ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸರಳ ಚಾರಣಕ್ಕೆ ಸೂಕ್ತ ತಾಣ

ಸರಳ ಚಾರಣಕ್ಕೆ ಸೂಕ್ತ ತಾಣ

ಶಶಾಂಕ್ ಮುದೂರಿ ನಮ್ಮ ಜನರಿಗೆ ಒಂದು ವಿಚಿತ್ರ ಖಯಾಲಿ ಇದೆ. ಉದ್ದನೆಯ ಹೆಸರುಗಳಿರುವ ಸ್ಥಳಗಳನ್ನು ನಿರ್ದಾಕ್ಷಿಣ್ಯವಾಗಿ ಹೃಸ್ವಗೊಳಿಸಿ, ಬೇರೊಂದೇ ಅರ್ಥ ಬರುವ ಹೆಸರಿನಿಂದ ಕರೆಯುವುದು. ಇಂತಹ ಚಾಳಿಗೆ ಬಲಿಯಾದ ಸುಂದರ ಸ್ಥಳ ಎಸ್‌ಆರ್‌ಎಸ್ ಹಿಲ್‌ಸ್‌‌ಗೆ ಪ್ರವಾಸವೆಂದರೆ ಅದೊಂದು ಮನೋಲ್ಲಾಸದಾಯಕ  ಪಯಣ. ಅಂದ ಹಾಗೆ ಎಸ್‌ಆರ್‌ಎಸ್ ಹಿಲ್‌ಸ್‌ ಎಂದರೆ ಶ್ರೀ ರೇವಣಸಿದ್ದೇಶ್ವರ ಬೆಟ್ಟ! ಸಮುದ್ರ ಮಟ್ಟದಿಂದ ಸುಮಾರು 3,066 ಅಡಿ ಎತ್ತರವಿರುವ ರೇವಣ ಸಿದ್ದೇಶ್ವರ ಬೆಟ್ಟವು ಒಂದು ಬೃಹತ್ ಶಿಲಾಸ್ವರೂಪವನ್ನು ಮೈಗೂಡಿಸಿಕೊಂಡಿರುವ ತಾಣ. ರಾಮನಗರದಿಂದ ಸುಮಾರು 12 ಕಿಮೀ ದೂರದಲ್ಲಿರುವ ಈ ಬಂಡೆಗೆ ಲಘು ಚಾರಣ ಮಾಡುವ ಅನುಭವ, ದೇಹಕ್ಕೂ ಮನಸ್ಸಿಗೂ ಸಂತಸ ನೀಡಬಲ್ಲದು. ರೇವಣ ಸಿದ್ದೇಶ್ವರ ಎಂಬ ಮುನಿಯು ಈ ಬಂಡೆಯ ತುದಿಯಲ್ಲಿರುವ ಕಡಿದಾದ ಇಳುಕಲಿ ನಲ್ಲಿರುವ ಗುಹೆಯಲ್ಲಿ ತಪಸ್ಸು ಮಾಡಿದ್ದರಿಂದ ಈ ಹೆಸರನ್ನು ಹೊತ್ತಿದೆ. ಆ ಮುನಿಗೆ ಶಿಖರದ ಇಳುಕಲಿನಲ್ಲಿ ಪುಟ್ಟ ಗುಡಿಯೂ ಇದೆ. ಅದು ಸ್ಥಳೀಯ ಭಕ್ತರ ನೆಚ್ಚನ ತಾಣ. ಲಘು ಚಾರಣ ಒಂದು ಬೆಟ್ಟವನ್ನಾಗಿ ಇದನ್ನು ನೋಡಿದರೆ, ಉತ್ತಮ ಲಘು ಚಾರಣಕ್ಕೆ ಹೇಳಿ ಮಾಡಿಸಿದ ಬಂಡೆ ಇದು. ಬಂಡೆಯ ತಳದ ತನಕವೂ ವಾಹನ ಸಂಚಾರವಿದೆ. ನಂತರ ದೇಗುಲದ ಸುರಕ್ಷಿತ ಆವರಣದಲ್ಲಿ ನಡೆಯಲು ಆರಂಭಿಸಿದರೆ, ಕೊನೆಯ ತನಕವೂ ಶಿಲಾ ಪಾವಟಿಗೆಗಳ ಮಾರ್ಗದರ್ಶನ ಲಭ್ಯ. ಇಲ್ಲಿರುವ ಸಾವಿರಕ್ಕೂ ಹೆಚ್ಚಿನ ಮೆಟ್ಟಿಲುಗಳಲ್ಲಿ ಕೆಲವು ಮಾತ್ರ ಕಡಿದಾಗಿವೆ, ಬಹುಪಾಲು ಎಲ್ಲವೂ ಚಿಕ್ಕ ಚಿಕ್ಕ ಮೆಟ್ಟಿಲುಗಳು. ಕೊನೆಯ ತನಕವೂ ಕಬ್ಬಿಣದ ಕೈಪಿಡಿ, ಫೈಬರ್ ಹಾಳೆಗಳ ನೆರಳು ಇರುವುದು ಸುರಕ್ಷಿತ ಭಾವನೆ ನೀಡುತ್ತದೆ. ನಡು ನಡುವೆ ಒಂದೆರಡು ಕಡೆ ಸಾಕಷ್ಟು ಕಡಿದಾಗಿ ಮೇಲೇರುವ ದಾರಿಯು ಸಣ್ಣಗೆ ಬೆವರು ಬರಿಸಿದರೂ, ಕಲ್ಲಿನಲ್ಲೇ ಕಡಿದ ಮೆಟ್ಟಿಲುಗಳು ಮತ್ತು ಎರಡೂ ಕಡೆ ಇರುವ ಕಬ್ಬಿಣದ ಸರಳುಗಳ ರಕ್ಷಣೆಯು ಮೇಲೇರಲು ಸಹಾಯ ಮಾಡುತ್ತವೆ. ತುದಿಯಲ್ಲಿ ಸ್ವಲ್ಪವೇ ವಿಶಾಲ ಎನ್ನಬಹುದಾದ ಬಂಡೆಯ ಹಾಸು. ಇಡೀ ಬೆಟ್ಟವೇ ವಿಭಿನ್ನ ವಿನ್ಯಾಸದ ಬೃಹತ್ ಬಂಡೆಗಳನ್ನೇ ಮೈಗೂಡಿಸಿಕೊಂಡ, ಕುತೂಹಲಕಾರಿ ಸ್ಥಳ. ಶಿಖರದಿಂದ ಸುತ್ತಲೂ ಕಾಣುವ ನೋಟ ಚೇತೋಹಾರಿ. ಅಲ್ಲಿ ಎರಡು ಪುಟ್ಟ ಗುಡಿಯಂತಹ ರಚನೆಗಳಿವೆ. ತುದಿಯಿಂದ ಸ್ವಲ್ಪ ಕೆಳಗಿಳಿಯಲು ಮತ್ತೆ ಪಾವಟಿಗೆಗಳ ರಕ್ಷಣೆ. ಅಲ್ಲಿ ಒಂದು ಕೊರಕಲಿನಲ್ಲಿ ಚಿಕ್ಕ ಗುಹೆಯಂತಹ ರಚನೆ, ಅಲ್ಲೇ ರೇವಣ ಸಿದ್ದೇಶ್ವರ ಮುನಿ ಧ್ಯಾನ ಮಾಡಿದರು ಎಂಬ ನಂಬಿಕೆ. ಭಕ್ತರು ಅಲ್ಲಿ ನಿರ್ಮಿಸಿರುವ ಪುಟ್ಟ ಗುಡಿಯಲ್ಲಿ ಕುಳಿತು ನಾವೂ ಧ್ಯಾನಾಸಕ್ತರಾಗಬಹುದು, ಪ್ರಕೃತಿಯ ವೈವಿಧ್ಯತೆಯನ್ನು ಬೆರಗುಗಣ್ಣಿನಿಂದ ನೋಡಬಹುದು. ಬೆಂಗಳೂರಿನಿಂದ ಒಂದು ದಿನ ಪ್ರವಾಸ ಮತ್ತು ಲಘು ಚಾರಣಕ್ಕೆ ಸೂಕ್ತ ಎನಿಸುವ ರೇವಣ ಸಿದ್ದೇಶ್ವರ ಬೆಟ್ಟವನ್ನು ಏರಿ, ಅಲ್ಲಿಂದ ಕಾಣುವ ಹತ್ತಾರು ಬೃಹತ್ ಬಂಡೆಗಳನ್ನು ಕಂಡು, ಮನಸ್ಸಿನಲ್ಲಿ ಒಂದು ಸ್ಫೂರ್ತಿ ಮೂಡಲೂ ಬಹುದು! ಶಿಖರದಿಂದ ಕಾಣುವ ಎಲ್ಲಾ ಬಂಡೆಗಳನ್ನೂ ಒಂದೊಂದಾಗಿ ಏರುಲು ಸ್ಫೂರ್ತಿ ಉಕ್ಕಿಸುವ ಸ್ಥಳ ಇದು. ಸರಳ ಸುಂದರ ಚಾರಣಕ್ಕೆ ಹೇಳಿ ಮಾಡಿಸಿದ ಜಾಗವಿದು.