ಬೆಂಗಳೂರು: ನವರಾತ್ರಿಯ (Navaratri 2025) ಆರನೇ ದಿನ ದುರ್ಗಾ ದೇವಿಯ (Durga devi) ಒಂಬತ್ತು ಅವತಾರಗಳಲ್ಲಿ ಒಂದಾದ ಕಾತ್ಯಾಯಿನಿ ದೇವಿಯನ್ನು (Katyayani Devi) ಪೂಜಿಸಲಾಗುತ್ತದೆ. ಶಕ್ತಿ ಮತ್ತು ದೃಢ ನಿರ್ಧಾರದ ಪ್ರತಿಬಿಂಬವಾಗಿರುವ ಈಕೆ ನಾಲ್ಕು ತೋಳುಗಳನ್ನು ಹೊಂದಿದ್ದು, ಒಂದು ಕೈಯಲ್ಲಿ ಉದ್ದವಾದ ಖಡ್ಗವನ್ನು ಹಿಡಿದಿದ್ದರೆ ಇನ್ನೊಂದು ಕೈಯಲ್ಲಿ ಕಮಲ ಹಾಗೂ ಮತ್ತೆರಡು ಕೈಗಳು ಅಭಯ ಮುದ್ರೆಯಲ್ಲಿದೆ. ಸಿಂಹವನ್ನು (Lion) ವಾಹನವಾಗಿರಿಸಿಕೊಂಡಿರುವ ಈಕೆ ದುರ್ಗಾ ದೇವಿಯ ಅತ್ಯಂತ ಪೂಜ್ಯನೀಯ ರೂಪವಾಗಿದೆ. ಮಹಿಷಾಸುರನ ಸಂಹಾರಕ್ಕಾಗಿ ಈಕೆಯನ್ನು ತ್ರಿಮೂರ್ತಿಗಳು ಸೃಷ್ಟಿಸಿದರು ಎನ್ನಲಾಗುತ್ತದೆ.
ಹಿನ್ನೆಲೆ
ಕಟ್ ಎಂಬ ಋಷಿಗೆ ಕಾತ್ಯ ಎಂಬ ಮಗನಿದ್ದ. ಅವರ ವಂಶಸ್ಥನಾಗಿ ಜನಿಸಿದ ಕಾತ್ಯಾಯನ ಎಂಬ ಋಷಿಗೆ ಸಂತಾನವಿರಲಿಲ್ಲ. ಹೀಗಾಗಿ ಅವರು ಕಠಿಣ ತಪಸ್ಸು ಮಾಡಿ ಮಗುವಿಗಾಗಿ ದೇವತೆಗಳನ್ನು ಪೂಜಿಸಿದರು. ಈ ನಡುವೆ ರಾಕ್ಷಸ ಮಹಿಷಾಸುರನು ಹಾವಳಿ ಹೆಚ್ಚಾಗುತ್ತಿತ್ತು. ಅವನ ಸಂಹಾರಕ್ಕಾಗಿ ತ್ರಿಮೂರ್ತಿಗಳು ಒಟ್ಟಾಗಿ ದೇವಿ ಕಾತ್ಯಾಯನಿ ರೂಪದ ಜ್ವಾಲೆಗಳನ್ನು ಹೊರಸೂಸಿದರು. ದುರ್ಗೆಯ ರೂಪ ತಾಳಿದ ದೇವಿಯು ಮುಂದೆ ಋಷಿ ಕಾತ್ಯಾಯನನ ಮಗಳಾಗಿ ಜನಿಸಿದಳು. ಹೀಗಾಗಿ ಆಕೆಗೆ ಕಾತ್ಯಾಯಿನಿ ಎನ್ನುವ ಹೆಸರು ಬಂದಿತ್ತು. ಮಹಿಷಾಸುರನನ್ನು ಕೊಲ್ಲಲು ಆಕೆಗೆ ದೇವತೆಗಳು ಹಲವಾರು ಆಯುಧಗಳನ್ನು ನೀಡಿದರು. ಶಸ್ತ್ರಸಜ್ಜಿತಳಾದ ಕಾತ್ಯಾಯಿನಿ ದೇವಿಯು ಮಹಿಷಾಸುರ ವಾಸಿಸುತ್ತಿದ್ದ ವಿಂಧ್ಯ ಪರ್ವತಕ್ಕೆ ಸಾಗಿ ಆತನೊಂದಿಗೆ ಯುದ್ಧ ಮಾಡಿ ಸಂಹರಿಸಿದಳು. ಬಳಿಕ ಆಕೆಗೆ ಮಹಿಷಾಸುರಮರ್ದಿನಿ ಎನ್ನುವ ಹೆಸರು ಬಂತು.
ಭಾಗವತ ಪುರಾಣದಲ್ಲಿ ಬರುವ ಕಥೆಯ ಪ್ರಕಾರ ಗೋಕುಲದಲ್ಲಿ ಹುಡುಗಿಯರು ಮಾರ್ಗಶಿರ್ಷ ಮಾಸದುದ್ದಕ್ಕೂ ಉಪವಾಸ ನಡೆಸಿ ಶ್ರೀಕೃಷ್ಣನು ತಮ್ಮ ಪತ್ನಿಯಾಗಿ ಪಡೆಯಬೇಕೆಂದು ಕಾತ್ಯಾಯಿನಿ ದೇವಿಯನ್ನು ಪ್ರಾರ್ಥಿಸಿದರು. ಅವರು ಜೇಡಿಮಣ್ಣಿನಿಂದ ದೇವಿಯ ವಿಗ್ರಹವನ್ನು ಮಾಡಿ ಪೂಜಿಸಿದರು. ಈ ಸಂಪ್ರದಾಯ ಇಂದಿಗೂ ಮುಂದುವರೆದಿದೆ.
ಆರಾಧನೆಯಿಂದ ಏನು ಫಲ?
ದುರ್ಗಾ ದೇವಿಯ ಒಂಬತ್ತು ರೂಪಗಳಲ್ಲಿ ಒಂದಾದ ಕಾತ್ಯಾಯಿನಿ ದೇವಿಯ ಆರಾಧನೆಯಿಂದ ಅಹಂಕಾರ ವಿನಾಶವಾಗುತ್ತದೆ ಎನ್ನುವ ನಂಬಿಕೆ ಇದೆ. ಅವಿವಾಹಿತ ಹುಡುಗಿಯರು ದೇವಿ ಕಾತ್ಯಾಯಿನಿ ಆರಾಧನೆ ಮಾಡಿದರೆ ಅವರಿಗೆ ಅವರ ಇಚ್ಚೆಯಂತ ಜೀವನ ಸಂಗಾತಿ ದೊರೆಯುತ್ತಾರೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿದ್ದರೆ ಕಾತ್ಯಾಯನಿ ದೇವಿಯನ್ನು ಆರಾಧಿಸಿ ಸಮಸ್ಯೆಗಳನ್ನು ದೂರ ಮಾಡಬಹುದಾಗಿದೆ ಎನ್ನುವ ನಂಬಿಕೆ ಇದೆ.
ದೇವಿ ಕಾತ್ಯಾಯಿನಿ ಪೂಜೆಯಿಂದ ವಿವಾಹಕ್ಕೆ ಎದುರಾಗುವ ಅಡೆತಡೆಗಳು ದೂರವಾಗುವುದು, ವೈವಾಹಿಕ ಜೀವನದಲ್ಲಿ ಸಾಮರಸ್ಯ ಮತ್ತು ಶಾಂತಿ ವೃದ್ಧಿಯಾಗುವುದು, ಜನ್ಮ ಕುಂಡಲಿಯಲ್ಲಿರುವ ಮಂಗಲಿಕ ದೋಷ ನಿವಾರಣೆಯಾಗುವುದು, ಉನ್ನತ ಶಿಕ್ಷಣ ಮತ್ತು ವೃತ್ತಿಪರ ಜೀವನದಲ್ಲಿ ಯಶಸ್ಸು ದೊರೆಯುವುದು ಎನ್ನಲಾಗುತ್ತದೆ.
ದೇವಿ ಕಾತ್ಯಾಯಿನಿ ದೇವಸ್ಥಾನ
ಭಾರತದಲ್ಲಿ ಹಲವಾರು ಸ್ಥಳಗಳಲ್ಲಿ ದೇವಿ ಕಾತ್ಯಾಯನಿ ದೇವಸ್ಥಾನವಿದೆ. ಇವುಗಳಲ್ಲಿ ಅತ್ಯಂತ ಪ್ರಸಿದ್ಧವಾಗಿರುವುದು ಗುಜರಾತ್‌ನ ಬಕೋರ್ ಮತ್ತು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿರುವ ಕಾತ್ಯಾಯಿನಿ ದೇವಿ ದೇವಸ್ಥಾನ. ಬಕೋರ್ ನಲ್ಲಿರುವ ದೇವಾಲಯವು ಉತ್ತರ ಭಾರತೀಯ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲ್ಪಟ್ಟಿದ್ದು, ಅಮೃತಶಿಲೆಗಳಿಂದ ಅಲಂಕರಿಸಲ್ಪಟ್ಟಿದೆ. ಇದರ ಮುಖ್ಯ ಆಕರ್ಷಣೆ ಕಾತ್ಯಾಯನಿ ದೇವಿಯ ಏಕೈಕ ಕಲ್ಲಿನ ವಿಗ್ರಹವಾಗಿದೆ.
ಇದನ್ನೂ ಓದಿ: Navaratri Fashion 2025: ನವರಾತ್ರಿಯಲ್ಲಿ ಕೆಂಪು ವರ್ಣದ ಕಮಾಲ್!
ಕೊಲ್ಲಾಪುರದ ದೇವಾಲಯವು ಭವ್ಯ ವಾಸ್ತುಶಿಲ್ಪ, ಸಂಕೀರ್ಣ ಕೆತ್ತನೆಗಳು ಮತ್ತು ಅಲಂಕಾರಿಕ ವಿನ್ಯಾಸಗಳಿಗೆ ಹೆಸರುವಾಸಿಯಾಗಿದೆ.