ಪಟನಾ: ವಿಧಾನ ಸಭಾ ಚುನಾವಣೆಗೂ (Bihar assembly elections) ಮುನ್ನವೇ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ( Chief Minister Nitish Kumar) ಅವರು ಚುನಾವಣೆಗೂ ಮುನ್ನ ಪತ್ರಕರ್ತರ ಪಿಂಚಣಿಯನ್ನು ರೂ. 15,000 ಕ್ಕೆ ಹೆಚ್ಚಿಸಿದ್ದಾರೆ. ಬಿಹಾರ ವಿಧಾನ ಸಭಾ ಚುನಾವಣೆಯು ಮುಂದಿನ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ನಡೆಯುವ ಸಾಧ್ಯತೆ ಇದೆ. ಇದಕ್ಕೂ ಮೊದಲೇ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಶನಿವಾರ 'ಬಿಹಾರ ಪತ್ರಕಾರ್ ಸಮ್ಮಾನ್ ಪಿಂಚಣಿ ಯೋಜನೆ' ( Bihar Patrakaar Samman Pension Scheme) ಅಡಿಯಲ್ಲಿ ಪತ್ರಕರ್ತರ ಪಿಂಚಣಿಯನ್ನು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮವಾದ ಎಕ್ಸ್ ನಲ್ಲಿ ಟ್ವಿಟ್ ಮಾಡಿರುವ ನಿತೀಶ್ ಕುಮಾರ್, 'ಬಿಹಾರ ಪತ್ರಕಾರ್ ಸಮ್ಮಾನ್ ಪಿಂಚಣಿ ಯೋಜನೆ'ಯಡಿಯಲ್ಲಿ ಎಲ್ಲಾ ಅರ್ಹ ಪತ್ರಕರ್ತರು ಮತ್ತು ಅವರ ಸಂಗಾತಿಗಳಿಗೆ ಮಾಸಿಕ ಪಿಂಚಣಿ ಪ್ರಯೋಜನಗಳಲ್ಲಿ ಹೆಚ್ಚಳ ಮಾಡಲು ಸಂಬಂಧ ಪಟ್ಟ ಇಲಾಖೆಗೆ ಸೂಚಿಸಲಾಗಿದೆ. ಎಲ್ಲಾ ಅರ್ಹ ಪತ್ರಕರ್ತರಿಗೆ ಮಾಸಿಕ ಪಿಂಚಣಿ ಮೊತ್ತವನ್ನು 6,000 ರೂ. ನಿಂದ 15,000 ರೂ. ಗೆ ಹೆಚ್ಚಿಸಲು ತಿಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
'ಬಿಹಾರ ಪತ್ರಕಾರ್ ಸಮ್ಮಾನ್ ಪಿಂಚಣಿ ಯೋಜನೆ'ಯಡಿಯಲ್ಲಿ ಪಿಂಚಣಿ ಪಡೆಯುವ ಪತ್ರಕರ್ತರು ಸಾವನ್ನಪ್ಪಿದರೆ ಅವರ ಅವಲಂಬಿತ ಸಂಗಾತಿಗೆ ಅವರ ಜೀವಿತಾವಧಿಯಲ್ಲಿ 3,000 ರೂ. ಗಳ ಬದಲಿಗೆ 10,000 ರೂ. ಗಳ ಮಾಸಿಕ ಪಿಂಚಣಿ ನೀಡಲು ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾಪ್ರಭುತ್ವ ಸಮಾಜದಲ್ಲಿ ಪತ್ರಕರ್ತರ ಮಹತ್ವದ ಬಗ್ಗೆಯೂ ಈ ಪೋಸ್ಟ್ ನಲ್ಲಿ ಉಲ್ಲೇಖಿಸಿರುವ ಅವರು, ಪತ್ರಕರ್ತರು ಪ್ರಜಾಪ್ರಭುತ್ವದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಅವರು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವನ್ನು ಹೊಂದಿದ್ದಾರೆ. ಅವರು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಲು ಮತ್ತು ನಿವೃತ್ತಿಯ ಅನಂತರ ಘನತೆಯಿಂದ ಜೀವನ ನಡೆಸಲು ಅವರಿಗೆ ಅಗತ್ಯ ಸೌಲಭ್ಯ ಸಿಗುವಂತೆ ನಾವು ನೋಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಬಿಹಾರ ವಿಧಾನ ಸಭಾ ಚುನಾವಣೆಯು ಮುಂದಿನ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ನಡೆಯಲಿದ್ದು, ಇನ್ನೂ ದಿನಾಂಕವನ್ನು ಚುನಾವಣಾ ಆಯೋಗವು ಘೋಷಿಸಿಲ್ಲ.
ಈ ಚುನಾವಣೆಯು ಆಡಳಿತಾರೂಢ ಎನ್ ಡಿಎ ಮತ್ತು ವಿರೋಧ ಪಕ್ಷ ಮಹಾಘಟಬಂಧನ್ ನಡುವಿನ ನೇರ ಪೈಪೋಟಿಯಾಗಿದೆ. ಬಿಹಾರದ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯಗಳು ತೀವ್ರಗೊಂಡಿದ್ದು, ಇದು ಈಗ ದೊಡ್ಡ ವಿವಾದವನ್ನು ಹುಟ್ಟುಹಾಕಿದೆ. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂದರ್ಭದಲ್ಲಿ ಗಮನಾರ್ಹ ಪ್ರಮಾಣದ ಮತದಾರರನ್ನು ತೆಗೆದುಹಾಕಲಾಗುತ್ತಿದೆ ಎಂದು ಎನ್ ಡಿಎ ಆರೋಪಿಸಿದೆ.
ಇದನ್ನೂ ಓದಿ: Aaliyah Kashyap: ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಪುತ್ರಿಯ ಬಿಕಿನಿ ಲುಕ್ ಗೆ ಪಡ್ಡೆಹುಡುಗರು ಫುಲ್ ಫಿದಾ!
ಬಿಹಾರದ ಚುನಾವಣಾ ಆಯೋಗವು ರಾಜ್ಯದ ಶೇ. 99.8 ರಷ್ಟು ಮತದಾರರು ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವ್ಯಾಪ್ತಿಗೆ ಒಳಪಟ್ಟಿದ್ದಾರೆ ಎಂದು ಶುಕ್ರವಾರ ಘೋಷಿಸಿದೆ. 7.23 ಕೋಟಿಗೂ ಹೆಚ್ಚು ಮತದಾರರ ನಮೂನೆಗಳನ್ನು ಸ್ವೀಕರಿಸಲಾಗಿದೆ ಮತ್ತು ಡಿಜಿಟಲೀಕರಣಗೊಳಿಸಲಾಗಿದೆ ಎಂದು ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ತಿಳಿಸಿದ್ದಾರೆ.