Pralhad Joshi: ಆಹಾರ ಇಲಾಖೆ ಕಡತಗಳ ನಿರ್ವಹಣೆ, ಸ್ಥಳ ಸ್ವಚ್ಛತೆಗೆ ವಿಶೇಷ ಅಭಿಯಾನ: ಜೋಶಿ
Pralhad Joshi: ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಡತಗಳ ನಿರ್ವಹಣೆ ಮತ್ತು ಸ್ಥಳ ಸ್ವಚ್ಛತೆಗೆ ಪೂರಕವಾಗಿ ಅಕ್ಟೋಬರ್ ತಿಂಗಳಲ್ಲಿ ವಿಶೇಷ ಅಭಿಯಾನಕ್ಕೆ ಸಿದ್ಧತೆ ನಡೆಸಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ. -

ನವದೆಹಲಿ: ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಡತ ನಿರ್ವಹಣೆ ಮತ್ತು ಸ್ಥಳ ಸ್ವಚ್ಛತೆಗೆ ಪೂರಕವಾಗಿ ಅಕ್ಟೋಬರ್ ತಿಂಗಳಲ್ಲಿ ವಿಶೇಷ ಅಭಿಯಾನಕ್ಕೆ ಸಿದ್ಧತೆ ನಡೆಸಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತಿಳಿಸಿದ್ದಾರೆ. ಈಗಾಗಲೇ ನಾಲ್ಕು ಹಂತದ ವಿಶೇಷ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ಇದೀಗ ಅಕ್ಟೋಬರ್ 2 ರಿಂದ 31ರವರೆಗೆ 5ನೇ ಹಂತದ ಅಭಿಯಾನ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಇಲಾಖೆ ವಿವಿಧ ಚಟುವಟಿಕೆಗಳನ್ನು ಯೋಜಿಸಿದೆ ಎಂದು ಅವರು ತಿಳಿಸಿದ್ದಾರೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ವಿವಿಧ ಉಲ್ಲೇಖಗಳನ್ನು ಕೈಬಿಡುವುದು, ಉತ್ತಮ ದಾಖಲೆ ನಿರ್ವಹಣೆ, ಸ್ಥಳ ನಿರ್ವಹಣೆ, ಇ-ತ್ಯಾಜ್ಯ ಹಾಗೂ ಪ್ರಮುಖವಾಗಿ ಕಚೇರಿ ಆವರಣದ ಸ್ವಚ್ಛತೆ, ಸೌಂದರ್ಯೀಕರಣವನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಅಭಿಯಾನ ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ.
65,507 ಕಡತಗಳಿಗೆ ಮುಕ್ತಿ
2024ರ ಸೆಪ್ಟೆಂಬರ್‌ನಿಂದ 2025ರ ಆಗಸ್ಟ್‌ವರೆಗೆ ನಡೆದ ನಾಲ್ಕನೇ ಹಂತದ ಅಭಿಯಾನದಲ್ಲಿ ಒಟ್ಟು 65,507 ಕಡತಗಳನ್ನು ತೆಗೆದು ಹಾಕಲಾಗಿದೆ. 1,58,786 ಚದರ ಅಡಿ ಜಾಗವನ್ನು ಮುಕ್ತಗೊಳಿಸಿದ್ದು, ಈ ಮೂಲಕ ಒಟ್ಟು ₹45.12 ಲಕ್ಷ ಆದಾಯ ಸಹ ಗಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ | Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಸೆ.16,17 ರಂದು ವಿದ್ಯುತ್ ವ್ಯತ್ಯಯ
ಹಳೆಯ ಫೈಲ್‌ಗಳನ್ನು ತೆರವು, ಗುಜರಿ ವಸ್ತುಗಳ ಹರಾಜು ಮಾಡಿದ್ದಲ್ಲದೆ, ಬಳಕೆಯಾಗದೇ ಇದ್ದ 52,324 ಚದರ ಅಡಿ ಸ್ಥಳವನ್ನು ಸ್ವಚ್ಛಗೊಳಿಸಲಾಯಿತು. ಸ್ಕ್ರ್ಯಾಪ್ ವಸ್ತುಗಳ ವಿಲೇವಾರಿ ಮೂಲಕ ₹31.29 ಲಕ್ಷ ಆದಾಯ ಸಹ ಗಳಿಸಲಾಯಿತು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಸಂಸ್ಥೆ ಕಚೇರಿಗಳ ವಿವಿಧ ಸ್ಥಳಗಳಲ್ಲಿ 1827 ಸ್ವಚ್ಛತಾ ಅಭಿಯಾನಗಳನ್ನು ಸಹ ನಡೆಸಲಾಯಿತು. ಇದು ಸ್ವಚ್ಛ ಮತ್ತು ಪರಿಣಾಮಕಾರಿ ಕೆಲಸದ ಪರಿಸರ ನಿರ್ಮಿಸುವ ಬದ್ಧತೆಗೆ ಪೂರಕವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.