ಬೆಂಗಳೂರು: ಶ್ರೀಕೃಷ್ಣನ ಜನ್ಮ ದಿನವನ್ನು ಕೃಷ್ಣ ಜನ್ಮಾಷ್ಟಮಿ (Krishna Janmashtami) ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಅದರಲ್ಲೂ ಹಿಂದೂ ಧರ್ಮದಲ್ಲಿ ಇದನ್ನು ಪವಿತ್ರ ಹಬ್ಬ ಎಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ಭಕ್ತಿ ಪೂರ್ವಕವಾಗಿ ಆಚರಿಸಲಾಗುತ್ತದೆ. ಈ ದಿನದಂದು ಶ್ರೀ ಕೃಷ್ಣನನ್ನು ಪೂಜಿಸಿ ವ್ರತವನ್ನು ಆಚರಿಸುವುದರಿಂದ ಶ್ರೀಕೃಷ್ಣನು ಅಂದುಕೊಂಡ ಎಲ್ಲ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂದು ನಂಬಿಕೆ ಇದೆ. ಹಾಗಾಗಿ ಹೆಚ್ಚಿನ ಹಿಂದು ಮನೆಗಳಲ್ಲಿ ಇಂದು ಶ್ರೀ ಕೃಷ್ಣನನ್ನು ಆರಾಧಿಸಲಾಗುತ್ತದೆ. ಈ ವರ್ಷ ಕೃಷ್ಣ ಜನ್ಮಾಷ್ಟಮಿಯನ್ನು ಆಗಸ್ಟ್ 16ರಂದು ಆಚರಿಸಲಾಗುತ್ತಿದೆ. ಕೃಷ್ಣನ ಪೂಜಾ ವಿಧಿ ವಿಧಾನಗಳು ಹೇಗೆ ಇರಬೇಕು? ಎನ್ನುವ ಮಾಹಿತಿ ಇಲ್ಲಿದೆ.
ಹಿಂದೂ ಪುರಾಣಗಳ ಪ್ರಕಾರ ಈ ದಿನ ಮಹತ್ವದ್ದಾಗಿದೆ. ಶ್ರೀ ಕೃಷ್ಣನ ಭಕ್ತರು ಈ ದಿನದ ವಿಶೇಷವಾಗಿ ಕೃಷ್ಣನ ದೇಗುಲಗಳಿಗೆ ಭೇಟಿ ನೀಡುತ್ತಾರೆ. ಕೃಷ್ಣ ಜನ್ಮಾಷ್ಟಮಿಯನ್ನು ಗೋಕುಲಾಷ್ಟಮಿ, ಕನ್ಹಯ್ಯ ಅಷ್ಟಮಿ, ಶ್ರೀ ಕೃಷ್ಣ ಜಯಂತಿ, ಶ್ರೀ ಜಯಂತಿ ಸೇರಿದಂತೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ವಿಷ್ಣುವಿನ ಎಂಟನೇ ಅವತಾರವಾದ ಶ್ರೀಕೃಷ್ಣನ ಜನ್ಮದಿನವನ್ನು ಈ ದಿನ ಆಚರಿಸಲಾಗುತ್ತದೆ. ಅದರಲ್ಲೂ ಭಾರತದಲ್ಲಿ ಕೃಷ್ಣ ಜನ್ಮಾಷ್ಟಮಿಯಂದು ದೇವಾಲಯಗಳನ್ನು ಅಲಂಕರಿಸಲಾಗುತ್ತದೆ.
ದೇವಕಿ ಮತ್ತು ವಾಸುದೇವ ದಂಪತಿಯ ಎಂಟನೇ ಮಗುವಾಗಿ ಶ್ರೀಕೃಷ್ಣನು ಜನಿಸುತ್ತಾನೆ. ದೇವಕಿಯ ಸಹೋದರನಾದ ಕಂಸನು, ತನ್ನ ತಂಗಿಯ ಎಂಟನೇ ಮಗನಿಂದ ತನಗೆ ಮರಣ ಉಂಟಾ ಗಲಿದೆ ಎಂಬ ಭವಿಷ್ಯವಾಣಿಯನ್ನು ಕೇಳಿ, ದೇವಕಿ ಮತ್ತು ವಾಸುದೇವ ಅವರನ್ನು ಜೈಲಿಗೆ ಅಟ್ಟುತ್ತಾನೆ. ಕಂಸನು ದೇವಕಿ ಮತ್ತು ವಾಸುದೇವರ ಏಳು ಮಕ್ಕಳನ್ನು ಹುಟ್ಟಿದ ತಕ್ಷಣವೇ ಕೊಲ್ಲುತ್ತಾನೆ. ಆದರೆ ಎಂಟನೇ ಮಗುವಾಗಿ ಶ್ರೀಕೃಷ್ಣನು ಹುಟ್ಟಿದಾಗ, ವಾಸುದೇವನು ಜೈಲಿನಿಂದ ಹೊರಬಂದು, ಯಮುನಾ ನದಿಯನ್ನು ದಾಟಿ, ಮಗುವನ್ನು ಗೋಕುಲದಲ್ಲಿರುವ ನಂದ ಮತ್ತು ಯಶೋದೆ ದಂಪತಿ ಮನೆಗೆ ಕರೆದೊಯ್ಯುದ್ದು ರಕ್ಷಿಸುತ್ತಾನೆ. ಹೀಗೆ, ಕೃಷ್ಣನು ಗೋಕುಲದಲ್ಲಿ ಯಶೋದೆ ಮತ್ತು ನಂದನರ ಮಗನಾಗಿ ಬೆಳೆಯುತ್ತಾನೆ ಎನ್ನುವ ಉಲ್ಲೇಖ ಪುರಾಣದಲ್ಲಿ ಇದೆ.
ಇದನ್ನು ಓದಿ:Krishna janmastami 2025: ಕೃಷ್ಣ ಜನ್ಮಾಷ್ಟಮಿ ಸಂಭ್ರಮಕ್ಕೆ ಸಾಂಪ್ರದಾಯಿಕ ಉಡುಗೆ ಸಾಥ್
ಪೂಜೆ ವಿಧಿ ವಿಧಾನ ಹೇಗೆ?
ಮನೆಯಲ್ಲಿ ಸ್ವಚ್ಛ ಸ್ಥಳವನ್ನು ಆರಿಸಿ. ಸಣ್ಣ ಚೌಕಿ ಅಥವಾ ಟೇಬಲ್ ಮೇಲೆ ಶುದ್ಧ ಬಟ್ಟೆಯನ್ನು ಹರಡಿ ಅದರ ಮೇಲೆ ಶ್ರೀಕೃಷ್ಣನ ವಿಗ್ರಹ ಅಥವಾ ಚಿತ್ರ ಇಡಬಹುದು. ಹೂವುಗಳು ಮತ್ತು ಎಲೆಗಳಿಂದ ಸುತ್ತಲೂ ಅಲಂಕರಿಸಿ. ಮೊಸರು, ತುಪ್ಪ, ಜೇನುತುಪ್ಪದಿಂದ ಅಭಿಷೇಕ ಮಾಡಿ ಪೂಜೆ ನೆರವೇರಿಸಿ. ಕೃಷ್ಣಾಷ್ಟಮಿಯ ದಿನ ಮುಂಜಾನೆ ಬೇಗ ಎದ್ದು ಶುದ್ಧವಾಗಿ ಸ್ನಾನ ಮಾಡಿ. ಬಾಗಿಲಿಗೆ ತೋರಣ, ಮುಖ ಮಂಟಪದಲ್ಲಿ ಕುಂಕುಮ, ರಂಗೋಲಿಯನ್ನ ಹಾಕಿ ಪೂಜೆಗೆ ಸಿದ್ಧವಾಗಬೇಕು. ಕೃಷ್ಣ ಜನ್ಮಾಷ್ಟಮಿ ದಿನದಂದು ಕೃಷ್ಣನನ್ನು ಪೂಜಿಸುವುದು ಮಾತ್ರವಲ್ಲದೇ ಆತನಿಗೆ ಇಷ್ಟವಾದ ವಸ್ತುಗಳನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಇದರೊಂದಿಗೆ ಶ್ರೀಕೃಷ್ಣನ ವಿವಿಧ ಮಂತ್ರಗಳನ್ನು, ಸ್ತೋತ್ರಗಳನ್ನು ಪಠಿಸಿ ಬೇಕಾದ ಆಸೆ ಈಡೇರಿಕೆಯನ್ನು ಬೇಡಿಕೊಳ್ಳಲಾಗುತ್ತದೆ.
ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ಮುಹೂರ್ತ ಯಾವಾಗ ಇರಲಿದೆ?
ದಿನದ ಪೂಜೆಗೆ ಶುಭ ಮುಹೂರ್ತವು ತುಂಬಾನೇ ಅಗತ್ಯವಾಗಿದ್ದು ಈ ವರ್ಷ 2025ರ ಆಗಸ್ಟ್ 16ರಂದು ಶನಿವಾರ ಅಷ್ಟಮಿ ತಿಥಿ ಆರಂಭವಾಗಲಿದೆ. ಕೃಷ್ಣ ಜನ್ಮಾಷ್ಟಮಿಯ ಅಷ್ಟಮಿ ತಿಥಿ ಆಗಸ್ಟ್ 15ರಂದು ರಾತ್ರಿ 11:49ಕ್ಕೆ ಆರಂಭ ಆಗಿ ಆಗಸ್ಟ್ 16ರಂದು ರಾತ್ರಿ 9:34ಕ್ಕೆ ಕೊನೆ ಆಗಲಿದೆ. ಕೃಷ್ಣಾ ಜನ್ಮಾಷ್ಟಮಿಯ ಪೂಜೆ ಮಾಡುವ ಸಮಯ ಆಗಸ್ಟ್ 16ರಂದು ಮಧ್ಯಾಹ್ನ 12:04ಕ್ಕೆ ಪ್ರಾರಂಭವಾಗಿ 12:47ಕ್ಕೆ ಕೊನೆಗೊಳ್ಳುತ್ತದೆ. ಈ ದಿನದಂದು ಮಧ್ಯರಾತ್ರಿಯ ಸಮಯದಲ್ಲಿ ಶ್ರೀಕೃಷ್ಣನನ್ನು ಪೂಜಿಸಿದರೆ ಇಷ್ಟಾರ್ತ ನೆರವೇರುತ್ತದೆ.