ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vice President Election: ಸೆ. 9ರಂದು ಚುನಾವಣೆ: ಯಾರು ಆಗುವರು ಮುಂದಿನ ಉಪರಾಷ್ಟ್ರಪತಿ?

ದೇಶದ ಉಪರಾಷ್ಟ್ರಪತಿ ಹುದ್ದೆಯಿಂದ ಜಗದೀಪ್ ಧನಕರ್‌ ಅನಿರೀಕ್ಷಿತವಾಗಿ ನಿರ್ಗಮಿಸಿದ ಬಳಿಕ ಮುಂದಿನ ಉಪರಾಷ್ಟ್ರಪತಿ ಯಾರಾಗಬಹುದು ಎನ್ನುವ ಕುತೂಹಲ ಹೆಚ್ಚಾಗಿದೆ. ಉಪರಾಷ್ಟ್ರಪತಿ ಆಯ್ಕೆಗೆ ಸೆಪ್ಟೆಂಬರ್ 9ರಂದು ಚುನಾವಣೆ ನಡೆಯಲಿದ್ದು, ಬಿಜೆಪಿಯ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಯಾರಿದ್ದಾರೆ ಎನ್ನುವ ಕುರಿತು ಕಿರುನೋಟ ಇಲ್ಲಿದೆ.

ನವದೆಹಲಿ: ಉಪರಾಷ್ಟ್ರಪತಿ (Vice President ) ಆಯ್ಕೆಗೆ ಕೆಲವು ವಾರಗಳಷ್ಟೇ ಬಾಕಿ ಇದೆ. ಹೀಗಿರುವಾಗ ಮುಂದಿನ ಉಪರಾಷ್ಟ್ರಪತಿ (Vice President Election) ಯಾರಾಗಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಬಿಜೆಪಿ (Bharatiya Janata Party) ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಲು ಪೂರ್ಣ ಪ್ರಮಾಣದ ಕಾರ್ಯ ಪ್ರಾರಂಭಿಸಿದೆ. ಹಲವಾರು ಹೆಸರು ಕೇಳಿ ಬರುತ್ತಿದ್ದರೂ ಇವರಲ್ಲಿ ಯಾರು ರಾಜಕೀಯ ನಾಯಕರ ಮನ ಗೆಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಈಗಾಗಲೇ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ, ಬಿಹಾರ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿವೆ.

ಕಳೆದ ಜುಲೈ 21ರಂದು ಆರೋಗ್ಯ ಕಾರಣಗಳನ್ನು ಉಲ್ಲೇಖಿಸಿ ಜಗದೀಪ್ ಧನಕರ್‌ ಉಪರಾಷ್ಟ್ರಪತಿ ಹುದ್ದೆಗೆ ಅನಿರೀಕ್ಷಿತವಾಗಿ ರಾಜೀನಾಮೆ ನೀಡಿದ್ದರು. ಆದರೆ ಇದು ಅಸಮಾಧಾನದ ಬಗ್ಗೆ ಸುಳಿವು ಕೊಟ್ಟಿತ್ತು. ಇವರ ಅಧಿಕಾರಾವಧಿ 2027ರ ಆಗಸ್ಟ್‌ನಲ್ಲಿ ಕೊನೆಯಾಗುವುದರಲ್ಲಿತ್ತು. ಧನಕರ್‌ ಅವರ ನಿರ್ಗಮನದ ಬಳಿಕ ಬಿಜೆಪಿ ಎಚ್ಚರಿಕೆಯ ಹೆಜ್ಜೆ ಇಡಲು ಬಯಸಿದೆ.

ಸೆಪ್ಟೆಂಬರ್ 9ರಂದು ನಡೆಯಲಿರುವ ಚುನಾವಣೆಯ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್, ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಕ್ಕಿಂ ರಾಜ್ಯಪಾಲ ಓಂ ಮಾಥುರ್ ಮತ್ತು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೆಸರು ಕೂಡ ಇದೆ. ಇದಲ್ಲದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಿದ್ಧಾಂತಿ ಶೇಷಾದ್ರಿ ಚಾರಿ ಅವರ ಹೆಸರು ಕೂಡ ಕೇಳಿ ಬರುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇನ್ನು ಮುಂಬರುವ ಬಿಹಾರ ಚುನಾವಣೆಗಳನ್ನು ಪರಿಗಣಿಸಿ ಪ್ರಸ್ತುತ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ಅವರನ್ನು ನಾಮನಿರ್ದೇಶಿತ ಎಂದು ಪರಿಗಣಿಸಲಾಗುತ್ತಿದೆ. ಮುಂದಿನ ಉಪರಾಷ್ಟ್ರಪತಿ ತಮ್ಮ ಪಕ್ಷದ ಮತ್ತು ಆರ್‌ಎಸ್‌ಎಸ್‌ನ ಸಿದ್ಧಾಂತದೊಂದಿಗೆ ಬಲವಾಗಿ ಸಂಬಂಧ ಹೊಂದಿರುವ ಯಾರಾದರೂ ಆಗಿರುತ್ತಾರೆ ಎಂದು ಈಗಾಗಲೇ ಬಿಜೆಪಿ ನಾಯಕರು ಸ್ಪಷ್ಟಪಡಿಸಿದ್ದಾರೆ.

ಉಪರಾಷ್ಟ್ರಪತಿ ಚುನಾವಣೆ ಸಂಬಂಧವಾಗಿ ಕಳೆದ ಒಂದು ತಿಂಗಳಲ್ಲಿ ಹಲವಾರು ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದಾರೆ. ಅಭ್ಯರ್ಥಿಯ ಆಯ್ಕೆಗೆ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಅಧಿಕಾರ ನೀಡಿದೆ. ಆದರೂ ಶೀಘ್ರದಲ್ಲೇ ಬಿಜೆಪಿಯ ಉನ್ನತ ನಾಯಕರು ಮತ್ತು ಮಿತ್ರಪಕ್ಷಗಳ ನಾಯಕರ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Stock Market: 1 ವರ್ಷದಲ್ಲಿ ಶೇ. 30ಕ್ಕೂ ಹೆಚ್ಚು ಲಾಭ ನೀಡಿದ ಮ್ಯೂಚುವಲ್‌ ಫಂಡ್ಸ್ ಯಾವುದು?

ಯಾರು ಆಯ್ಕೆ ಮಾಡುತ್ತಾರೆ?

ಮೇಲ್ಮನೆಯ ನಾಮನಿರ್ದೇಶಿತ ಸದಸ್ಯರನ್ನು ಒಳಗೊಂಡಂತೆ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ದೇಶದ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ.

ಅರ್ಹತೆ ಏನು?

ಭಾರತದ ನಾಗರಿಕರಾಗಿರಬೇಕು, 35 ವರ್ಷ ಪೂರ್ಣವಾಗಿರಬೇಕು, ರಾಜ್ಯಸಭೆಯ ಸದಸ್ಯರಾಗಿ ಚುನಾವಣೆಗೆ ಅರ್ಹತೆ ಪಡೆದಿರಬೇಕು. ಭಾರತ ಸರ್ಕಾರ ಅಥವಾ ರಾಜ್ಯ ಸರ್ಕಾರ ಅಥವಾ ಯಾವುದೇ ಅಧೀನ ಸ್ಥಳೀಯ ಪ್ರಾಧಿಕಾರದ ಅಡಿಯಲ್ಲಿ ಲಾಭದಾಯಕ ಹುದ್ದೆಯನ್ನು ಹೊಂದಿರಬಾರದು.

ವಿದ್ಯಾ ಇರ್ವತ್ತೂರು

View all posts by this author