ನವದೆಹಲಿ: ಕೇಂದ್ರ ಸರ್ಕಾರವು (Central government) ಪ್ರಧಾನ ಮಂತ್ರಿ (Prime Minister), ಮುಖ್ಯಮಂತ್ರಿಗಳು (Chief ministers) ಸೇರಿದಂತೆ ರಾಜಕೀಯ ನಾಯಕರ ವಿರುದ್ದ ಗಂಭೀರ ಅಪರಾಧ ಪ್ರಕರಣಗಳಿಗೆ (Criminal cases) ಅಧಿಕಾರದಿಂದ ವಜಾ (Three bills in Parliament) ಮಾಡಬಹುದಾದ ಮಸೂದೆ ಮಂಡಿಸಿದ ಬೆನ್ನಲ್ಲೇ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (Association for Democratic report) ಮತ್ತು ರಾಷ್ಟ್ರೀಯ ಚುನಾವಣಾ ಕಾವಲು ಸಂಸ್ಥೆ ವರದಿಯೊಂದನ್ನು ಬಿಡುಗಡೆ ಮಾಡಿದೆ. ಈ ಮಾಹಿತಿಯ ಪ್ರಕಾರ ದೇಶದ ಒಟ್ಟು ಶೇ. 40ರಷ್ಟು ಮುಖ್ಯಮಂತ್ರಿಗಳು ಕ್ರಿಮಿನಲ್ ಪ್ರಕರಣಗಳ ಆರೋಪಿಗಳಾಗಿದ್ದು, 10 ಮಂದಿ ಗಂಭೀರ ಅಪರಾಧಗಳ ಆರೋಪವನ್ನು ಎದುರಿಸುತ್ತಿದ್ದಾರೆ.
ಪ್ರಸ್ತುತ ಅಧಿಕಾರದಲ್ಲಿರುವ ರಾಜ್ಯ ವಿಧಾನಸಭೆ ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 30 ಮುಖ್ಯಮಂತ್ರಿಗಳ ಸ್ವಯಂ ಪ್ರಮಾಣವಚನ ಸ್ವೀಕರಿಸಿದ ಅಫಿಡವಿಟ್‌ಗಳ ಮಾಹಿತಿಯನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ವಿಶ್ಲೇಷಿಸಿದೆ. ಇದರ ಪ್ರಕಾರ ದೇಶದ ಪ್ರತಿ ಹತ್ತು ಮುಖ್ಯಮಂತ್ರಿಗಳಲ್ಲಿ ನಾಲ್ವರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ ಎಂದು ಹೇಳಿದೆ.
ದೇಶದ ಒಟ್ಟು 30 ಮುಖ್ಯಮಂತ್ರಿಗಳಲ್ಲಿ 12 ಮುಖ್ಯಮಂತ್ರಿಗಳು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಶೇ. 33ರಷ್ಟು ಅಂದರೆ 10 ಮಂದಿ ಕೊಲೆಯತ್ನ, ಅಪಹರಣ, ಲಂಚ ಮತ್ತು ಕ್ರಿಮಿನಲ್ ಬೆದರಿಕೆಯಂತಹ ಗಂಭೀರ ಅಪರಾಧಗಳಲ್ಲಿ ಆರೋಪಿಗಳಾಗಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿರುದ್ಧ 89 ಪ್ರಕರಣಗಳಿದ್ದು, ಅಗ್ರಸ್ಥಾನದಲ್ಲಿದ್ದಾರೆ. ಅನಂತರ ಸ್ಥಾನದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇದ್ದು, ಇವರ ವಿರುದ್ಧ 47 ಪ್ರಕರಣಗಳಿವೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ 19 ಪ್ರಕರಣಗಳಿವೆ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ 13 ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ವಿರುದ್ಧ 5 ಪ್ರಕರಣಗಳು ದಾಖಲಾಗಿವೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ತಲಾ ನಾಲ್ಕು ಪ್ರಕರಣಗಳ ಆರೋಪಿಯಾಗಿದ್ದಾರೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಎರಡು ಮತ್ತು ಪಂಜಾಬ್‌ನ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ಒಂದು ಪ್ರಕರಣ ದಾಖಲಾಗಿದೆ.
ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಮತ್ತು ಸಚಿವರನ್ನು ವಜಾ ಮಾಡಬಹುದು ಎನ್ನುವ ಮಸೂದೆಯನ್ನು ಇತ್ತೀಚೆಗೆ ಕೇಂದ್ರ ಸರ್ಕಾರವು ಮಂಡಿಸಿದೆ. ಇದಕ್ಕೆ ವಿರೋಧ ಪಕ್ಷಗಳು ತೀವ್ರ ಟೀಕೆ ವ್ಯಕ್ತಪಡಿಸಿವೆ. ಈ ಮಸೂದೆಯ ಪ್ರಕಾರ ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಮತ್ತು ಸಚಿವರು ಕನಿಷ್ಠ ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಬಹುದಾದ ಆರೋಪಗಳನ್ನು ಹೊಂದಿದ್ದು, 30 ಅಥವಾ ಅದಕ್ಕಿಂತ ಹೆಚ್ಚು ದಿನಗಳ ಕಾಲ ಬಂಧನದಲ್ಲಿದ್ದರೆ ಅವರನ್ನು ವಜಾಗೊಳಿಸಬಹುದಾದ ಮೂರು ಮಸೂದೆಗಳನ್ನು ಮಂಡಿಸಿದೆ.
ಇದು ಬಿಜೆಪಿಯೇತರ ಆಡಳಿತದ ರಾಜ್ಯಗಳನ್ನು ಅಸ್ಥಿರಗೊಳಿಸುವ ಪ್ರಯತ್ನ ಎಂದು ವಿಪಕ್ಷಗಳು ಟೀಕಿಸಿವೆ.
ಇದನ್ನೂ ಓದಿ: Dharmasthala case: ನದಿಯಲ್ಲಿ ಹೆಣಗಳಿಂದ ಚಿನ್ನ ಕದಿಯುತ್ತಿದ್ದ ʻಚಿನ್ನಯ್ಯʼ; ಮುಸುಕುಧಾರಿಯ ಮುಖವಾಡ ಬಯಲು!
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ, ಚುನಾವಣೆಯಲ್ಲಿ ಸೋಲಿಸಲು ಸಾಧ್ಯವಾಗದಿರುವಾಗ ಅನಿಯಂತ್ರಿತ ಬಂಧನಗಳ ಮೂಲಕ ಅವರನ್ನು ತೆಗೆದುಹಾಕುವುದು ಕೇಂದ್ರ ಸರ್ಕಾರದ ಗುರಿಯಾಗಿದೆ ಎಂದು ಹೇಳಿದ್ದಾರೆ.