ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

V Sunil Kumar: ಆರೆಸ್ಸೆಸ್ ಪ್ರಾರ್ಥನೆ ಹೇಳಿದ್ದಕ್ಕೆ ಡಿ.ಕೆ.ಶಿವಕುಮಾರ್ ಕ್ಷಮೆ ಕೇಳಬೇಕಿರಲಿಲ್ಲ- ವಿ.ಸುನೀಲ್‍ ಕುಮಾರ್

V Sunil Kumar: ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಹೇಳಿದ್ದಕ್ಕೆ ಡಿ.ಕೆ.ಶಿವಕುಮಾರ್ ಅವರು ಕ್ಷಮೆ ಕೇಳಬೇಕಿತ್ತು. ಜಾರಕಿಹೊಳಿ ಅವರು ಹಿಂದೂ ಶಬ್ದ ಅಶ್ಲೀಲ ಎಂದುದಕ್ಕೆ ಕ್ಷಮೆ ಕೇಳಬೇಕಿತ್ತು. ಆರೆಸ್ಸೆಸ್ ಪ್ರಾರ್ಥನೆ ಹೇಳಿದ್ದಕ್ಕೆ ಕ್ಷಮೆ ಕೇಳಬೇಕಿರಲಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ವಿ. ಸುನೀಲ್ ಕುಮಾರ್ ಹೇಳಿದ್ದಾರೆ.

ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಜಾತಿ ಮತ್ತು ಉಪಜಾತಿಗಳ ಪಟ್ಟಿಗೆ ಸಂಬಂಧಿಸಿ 7 ದಿನಗಳ ಒಳಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿದೆ. ಹಬ್ಬ, ಹರಿದಿನಗಳು ಇರುವ ಕಾರಣ, ಸರ್ಕಾರಿ ರಜೆಗಳು ನಿರಂತರವಾಗಿ ಇರುವ ಕಾರಣಕ್ಕೆ ಈ 7 ದಿನಗಳ ಕಾಲಾವಕಾಶವನ್ನು ಇನ್ನಷ್ಟು ವಿಸ್ತರಿಸಲು ಮನವಿ ಮಾಡಿದ್ದೇವೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ವಿ. ಸುನೀಲ್ ಕುಮಾರ್ (V Sunil Kumar) ತಿಳಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಂಗಳವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಆಕ್ಷೇಪಣೆ ಸಲ್ಲಿಸಲು ಇನ್ನೂ ಹೆಚ್ಚುವರಿಯಾಗಿ 10 ದಿನಗಳ ಕಾಲಾವಕಾಶ ಕೊಡಲು ಬಿಜೆಪಿ ಕಡೆಯಿಂದ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದಿದ್ದೇವೆ ಎಂದು ಹೇಳಿದರು.

ಇಂದು ಪ್ರಮುಖರ ಸಭೆ ನಡೆಸಲಾಗಿದೆ. 1,400 ಜಾತಿ ಪಟ್ಟಿ ಅವಲೋಕಿಸಿದಾಗ ಯಥಾಪ್ರಕಾರ ಮುಸ್ಲಿಮರು ಮತ್ತು ಮುಸ್ಲಿಂ ಉಪ ಜಾತಿಗಳನ್ನು ಪಟ್ಟಿಯಲ್ಲಿ ಕೈಬಿಟ್ಟಿದ್ದಾರೆ. ಹಿಂದೆ ಜಯಪ್ರಕಾಶ್ ಹೆಗ್ಡೆಯವರು 90 ಜಾತಿಗಳು ಮುಸಲ್ಮಾನರಲ್ಲಿ ಇವೆ ಎಂದು ಪ್ರಕಟಿಸಿದ್ದರು. ಆಯೋಗವು 1,400 ಜಾತಿಗಳ ಪಟ್ಟಿ ಮಾಡುವಾಗ ಇದನ್ನು ಯಾಕೆ ಬಿಟ್ಟಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ದೂರಿದರು.

ಜಾತಿಯ ಪಟ್ಟಿ, ಮಾನದಂಡ ಬಳಕೆ ಮೊದಲಾದ ಹಲವು ರೀತಿಯ ಗೊಂದಲಗಳಿವೆ. ಅವು ಅಧ್ಯಕ್ಷರ ಪತ್ರಿಕಾ ಹೇಳಿಕೆ ಮೂಲಕ ಗೊತ್ತಾಗಿದೆ. ಮುಂದಿನ ವಾರ ಬಿಜೆಪಿ ನಿಯೋಗವು ಆಯೋಗಕ್ಕೆ ಭೇಟಿ ಕೊಡಲಿದೆ. ನಮಗಿರುವ ಅನುಮಾನಗಳು, ಸಮೀಕ್ಷೆ ಯಾವ ರೀತಿ ನಡೆಯಬೇಕೆಂಬ ಕುರಿತು ವಿವರಗಳನ್ನು ತಿಳಿಸಲು ಇಂದಿನ ಸಭೆಯು ತೀರ್ಮಾನ ಮಾಡಿದೆ ಎಂದು ತಿಳಿಸಿದರು.

ಧರ್ಮಸ್ಥಳ ವಿಷಯದಲ್ಲಿ ಹತ್ತಾರು ಮುಸುಕುಧಾರಿಗಳು

ಧರ್ಮಸ್ಥಳಕ್ಕೆ ಸಂಬಂಧಿಸಿ ಎಸ್‍ಐಟಿ ತನಿಖೆಯಲ್ಲಿ ಬಿಜೆಪಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ನಾವು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ತನಿಖೆ ಮತ್ತು ತನಿಖೆ ಹೆಸರಿನಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರದ ಅವಹೇಳನ ಮಾಡಬಾರದು. ಅಪಪ್ರಚಾರ ಮಾಡಬಾರದು ಎಂಬುದು ಬಿಜೆಪಿ ನಿಲುವು. ಇದೊಂದು ವ್ಯವಸ್ಥಿತ ಷಡ್ಯಂತ್ರ ಎಂದು ನಾವು ಹೇಳಿದ್ದು, ಉಪ ಮುಖ್ಯಮಂತ್ರಿಗಳೂ ಇದನ್ನು ಒಪ್ಪಿಕೊಂಡಿದ್ದಾರೆ. ಇದರ ಹಿಂದಿನ ಶಕ್ತಿಗಳನ್ನು ಎಸ್‍ಐಟಿ ಪತ್ತೆ ಹಚ್ಚುವ ವಿಶ್ವಾಸ ನಮಗಿದೆ ಎಂದು ಹೇಳಿದರು.

ಇದರಲ್ಲಿ ಒಬ್ಬ ಮುಸುಕುಧಾರಿಯಲ್ಲ; ಹತ್ತಾರು ಜನರು ಮುಸುಕುಧಾರಿಗಳಾಗಿ ಕೆಲಸ ಮಾಡಿದ್ದಾರೆಂದು ನಾನು ಸದನದಲ್ಲೂ ಹೇಳಿದ್ದೆ ಎಂದು ತಿಳಿಸಿದರು. ಸುಳ್ಳು ಸುದ್ದಿ ಹರಡಿಸಿದವರು ಯಾರು? ಪಿತೂರಿ ಮಾಡಿದ್ದು ಯಾರು? – ಇವೆಲ್ಲವೂ ತನಿಖೆಯಿಂದ ಗೊತ್ತಾಗಬೇಕಿದೆ. ಆದಷ್ಟು ಬೇಗ, ತನಿಖೆಯಿಂದ ಇವೆಲ್ಲ ಹೊರಬರಲಿ ಎಂದು ಆಗ್ರಹಿಸಿದರು.

ನಾಡಹಬ್ಬ ದಸರಾವನ್ನು ನಾಡಿನ ಜನರು ಅತ್ಯಂತ ಶ್ರದ್ಧಾಭಕ್ತಿಯಿಂದ ಗೌರವಿಸುವ- ಪೂಜಿಸುವ ಒಂದು ಸಂಸ್ಕೃತಿ. ಇದರ ಉದ್ಘಾಟನೆ ಹೇಗಾಗಬೇಕೆಂದು ಒಂದು ಜವಾಬ್ದಾರಿಯುತ ಸರ್ಕಾರ ಇವತ್ತು ತೀರ್ಮಾನ ಮಾಡಬೇಕು. ಇಸ್ಲಾಂನಲ್ಲಿ ವಿಗ್ರಹ ಪೂಜೆಗೆ ಅವಕಾಶ ಇದ್ದರೆ, ಅದನ್ನು ಬಾನು ಮುಷ್ತಾಕ್ ಅವರು ಒಪ್ಪಿಕೊಳ್ಳುವುದಾದರೆ ನಮ್ಮದೇನೂ ಅಭ್ಯಂತರ ಇಲ್ಲ ಎಂದು ಹೇಳಿದರು.

ಒತ್ತಡ ಬಿತ್ತೆಂಬ ಕಾರಣಕ್ಕೆ ಕ್ಷಮೆ ಕೇಳಿದ್ದಾರೆ

ಡಿ.ಕೆ.ಶಿವಕುಮಾರ್ ಅವರು ಸಂಘದ ಪ್ರಾರ್ಥನೆ ಹೇಳಿದ್ದು, ಇನ್ಯಾರದೋ ಒತ್ತಡ ಬಿತ್ತೆಂಬ ಕಾರಣಕ್ಕೆ ಕ್ಷಮೆ ಕೇಳಿದ್ದು, ಅತ್ಯಂತ ದುರಂತದ ಸಂಗತಿ ಎಂದರು. ನೀವು ಗಾಂಧಿ ಕುಟುಂಬಕ್ಕೆ ನಿಷ್ಠರಾಗಬೇಕೆಂದಲ್ಲ; ಸಂಘದ ಪ್ರಾರ್ಥನೆ ದೇಶಭಕ್ತಿಯನ್ನು ಹೇಳಿಕೊಡುತ್ತದೆ. ನೀವು ಮೊದಲು ದೇಶಭಕ್ತರಾಗಿ ಎಂದು ಅವರು ತಿಳಿಸಿದರು. ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಹೇಳಿದ್ದಕ್ಕೆ ಡಿ.ಕೆ.ಶಿವಕುಮಾರ್ ಅವರು ಕ್ಷಮೆ ಕೇಳಬೇಕಿತ್ತು. ಜಾರಕಿಹೊಳಿ ಅವರು ಹಿಂದೂ ಶಬ್ದ ಅಶ್ಲೀಲ ಎಂದುದಕ್ಕೆ ಕ್ಷಮೆ ಕೇಳಬೇಕಿತ್ತು. ಆರೆಸ್ಸೆಸ್ ಪ್ರಾರ್ಥನೆ ಹೇಳಿದ್ದಕ್ಕೆ ಕ್ಷಮೆ ಕೇಳಬೇಕಿರಲಿಲ್ಲ ಎಂದು ತಿಳಿಸಿದರು.‌

ಈ ಸುದ್ದಿಯನ್ನೂ ಓದಿ | Intelligence Bureau Recruitment 2025: ಗುಪ್ತಚರ ಇಲಾಖೆಯಲ್ಲಿದೆ 394 ಹುದ್ದೆ; ಡಿಪ್ಲೊಮಾ ವಿದ್ಯಾರ್ಹತೆ ಹೊಂದಿದವರು ಅಪ್ಲೈ ಮಾಡಿ

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಕೇಶವ್ ಪ್ರಸಾದ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ರಾಜ್ಯ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್, ಪ್ರಮುಖರು ಇದ್ದರು.