಗಾಲದಲ್ಲಿ ಫ್ಲೆಮಿಂಗೊಗಳ ತಾಣವಾಗಿಬಿಟ್ಟಿರುತ್ತದೆ. ಸರೋವರದಲ್ಲಿ ಲವಣಾಂಶವು ಹೆಚ್ಚಾಗಿ ಪಾಚಿ ತುಂಬಿಕೊಂಡಿರುವ ಸ್ಥಿತಿಯು ಫ್ಲೆಮಿಂಗೊಗಳಿಗೆ ನೆಚ್ಚಿನ ಪರಿಸರವನ್ನು ಒದಗಿಸುತ್ತಿದೆ.
ಭೇಟಿ ನೀಡಲು ಉತ್ತಮ ಸಮಯ: ನವೆಂಬರ್ನಿಂದ ಫೆಬ್ರವರಿ.
ಹತ್ತಿರದ ನಗರ: ಜೈಪುರ.

ಪುಲಿಕಾಟ್ ಸರೋವರ, ತಮಿಳುನಾಡು-ಆಂಧ್ರಪ್ರದೇಶ ಗಡಿ
ಪುಲಿಕಾಟ್ ಸರೋವರವು ಭಾರತದ ಎರಡನೇ ಅತಿದೊಡ್ಡ ಉಪ್ಪುನೀರಿನ ಸರೋವರವಾಗಿದ್ದು, ತಮಿಳುನಾಡು ಮತ್ತು ಆಂಧ್ರಪ್ರದೇಶದಾದ್ಯಂತ ವ್ಯಾಪಿಸಿದೆ. ಇಲ್ಲಿನ ಆಳವಿಲ್ಲದ ನೀರನ್ನು ಫ್ಲೆಮಿಂಗೊಗಳು ಇಷ್ಟಪಡುತ್ತವೆ. ಆಂಧ್ರ ಪ್ರದೇಶ ಸರ್ಕಾರವು ಪ್ರತಿ ವರ್ಷವೂ ಇಲ್ಲಿ ಫ್ಲೆಮಿಂಗೊ ಉತ್ಸವವನ್ನು ಆಯೋಜಿಸುತ್ತದೆ. ಇದು ಪಕ್ಷಿಪ್ರಿಯರು ಹಾಗೂ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಭೇಟಿ ನೀಡಲು ಉತ್ತಮ ಸಮಯ: ಅಕ್ಟೋಬರ್ನಿಂದ ಮಾರ್ಚ್.
ಹತ್ತಿರದ ನಗರ: ಚೆನ್ನೈ.

ಚಿಲಿಕಾ ಸರೋವರ, ಒಡಿಶಾ
ಭಾರತದ ಪೂರ್ವ ಕರಾವಳಿಯ ಒಡಿಶಾ ರಾಜ್ಯದ ಪುರಿ, ಖುರ್ದಾ ಮತ್ತು ಗಂಜಾಂ ಜಿಲ್ಲೆಗಳುದ್ದಕ್ಕೂ ಹರಡಿಕೊಂಡಿರುವ ಚಿಲಿಕಾ ಉಪ್ಪು ನೀರಿನ ಸರೋವರ. ಇದು ಭಾರತದಲ್ಲೇ ಅತ್ಯಂತ ದೊಡ್ಡ ಕರಾವಳಿಯ ನೀರಿನ ಪ್ರದೇಶವಾಗಿದೆ ಹಾಗೂ ವಿಶ್ವದಲ್ಲೇ ಎರಡನೆಯ ಅತಿ ವಿಶಾಲವಾದ ಜಲಾವೃತ ಪ್ರದೇಶ ಎನಿಸಿಕೊಂಡಿದೆ. ಈ ಪರಿಸರವು ಚಳಿಗಾಲದಲ್ಲಿ ವಲಸೆ ಬರುವ ಹಕ್ಕಿಗಳ ಆಶ್ರಯ ತಾಣ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫ್ಲೆಮಿಂಗೊಗಳು ಕಾಣಸಿಗುತ್ತವೆ.
ಭೇಟಿ ನೀಡಲು ಉತ್ತಮ ಸಮಯ: ನವೆಂಬರ್ನಿಂದ ಫೆಬ್ರವರಿ.
ಹತ್ತಿರದ ನಗರ: ಪುರಿ, ಭುವನೇಶ್ವರ.

ಭಿಗ್ವಾನ್, ಮಹಾರಾಷ್ಟ್ರ
ಮಹಾರಾಷ್ಟ್ರದ ಮಿನಿ ಭರತ್ಪುರ ಎಂದು ಕರೆಯಲ್ಪಡುವ ಭಿಗ್ವಾನ್ ಪುಣೆಯಿಂದ 100 ಕಿ.ಮೀ. ದೂರದಲ್ಲಿದೆ. ಅಲ್ಲದೆ ಇದು ಉಜನಿ ಅಣೆಕಟ್ಟಿನ ಹಿನ್ನೀರಿನಲ್ಲಿದೆ. ಪ್ರತಿ ವರ್ಷ ಫ್ಲೆಮಿಂಗೊಗಳು ಇತರ ವಲಸೆ ಹಕ್ಕಿಗಳೊಂದಿಗೆ ಇಲ್ಲಿಗೆ ಆಗಮಿಸುತ್ತವೆ. ಪಕ್ಷಿಪ್ರಿಯರು ಹಿನ್ನೀರಿನ ಮೂಲಕ ದೋಣಿ ವಿಹಾರವನ್ನು ಮಾಡುತ್ತಾ ಫ್ಲೆಮಿಂಗೊಗಳನ್ನು ಕಣ್ತುಂಬಿಕೊಳ್ಳಬಹುದು.
ಭೇಟಿ ನೀಡಲು ಉತ್ತಮ ಸಮಯ: ಡಿಸೆಂಬರ್ನಿಂದ ಮಾರ್ಚ್.
ಹತ್ತಿರದ ನಗರ: ಪುಣೆ.

ನಲ್ ಸರೋವರ ಪಕ್ಷಿಧಾಮ, ಗುಜರಾತ್
ಅಹಮದಾಬಾದ್ ಬಳಿ ಇರುವ ನಲ್ ಸರೋವರವು ಫ್ಲೆಮಿಂಗೊಗಳು, ಪೆಲಿಕನ್ಗಳು ಮತ್ತು 200ಕ್ಕೂ ಹೆಚ್ಚು ಜಾತಿಯ ಪಕ್ಷಿಗಳನ್ನು ಆಕರ್ಷಿಸುವ ವಿಸ್ತಾರವಾದ ಜೌಗು ಪ್ರದೇಶ. ಇದು ಶಾಂತ ಸ್ಥಳವಾಗಿದ್ದು, ಪಕ್ಷಿಗಳ ವೀಕ್ಷಣೆಗೆ ಮುಂಜಾನೆಯ ಸಮಯ ಸೂಕ್ತ.
ಭೇಟಿ ನೀಡಲು ಉತ್ತಮ ಸಮಯ: ನವೆಂಬರ್ನಿಂದ ಫೆಬ್ರವರಿ.
ಹತ್ತಿರದ ನಗರ: ಅಹಮದಾಬಾದ್.